ಡೊನಾಲ್ಡ್ ಟ್ರಂಪ್ ದಂಪತಿ ಜೊತೆಗಿರುವ ಮಹಿಳೆ ಯಾರು?
ಬೆಂಗಳೂರು, ಫೆಬ್ರವರಿ 24 : ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎರಡು ದಿನದ ಭಾರತ ಪ್ರವಾಸದಲ್ಲಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಅವರು ಸೋಮವಾರ ಬೆಳಗ್ಗೆ ಬಂದಿಳಿದರು. ಟ್ರಂಪ್ ಭಾರತಕ್ಕೆ ಬಂದ ಚಿತ್ರಗಳು ವೈರಲ್ ಆಗಿವೆ. ಟ್ರಂಪ್ ದಂಪತಿ ಜೊತೆ ಮಹಿಳೆಯೊಬ್ಬರಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಜೊತೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಮಹಿಳೆ ಯಾರು? ಎಂಬುದು ಹಲವರಲ್ಲಿ ಕುತೂಹಲ ಮೂಡಿಸಿದೆ. ಟ್ರಂಪ್ ದಂಪತಿ ಜೊತೆ ಇರುವ ಮಹಿಳೆ ಗುರ್ದೀಪ್ ಚಾವ್ಲಾ.
ಭಾರತ ಮೂಲದ ಗುರ್ದೀಪ್ ಚಾವ್ಲಾ ಅಮೆರಿಕದಲ್ಲಿ ನೆಲೆಸಿದ್ದಾರೆ. ಅಮೆರಿಕ ಅಧ್ಯಕ್ಷರ ಭಾರತ ಭೇಟಿಯಲ್ಲಿ ಅವರು ದುಭಾಷಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. 1990ರಲ್ಲಿ ಭಾರತದ ಸಂಸತ್‌ನಲ್ಲಿ ಕೆಲಸ ಆರಂಭಿಸಿದ ಅವರು ಪ್ರಸ್ತುತ ಅಮೆರಿಕದಲ್ಲಿದ್ದಾರೆ.

ಅಮೆರಿಕ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಅಥವ ಭಾರತದ ಪ್ರಧಾನಿ ಅಮೆರಿಕಕ್ಕೆ ಭೇಟಿ ಕೊಟ್ಟಾಗ ದುಭಾಷಿಯಾಗಿ ಗುರ್ದೀಪ್ ಚಾವ್ಲಾ ಕಾರ್ಯ ನಿರ್ವಹಣೆ ಮಾಡುತ್ತಾರೆ. ಟ್ರಂಪ್ ದಂಪತಿ ಜೊತೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅವರು ಸಬರಮತಿ ಆಶ್ರಮಕ್ಕೆ ತೆರಳಿದ್ದರು.
2015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಬಂದಾಗಲೂ ಗುರ್ದೀಪ್ ಚಾವ್ಲಾ ದುಭಾಷಿಯಾಗಿದ್ದರು. ಅಮೆರಿಕ, ಕೆನಡಾ ದೇಶಗಳ ನಡುವೆ ಉನ್ನತ ಮಟ್ಟದ ರಾಜತಾಂತ್ರಿಕ ಸಭೆಗಳು ನಡೆದಾಗ ಗುರ್ದೀಪ್ ಚಾವ್ಲಾ ದುಭಾಷಿಯಾಗಿ ಕೆಲಸ ಮಾಡುತ್ತಾರೆ.
ಈಗ ಅಮೆರಿಕ ಅಧ್ಯಕ್ಷರು ಭಾರತ ಪ್ರವಾಸಕ್ಕೆ ಆಗಮಿಸಿದ್ದರಿಂದ ಗುರ್ದೀಪ್ ಚಾವ್ಲಾ ಅವರು ದುಭಾಷಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಾರೆ. ಮಂಗಳವಾರ ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಮೋದಿ ಮತ್ತು ಟ್ರಂಪ್ ನಡುವೆ ರಾಜತಾಂತ್ರಿಕ ವಿಚಾರಗಳು ಚರ್ಚೆಯಾಗಲಿದ್ದು, ಅಲ್ಲಿಯೂ ಗುರ್ದೀಪ್ ಚಾವ್ಲಾ ಇರುತ್ತಾರೆ.












Click it and Unblock the Notifications