LPG Price: ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರ ದಿಢೀರ್ ಭಾರೀ ಏರಿಕೆ: ಇಂದಿನಿಂದಲೇ ಜಾರಿ
ನವದೆಹಲಿ: ಇತ್ತೀಚೆಗಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿ ಹೋಟೆಲ್ ತಿಂಡಿ-ತಿನಿಸುಗಳು ದುಬಾರಿಯಾಗಲಿವೆ ಎಂಬ ಆತಂಕದ ಬೆನ್ನಲ್ಲೇ, ಈಗ ಜನಸಾಮಾನ್ಯರ ಅಡುಗೆಮನೆಗೂ ತೈಲ ಕಂಪನಿಗಳು ಭಾರಿ ಶಾಕ್ ನೀಡಿವೆ. ಹೌದು, ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯ ಬಿಸಿ ಆರುವ ಮುನ್ನವೇ ಇದೀಗ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಕೂಡ ದಿಢೀರ್ ಹೆಚ್ಚಿಸಲಾಗಿದೆ. ಇಂದಿನಿಂದಲೇ (ಜೂನ್ 7) ಹೊಸ ದರ ಜಾರಿಗೆ ಬಂದಿದೆ. ಹಾಗಾದರೆ ನಿಮ್ಮ ನಗರದಲ್ಲಿ ಇಂದಿನ ದರ ಎಷ್ಟಿದೆ? ಇಲ್ಲಿದೆ ಸಂಪೂರ್ಣ ವಿವರ.
ಸಾರ್ವಜನಿಕ ವಲಯದ ಸರ್ಕಾರಿ ತೈಲ ಕಂಪನಿಗಳು 14.2 ಕೆಜಿ ತೂಕದ ಮನೆಬಳಕೆಯ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 29 ರೂಪಾಯಿ ಹೆಚ್ಚಳ ಮಾಡಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ದರಗಳು ಭಾನುವಾರದಿಂದಲೇ ಜಾರಿಗೆ ಬರಲಿವೆ.

ಮೂರೇ ತಿಂಗಳಲ್ಲಿ ಎರಡನೇ ಬಾರಿ ದರ ಏರಿಕೆ
ಕಳೆದ ಮೂರು ತಿಂಗಳ ಅವಧಿಯಲ್ಲಿ ಗೃಹಬಳಕೆಯ ಸಿಲಿಂಡರ್ ದರ ಹೆಚ್ಚಳವಾಗಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೆ ಮೊದಲು ಕಳೆದ ಮಾರ್ಚ್ 7ರಂದು ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಆ ಬಳಿಕ ಈಗ ಮತ್ತೆ ₹29 ಏರಿಸಿರುವುದು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಮತ್ತಷ್ಟು ಆಘಾತ ತಂದಿದೆ.
ಪ್ರಮುಖ ನಗರಗಳಲ್ಲಿ ಹೊಸ ದರ ಎಷ್ಟು?
ದರ ಪರಿಷ್ಕರಣೆಯ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ 14.2 ಕೆಜಿಯ ಗೃಹಬಳಕೆಯ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ. ದೆಹಲಿ ಸೇರಿದಂತೆ ದೇಶದ ಎಲ್ಲ ಪ್ರಮುಖ ರಾಜ್ಯ ಹಾಗೂ ನಗರಗಳಲ್ಲೂ ಇಂದಿನಿಂದಲೇ ಈ ಪರಿಷ್ಕೃತ ದರಗಳು ಅನ್ವಯವಾಗಲಿವೆ. ರವಾನೆ ವೆಚ್ಚ ಮತ್ತು ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ವಿವಿಧ ನಗರಗಳಲ್ಲಿ ಈ ದರದಲ್ಲಿ ಅಲ್ಪ ವ್ಯತ್ಯಾಸವಿರಲಿದೆ.
ಬೆಲೆ ಏರಿಕೆಗೆ ಅಸಲಿ ಕಾರಣವೇನು?
ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಭಾಗದಲ್ಲಿ ನಡೆಯುತ್ತಿರುವ ನಿರಂತರ ರಾಜಕೀಯ ಸಂಘರ್ಷಗಳು ಮತ್ತು ಯುದ್ಧದ ವಾತಾವರಣ ಜಾಗತಿಕ ಇಂಧನ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಿವೆ. ಜಾಗತಿಕವಾಗಿ ಇಂಧನ ದರ ಹೆಚ್ಚಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಅದಕ್ಕೆ ತಕ್ಕಂತೆ ತಕ್ಷಣ ಬೆಲೆ ಏರಿಸದ ಕಾರಣ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿದ್ದವು. ಸದ್ಯ ಮಾಡಲಾಗಿರುವ ₹29ರ ಏರಿಕೆಯು ಕಂಪನಿಗಳ ನಷ್ಟವನ್ನು ಕೇವಲ ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಈ ದರ ಏರಿಕೆಯು ಮಧ್ಯಮ ವರ್ಗದ ಕುಟುಂಬಗಳ ಜೇಬಿಗೆ ದೊಡ್ಡ ಕತ್ತರಿ ಹಾಕಿರುವುದಂತೂ ಸತ್ಯ.












Click it and Unblock the Notifications