Upper Krishna Project: ಕೃಷ್ಣಾ ಮೇಲ್ದಂಡೆ ಯೋಜನೆ: ಅಪ್‌ಡೇಟ್ ಕೊಟ್ಟ ಡಿ.ಕೆ. ಶಿವಕುಮಾರ್
ನವದೆಹಲಿ, ಜೂನ್ 08: ಇದೇ ತಿಂಗಳು 18ರಂದು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರು ಈ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಭೆ ಕರೆದಿದ್ದಾರೆ. ಸಭೆಯಲ್ಲಿ ಈ ವಿಚಾರವಾಗಿ ಒಂದು ತೀರ್ಮಾನಕ್ಕೆ ಬರುವ ಭರವಸೆ ಇದೆ ಎಂದು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ನವದೆಹಲಿಯಲ್ಲಿ ಭಾನುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಾತನಾಡಿ, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಬಳಸಲಾಗುತ್ತಿರುವ ತಂತ್ರಜ್ಞಾನವನ್ನು ವೀಕ್ಷಿಸಲು ನಾನು ಹಾಗೂ ಬೆಂಗಳೂರು ಪಾಲಿಕೆಯಿಂದ ಸುಮಾರು 15 ಸದಸ್ಯರ ತಂಡ ದೆಹಲಿಗೆ ಆಗಮಿಸಿದ್ದೇವೆ. ಇಲ್ಲಿ ನಗರದ ಹೊರಭಾಗದಲ್ಲಿ ವಾಸನೆರಹಿತವಾಗಿ ತ್ಯಾಜ್ಯ ವಿಲೇವಾರಿ ಕೇಂದ್ರ ಮಾಡಿದ್ದಾರೆ ಎಂದು ಕೇಳಿದ್ದೇನೆ ಎಂದು ದೆಹಲಿ ಭೇಟಿ ಕುರಿತು ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಕಸ ವಿಲೇವಾರಿ ಸಂಬಂಧ ಟೆಂಡರ್ ಕರೆಯಲಾಗಿದ್ದು, ಕಸದಿಂದ ಇಂಧನ, ಅನಿಲ ಉತ್ಪಾದನೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದ್ದೇನೆ. ದೆಹಲಿಯಲ್ಲಿನ ತಂತ್ರಜ್ಞಾನ ಅಳವಡಿಕೆ ಬಗ್ಗೆ ನಮಗೆ ಪ್ರಸ್ತಾವನೆ ಬಂದಿದ್ದು, ಹೀಗಾಗಿ ಅದನ್ನು ವೀಕ್ಷಣೆ ಮಾಡುತ್ತೇವೆ ಎಂದು ಹೇಳಿದರು.
ದೆಹಲಿಯಲ್ಲಿ ನಗರ ಯೋಜನಾ ಪ್ರಾಧಿಕಾರದಲ್ಲಿ ರಸ್ತೆ ವಿಚಾರವಾಗಿ ಪ್ರತ್ಯೇಕ ನೀತಿ ಹೊಂದಿದ್ದು, ಇದನ್ನು ಪರಿಶೀಲನೆ ಮಾಡಲಾಗುವುದು ಎಂದರು. ಹೈಕಮಾಂಡ್ ನಾಯಕರ ಭೇಟಿಯನ್ನ ಸಧ್ಯಕ್ಕೆ ಇಲ್ಲ. ಅವರ ಸಮಯ ಸಿಕ್ಕರೆ ಭೇಟಿ ಮಾಡುತ್ತೇನೆ. 10ರಂದು ಎತ್ತಿನಹೊಳೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದಾರೆ. ಹೀಗಾಗಿ ನಾಳೆ ಸಂಜೆ ಬೆಂಗಳೂರಿಗೆ ವಾಪಸ್ಸಾಗುತ್ತೇವೆ ಎಂದು ತಿಳಿಸಿದರು.
ಇನ್ನೂ ಸುಹಾಸ್ ಶೆಟ್ಟಿ ಪ್ರಕರಣ ಎನ್ಐಎಗೆ ವಹಿಸಿರುವ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನಗೆ ಈ ವಿಚಾರ ಗೊತ್ತಿಲ್ಲ. ಈ ಸಂಬಂಧ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರನ್ನ ಕೇಳಿ ಎಂದು ಹೇಳಿದರು. ಅಲ್ಲದೇ ಡಿಸಿಪಿಗಳ ಪತ್ರ ವೈರಲ್ ಆಗುತ್ತಿರುವ ಬಗ್ಗೆ ಗೃಹಮಂತ್ರಿಗಳನ್ನು ಕೇಳಿ. ಈ ಪ್ರಕರಣದಲ್ಲಿ ತನಿಖೆ ಆರಂಭವಾಗಿದ್ದು, ನಾವು ಈ ಪ್ರಕರಣದ ಬಗ್ಗೆ ಮಾತನಾಡುವುದನ್ನು ಕಡಿಮೆ ಮಾಡುವುದು ಉತ್ತಮ. ವಿರೋಧ ಪಕ್ಷಗಳು ಏನು ಬೇಕಾದರೂ ಮಾತನಾಡಬಹುದು. ಆದರೆ ಕುನ್ಹಾ ಅವರ ಸಮಿತಿ ತನಿಖೆ ಮಾಡುತ್ತಿರುವುದರಿಂದ ನಮ್ಮ ಮಾತುಗಳ ತನಿಖೆ ಮೇಲೆ ಪರಿಣಾಮ ಬೀರಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದರು.












Click it and Unblock the Notifications