Tigers Day: ಮಧ್ಯಪ್ರದೇಶ ಹುಲಿಗಳ ಸಂಖ್ಯೆ ಕೇಳಿದ್ರೆ ತಲೆ ತಿರುಗುತ್ತೆ!
ಅಂತರರಾಷ್ಟ್ರೀಯ ಹುಲಿಗಳ ದಿನಾಚರಣೆ ಎಲ್ಲೆಲ್ಲೂ ಅದ್ಧೂರಿಯಾಗಿ ನಡೆಯುತ್ತಿದೆ. ಈ ಪೈಕಿ ಭಾರತದ ರಾಷ್ಟ್ರೀಯ ಪ್ರಾಣಿಯೂ ಆಗಿರುವ ಕಾರಣ, ಹುಲಿ ಕುರಿತು ಭಾರತೀಯರಿಗೆ ತುಸು ಹೆಮ್ಮೆ ಹೆಚ್ಚು. ಅದ್ರಲ್ಲೂ ಜಗತ್ತಿನ ಶೇ. 70ಕ್ಕಿಂತಲೂ ಹೆಚ್ಚು ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ ಅನ್ನೋದು ಮತ್ತೊಂದು ವಿಶೇಷ. ಇದೀಗ ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಎಷ್ಟು ಎಂಬ ಮಾಹಿತಿ ಹೊರಬಿದ್ದಿದ್ದು, ಮಾಹಿತಿ ತಲೆ ತಿರುಗಿಸುವಂತಿದೆ.
ಹೌದು, ಈ ವಿಚಾರ ಕೇಳಲು ಆಶ್ಚರ್ಯವಾದರೂ ನಂಬಬೇಕು. ಅಂದಹಾಗೆ ಮಧ್ಯಪ್ರದೇಶ ರಾಜ್ಯದಲ್ಲಿ 2018ರಲ್ಲಿ 526 ಇದ್ದ ಹುಲಿಗಳ ಸಂಖ್ಯೆ 2022ರಲ್ಲಿ 785ಕ್ಕೆ ಏರಿದೆಯಂತೆ. ಈ ಬಗ್ಗೆ ಖುದ್ದಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ & ಭಾರತೀಯ ವನ್ಯಜೀವಿ ಸಂಸ್ಥೆ ಬಿಡುಗಡೆ ಮಾಡಿದ ವರದಿ ಪ್ರಕಾರ, ಮಧ್ಯಪ್ರದೇಶ ದೇಶದಲ್ಲೇ ಹೆಚ್ಚು ಹುಲಿ ಹೊಂದಿದೆ. ಕರ್ನಾಟಕದಲ್ಲಿ 563 ಮತ್ತು ಉತ್ತರಾಖಂಡ 560 ಹುಲಿ ಇದ್ದು, ಎರಡೂ ರಾಜ್ಯಗಳು ಮಧ್ಯಪ್ರದೇಶದ ನಂತರದ ಸ್ಥಾನ ಪಡೆದುಕೊಂಡಿವೆ.

4 ವರ್ಷದಲ್ಲಿ 259 ಹುಲಿಗಳ ಸಂಖ್ಯೆ ಹೆಚ್ಚಳ!
ಅಂದಹಾಗೆ ಇದೀಗ ಬಿಡುಗಡೆಯಾಗಿರುವ ವರದಿ ಪ್ರಕಾರ ಮಧ್ಯಪ್ರದೇಶದಲ್ಲಿ ಹುಲಿ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದ ಅರಣ್ಯಗಳಲ್ಲಿ 4 ವರ್ಷ ಅವಧಿಯಲ್ಲಿ 259 ಹುಲಿಗಳ ಸಂಖ್ಯೆ ಹೆಚ್ಚಾಗಿದೆ. ಇನ್ನು ಈ ಕುರಿತು ಸಂತಸವನ್ನು ಹಂಚಿಕೊಂಡಿರುವ ಮಧ್ಯಪ್ರದೇಶ ಸಿಎಂ ಚೌಹಾಣ್ ಅವರು, ರಾಜ್ಯದ ಜನರ ಸಹಕಾರವೂ ಸೇರಿದಂತೆ ಅರಣ್ಯ ಇಲಾಖೆ ಅವಿರತ ಪ್ರಯತ್ನದ ಫಲವಾಗಿ, 4 ವರ್ಷದಲ್ಲಿ ನಮ್ಮ ರಾಜ್ಯದಲ್ಲಿ ಹುಲಿಗಳ ಸಂಖ್ಯೆ 526 ರಿಂದ 785 ಏರಿಕೆ ಕಂಡಿದೆ. ಇದು ಸಂತಸದ ವಿಚಾರ ಎಂದಿದ್ದಾರೆ.

ಹುಲಿಗಳ ಸಂರಕ್ಷಿತ ಪ್ರದೇಶಗಳು ಯಾವುವು?
ಇನ್ನು ಅತಿಹೆಚ್ಚು ಹುಲಿಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಕನ್ಹಾ, ಬಾಂಧವಗಢ, ಪನ್ನಾ, ಪೆಂಚ್, ಸಾತ್ಪುರ ಸೇರಿದಂತೆ ಸಂಜಯ್-ದುಬ್ರಿ ಸೇರಿ ಒಟ್ಟು ಆರು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಮಧ್ಯಪ್ರದೇಶದಲ್ಲಿ 2006 ರಲ್ಲಿ ಹುಲಿಗಳ ಸಂಖ್ಯೆ 300 ಆಗಿತ್ತು. ಆದರೆ 2010 ರ ವೇಳೆಗೆ ಹುಲಿಗಳ ಸಂಖ್ಯೆ 257ಕ್ಕೆ ಕುಸಿಯಿತು. ಅದೇ ವೇಳೆ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 300 ಇದ್ದಿದ್ದರಿಂದ ಮಧ್ಯಪ್ರದೇಶ ಮೊದಲ ಸ್ಥಾನವನ್ನು ಕಳೆದುಕೊಂಡಿತು ಎಂದು ಚೌಹಾಣ್ ಹೇಳಿದರು. ಈಗ ಮಧ್ಯಪ್ರದೇಶದಲ್ಲಿ ಮತ್ತೆ ಹುಲಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಒಟ್ನಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಗಳ ಸಂರಕ್ಷಣೆಗಾಗಿ ದೇಶಾದ್ಯಂತ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅದರಲ್ಲೂ ಹುಲಿಗಳ ಸಂಖ್ಯೆ ವಿನಾಶವಾಗುತ್ತಿದ್ದ ಹೊತ್ತಿನಲ್ಲಿ ಎಚ್ಚರಿಕೆ ಕ್ರಮ ಕೈಗೊಂಡ ಪರಿಣಾಮ ಇದೀಗ ಹುಲಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಿದೆ. ಆದರೆ ಹೀಗೆ ಹುಲಿಗಳ ಸಂಖ್ಯೆ ಏರಿಕೆ ಮಾನವ ಹಾಗೂ ಕಾಡು ಪ್ರಾಣಿಗಳ ನಡುವಿನ ಸಂಘರ್ಷಕ್ಕೂ ದಾರಿ ಮಾಡಿಕೊಡುತ್ತಿದೆ. ಆದ್ರೆ ದೇಶದ ಪ್ರತಿಯೊಂದು ರಾಜ್ಯದ ಅರಣ್ಯ ಇಲಾಖೆಗಳು ಕೂಡ ಈ ಸಮಸ್ಯೆಯನ್ನು ಸರಿದೂಗಿಸಿಕೊಂಡು ಹೋಗುತ್ತಿವೆ.












Click it and Unblock the Notifications