ಕೇಂದ್ರ ಸರ್ಕಾರದ ವಿರುದ್ಧ ನಿಲ್ಲದ ವೈದ್ಯರ ಪ್ರತಿಭಟನೆ
ನವದೆಹಲಿ, ಆಗಸ್ಟ್ 03: ಎನ್‌ಎಂಸಿ ಕಾಯ್ದೆಯನ್ನು ಜಾರಿ ಲೋಕಸಭೆಯಲ್ಲಿ ಮಂಡಿಸಲು ಹೊರಟಾಗಿನಿಂದಲೂ ದೇಶದಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಲೇ ಇದ್ದು, ಮಸೂದೆಯು ಎರಡೂ ಮನೆಗಳಲ್ಲಿ ಅಂಗೀಕಾರವಾದ ನಂತರವೂ ಪ್ರತಿಭಟನೆ ನಿಂತಿಲ್ಲ.
ಕೇಂದ್ರ ಸರ್ಕಾರವು ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಮಸೂದೆಯನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರವನ್ನೂ ಪಡೆದುಕೊಂಡಿದೆ. ಹಾಲಿ ಇರುವ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಬದಲಿಗೆ ಈ ಕಾಯ್ದೆಯನ್ನು ತರಲಾಗಿದೆ. ಇದು ವೈದ್ಯರ ಕಣ್ಣು ಕೆಂಪಗಾಗಿಸಿದೆ.
ದೇಶದ ಪ್ರತಿಷ್ಠಿತ ವೈಕ್ಯಕೀಯ ಸಂಸ್ಥೆಯಾದ ಏಮ್ಸ್ ಸಹ ಈ ಬಿಲ್ ಅನ್ನು ವಿರೋಧಿಸಿದೆ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಏಮ್ಸ್‌ನ ವೈದ್ಯ ಮತ್ತು ವೈದ್ಯಕೀಯ ವಿದ್ಯಾರ್ಥಿ ಸಂಘ, ಸಚಿವ ಹರ್ಷವರ್ಧನ್ ಅವರು ನೀಡಿರುವ ಸ್ಪಷ್ಟನೆಗೆ ಸ್ವಾಗತ, ಆದರೆ ನಾವು ನಮ್ಮ ನಿಲವನ್ನು ಬದಲಾಯಿಸುವುದಿಲ್ಲ, ಪ್ರತಿಭಟನೆ ಮುಂದುವರೆಯುತ್ತದೆ ಆದರೆ ಏಮ್ಸ್‌ನ ತುರ್ತು ನಿಗಾ ಘಟಕಗಳು ಸೇರಿದಂತೆ ಕೆಲವು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದಿದ್ದಾರೆ.

ಎನ್‌ಎಂಸಿ ಬಿಲ್ ಬಗ್ಗೆ ಇರುವ ಪ್ರಮುಖ ತಕರಾರೆಂದರೆ, ಆರು ತಿಂಗಳ ಕೋರ್ಸ್ ಒಂದನ್ನು ಪೂರ್ಣಗೊಳಿಸಿದ ವ್ಯಕ್ತಿ ರೋಗಿಗಳಿಗೆ ಟ್ರೀಟ್ ಮಾಡಲು ಈ ಕಾಯ್ದೆಯು ಅವಕಾಶ ಮಾಡಿಕೊಡುತ್ತಿದೆ. ಅಲ್ಲದೆ, ಆಯುರ್ವೇದ ಸೇರಿ ಇನ್ನಿತರೆ ಪದ್ಧತಿಗಳಿಗೂ ಕೋರ್ಸ್‌ಗಳನ್ನು ಮಾಡಿ ಅದನ್ನು ಕಲಿತವರು ರೋಗಿಗಳಿಗೆ ಚಿಕಿತ್ಸೆ ವೈದ್ಯರಂತೆ ಚಿಕಿತ್ಸೆ ನೀಡಬಹುದಾಗಿದೆ. ಇದಕ್ಕೆ ವೈದ್ಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಎನ್‌ಎಂಸಿ ಕಾಯ್ದೆಗೆ ವೈದ್ಯಕೀಯ ವಿದ್ಯಾರ್ಥಿಗಳೂ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಇದು ವೈದ್ಯಕೀಯ ಶಿಕ್ಷಣವನ್ನು ತಪ್ಪು ದಾರಿಗೆ ಎಳೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications