ನಿಲ್ಲಲಿಲ್ಲ ಘೋರ ಯುದ್ಧ.. ಶೃಂಗಸಭೆ ಮುಗಿದರೂ ಯುದ್ಧ ಮುಗಿಯಲಿಲ್ಲ!
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ನಿಂತಿಲ್ಲ. ಒಂದು ಕಡೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಜಿ20 ಶೃಂಗಸಭೆಯಲ್ಲಿ, ಪರೋಕ್ಷವಾಗಿ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಬೇಕು ಎಂಬ ಒತ್ತಾಯ ಕೇಳಿಬಂದಿದೆ. ಆದರೂ ರಷ್ಯಾ & ಉಕ್ರೇನ್‌ನ ನಡುವೆ ಹೊತ್ತಿರುವ ಬೆಂಕಿ ತಣ್ಣಗಾಗಿಲ್ಲ. ಈಗಲೂ ಉಕ್ರೇನ್‌ನಲ್ಲಿ ಮದ್ದು ಗುಂಡಿನ ಸದ್ದು ಮೊಳಗುತ್ತಿದೆ.
ನಿನ್ನೆ ಆರಂಭವಾಗಿದ್ದ ಜಿ20 ಶೃಂಗಸಭೆ ಚರ್ಚೆಯ ವೇಳೆ ಪರಮಾಣು ಅಸ್ತ್ರ ಬಳಕೆ ಅಥವಾ ಬಳಕೆಯ ಬೆದರಿಕೆ ಸ್ವೀಕಾರಾರ್ಹವಲ್ಲ ಎಂದು ಜಿ20 ರಾಷ್ಟ್ರಗಳು ಎಚ್ಚರಿಸಿದ್ದವು. ಹಾಗೇ ಈ ಯುದ್ಧ ನಿಲ್ಲಬೇಕು ಎಂಬ ಸಂದೇಶವನ್ನು ರವಾನಿಸಲಾಗಿತ್ತು. ಉಕ್ರೇನ್‌ನಲ್ಲಿ ಶಾಂತಿ ಮತ್ತು ನ್ಯಾಯಯುತ ಘನತೆ ಸ್ಥಾಪಿಸಬೇಕೆಂದು ಜಿ20 ನಾಯಕರು ಪ್ರತಿಪಾದಿಸಿದ್ದರು. ಹೀಗಿದ್ದರೂ ಉಕ್ರೇನ್ ಯುದ್ಧ ಅಂತ್ಯವಾಗುವ ಲಕ್ಷಣ ಮಾತ್ರ ಗೋಚರಿಸಿಲ್ಲ. ಈಗಾಗಲೇ 564ನೇ ದಿನ ಮುಗಿಸಿರುವ ರಷ್ಯಾ & ಉಕ್ರೇನ್ ಯುದ್ಧ 2ನೇ ವರ್ಷ ಪೂರೈಸುವ ಸೂಚನೆ ನೀಡುತ್ತಿದೆ.

ಉಕ್ರೇನ್ ಮೇಲೆ ಕ್ಷಿಪಣಿಗಳ ಮಳೆ?
ರಷ್ಯಾ ಸೇನೆ ತನ್ನ ದೇಶದ ಮೇಲೆ ಪದೇ ಪದೆ ಕ್ಷಿಪಣಿ ದಾಳಿ ನಡೆಸುತ್ತಿದೆ ಎಂದು ಉಕ್ರೇನ್ ಪದೇ ಪದೆ ಆರೋಪ ಮಾಡುತ್ತಿದೆ. ಹೀಗೆ ಉಕ್ರೇನ್ ಮೇಲೆ ಬಂದು ಬೀಳುತ್ತಿರುವ ಕ್ಷಿಪಣಿ ಮಳೆ ಪರಿಣಾಮ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಮತ್ತೊಂದು ಕಡೆ ರಷ್ಯಾದ ಸೇನೆ ಕೂಡ, ತಮ್ಮ ಮೇಲೆ ಉಕ್ರೇನ್ ಸೇನೆ ಡ್ರೋನ್ ಮೂಲಕ ದಾಳಿ ನಡೆಸುತ್ತಿದೆ ಎಂಬ ಆರೋಪ ಮಾಡುತ್ತಿದೆ. ಹೀಗೆ ಇವರಿಬ್ಬರ ಜಗಳದಲ್ಲಿ ಏನೂ ತಪ್ಪು ಮಾಡದ ಅಮಾಯಕ ಜನರು ಬಲಿಯಾಗುತ್ತಿದ್ದಾರೆ ಎಂಬ ಆಕ್ರೋಶ ಮೊಳುಗುತ್ತಿದೆ.
ಚುನಾವಣೆ ಆರಂಭಿಸಿದ ರಷ್ಯಾ ಅಧಿಕಾರಿಗಳು
ರಷ್ಯಾ ಈಗಾಗಲೇ ಉಕ್ರೇನ್‌ನ ಪ್ರಮುಖ ನಗರ & ಪ್ರಮುಖ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದೆ. ಹೀಗಾಗಿ ತನ್ನ ಹಿಡಿತಕ್ಕೆ ಸಿಕ್ಕಿರುವ ಉಕ್ರೇನ್‌ನ ಜಾಗಗಳಲ್ಲಿ ತಮಗೆ ಬೇಕಾದವರ ಮತ್ತು ಮಾತು ಕೇಳುವವರಿಗೆ ಅಧಿಕಾರ ಕೊಡಿಸಲು ರಷ್ಯಾ ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ಕಾರಣಕ್ಕೆ ರಷ್ಯಾ 1 ವರ್ಷದ ಹಿಂದೆ ಅತಿಕ್ರಮಿಸಿಕೊಂಡಿದ್ದ ವಿವಿಧ ಉಕ್ರೇನ್ ಭಾಗದಲ್ಲಿ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ಸಜ್ಜಾಗಿದೆ. ರಷ್ಯಾ ಸೇನೆ & ಅಧಿಕಾರಿಗಳು ಸ್ಥಳೀಯ ಚುನಾವಣೆ ಆರಂಭಿಸಿ ಉಕ್ರೇನ್‌ಗೆ ಆಘಾತ ನೀಡಿದ್ದಾರೆ. ಮೊನ್ನೆ ಆರಂಭವಾಗಿರುವ ಎಲೆಕ್ಷನ್ ಇಂದು ಮುಗಿಯಲಿದೆ.

ಅಮೆರಿಕ ವಿರುದ್ಧ ಸಿಟ್ಟಿಗೆ ಪ್ರತಿಕಾರ?
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡುತ್ತಿದೆ. ಇದೇ ಕಾರಣಕ್ಕೆ ರಷ್ಯಾ ತನ್ನ ದಾಳಿ ಮತ್ತಷ್ಟು ಭೀಕರಗೊಳಿಸಿದೆ ಎಂಬ ಆರೋಪವು ಕೇಳಿಬಂದಿದೆ. ಇಷ್ಟೆಲ್ಲಾ ನಡೆಯುವಾಗ ಉಕ್ರೇನ್ ಮೇಲೆ ಹಿಡಿತ ಸಾಧಿಸಿರುವ ರಷ್ಯಾ, ತನ್ನ ಹಿಡಿತದಲ್ಲಿ ಇರುವ ಉಕ್ರೇನ್ ಭಾಗದಲ್ಲಿ ಚುನಾವಣೆ ನಡೆಸುತ್ತಿರುವ ಆರೋಪ ಕೂಡ ಕೇಳಿಬಂದಿದೆ.
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಇಡೀ ಜಗತ್ತು ಒಂದಾದರೂ ಈ ಕಾರ್ಯ ಸಾಧ್ಯವಾಗುತ್ತಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮತ್ತಷ್ಟು ಘೋರವಾಗುತ್ತಿದೆ. ಹೀಗಾಗಿ ಮುಂದೆ ಏನು ಮಾಡುವುದು ಎಂಬ ಚಿಂತೆಯಲ್ಲಿ ಸಾಮಾನ್ಯ ಜನ ಮುಳುಗಿದ್ದಾರೆ. ಜಿ20 ಶೃಂಗಸಭೆಯಲ್ಲಿ ಯುದ್ಧ ನಿಲ್ಲಿಸುವ ಬಗ್ಗೆ ಪರೋಕ್ಷ ಮಾತುಗಳು ಕೇಳಿಬಂದರೂ, ರಷ್ಯಾ ಮತ್ತು ಉಕ್ರೇನ್ ಸಂಧಾನಕ್ಕೆ ಕೂರುವ ಲಕ್ಷಣವಂತೂ ಕಾಣುತ್ತಿಲ್ಲ. ಹೀಗಾಗಿ ಇಬ್ಬರ ನಡುವೆ ಯುದ್ಧ ನಿಲ್ಲಿಸಲು ಬೇರೆ ತಂತ್ರ ಹೂಡಬೇಕಾಗಿದೆ ಅಂತಿದ್ದಾರೆ ತಜ್ಞರು. ಆದರೆ ಉಕ್ರೇನ್ ಜನ ಮಾತ್ರ ತುತ್ತು ಅನ್ನಕ್ಕೂ ಕಷ್ಟಪಡುತ್ತಾ, ದೇಶ ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾತ್ರ ದುರಂತವೇ ಸರಿ.












Click it and Unblock the Notifications