Digital Investment Scams: ಆನ್‌ಲೈನ್ ಹೂಡಿಕೆ ಬಲೆಗೆ ಬೀಳುತ್ತಿರುವ ವಿದ್ಯಾವಂತರು: ಡಿಜಿಟಲ್ ವಂಚನೆಗಳ ವಿರುದ್ಧ ಕಠಿಣ ಕ್ರಮ
Digital Investment Scams: ಭಾರತದಲ್ಲಿ ಡಿಜಿಟಲ್ ಹೂಡಿಕೆ ವಂಚನೆಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚುತ್ತಿದ್ದು, ಟೆಲಿಗ್ರಾಂ, ವಾಟ್ಸಾಪ್ ಹಾಗೂ ನಕಲಿ ಟ್ರೇಡಿಂಗ್ ಆ್ಯಪ್‌ಗಳ ಮೂಲಕ ಸೈಬರ್ ಅಪರಾಧಿಗಳು ಸಾಮಾನ್ಯ ನಾಗರಿಕರನ್ನು ಸುಲಭವಾಗಿ ಬಲೆಗೆ ಬೀಳಿಸುತ್ತಿದ್ದಾರೆ. ಕಳೆದ ಕೆಲವೇ ವಾರಗಳಲ್ಲಿ ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವೈದ್ಯರು, ಕಾರ್ಪೊರೇಟ್ ಉನ್ನತಾಧಿಕಾರಿಗಳು ಹಾಗೂ ಹಣಕಾಸು ತಜ್ಞರು ಕೋಟಿ ಕೋಟಿ ರೂಪಾಯಿ ಕಳೆದುಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಈ ಮೋಸಗಳ ಅಪಾಯಕಾರಿ ಅಂಶವೆಂದರೆ, ಅವು ಅತ್ಯಂತ ವೃತ್ತಿಪರವಾಗಿ, ತಂತ್ರಜ್ಞಾನ ಆಧಾರಿತವಾಗಿ ರೂಪುಗೊಂಡಿರುವುದರಿಂದ ವಿದ್ಯಾವಂತರೂ ಈ ವಂಚನೆಗೆ ಒಳಗಾಗುತ್ತಿದ್ದಾರೆ. ಇಂದಿನ ಹೂಡಿಕೆ ವಂಚನೆಗಳು ಹಳೆಯ ರೀತಿಯ ಫೋನ್ ಕರೆಗಳಲ್ಲ. ಇವು ನಕಲಿ ಹಣಕಾಸು ಕಂಪನಿಗಳಂತೆ ಕಾರ್ಯನಿರ್ವಹಿಸುತ್ತವೆ. ಮೊದಲಿಗೆ ವ್ಯಕ್ತಿಯನ್ನು ಅವರ ಅರಿವಿಲ್ಲದೇ ವಾಟ್ಸಾಪ್ ಅಥವಾ ಟೆಲಿಗ್ರಾಂ ಹೂಡಿಕೆ ಗುಂಪಿಗೆ ಸೇರಿಸಲಾಗುತ್ತದೆ.

ಈ ಗುಂಪುಗಳಲ್ಲಿ ದೊಡ್ಡ ಲಾಭದ ಸ್ಕ್ರೀನ್‌ಶಾಟ್‌ಗಳು, ದಿನಕ್ಕೆ ಲಕ್ಷಾಂತರ ಆದಾಯ ಗಳಿಸುತ್ತಿದ್ದೇವೆ ಎನ್ನುವ ನಕಲಿ ಸದಸ್ಯರ ಮೆಚ್ಚುಗೆಗಳು ಕಾಣಿಸುತ್ತವೆ. ಬಳಿಕ "ಸೆಬಿ ನೋಂದಾಯಿತ ತಜ್ಞ" ಎನ್ನಿಸಿಕೊಂಡವರು ಷೇರು, ಕ್ರಿಪ್ಟೋ ಅಥವಾ ಐಪಿಒ ಸಲಹೆ ನೀಡುತ್ತಾರೆ. ಮೊದಲಿಗೆ ಸಣ್ಣ ಮೊತ್ತ ಹೂಡಲು ಹೇಳಿ, ನಿಜವಾಗಿಯೂ ಸ್ವಲ್ಪ ಲಾಭ ತೋರಿಸಿ ನಂಬಿಕೆ ಗಳಿಸುತ್ತಾರೆ. ನಂತರ ದೊಡ್ಡ ಮೊತ್ತ ಹೂಡಿಸಿದ ಮೇಲೆ ಹಣ ವಾಪಸ್ ಪಡೆಯಲು ತೆರಿಗೆ, ಜಿಎಸ್‌ಟಿ, ಪ್ರೊಸೆಸಿಂಗ್ ಶುಲ್ಕ ಎಂದು ಹೊಸ ಹೊಸ ಕಾರಣ ಹೇಳಿ ಮತ್ತಷ್ಟು ಹಣ ಎಳೆಯುತ್ತಾರೆ. ಕೊನೆಗೆ ಖಾತೆ ಸಂಪೂರ್ಣ ಖಾಲಿಯಾಗುತ್ತದೆ.
ಈ ರೀತಿಯ ವಂಚನೆಗಳ ಪ್ರಮಾಣ ಎಷ್ಟಿದೆ ಎಂಬುದಕ್ಕೆ ನೈಜ ಪ್ರಕರಣಗಳೇ ಸಾಕ್ಷಿಯಾಗಿವೆ. ವಿಶಾಖಪಟ್ಟಣದಲ್ಲಿ ವೈದ್ಯರೊಬ್ಬರು ₹2.5 ಕೋಟಿ ಕಳೆದುಕೊಂಡರೆ, ಹೈದರಾಬಾದ್‌ನಲ್ಲಿ ಮತ್ತೊಬ್ಬ ವೈದ್ಯರು ಕೇವಲ ಎರಡು ತಿಂಗಳಲ್ಲಿ ₹4.7 ಕೋಟಿ ವಂಚನೆಗೆ ಒಳಗಾದರು. ನವಿ ಮುಂಬೈನಲ್ಲಿ ಎಚ್‌ಆರ್ ಮ್ಯಾನೇಜರ್ ₹36.74 ಲಕ್ಷ ಕಳೆದುಕೊಂಡಿದ್ದು, ಥಾಣೆಯಲ್ಲಿ ಎನ್‌ಬಿಎಫ್‌ಸಿ ಉದ್ಯೋಗಿಯೊಬ್ಬರು ₹79 ಲಕ್ಷ ಕಳೆದುಕೊಂಡಿದ್ದಾರೆ. ಒಡಿಶಾದ ಕಟಕ್‌ನಲ್ಲಿ ಟೆಲಿಗ್ರಾಂ ಆಧಾರಿತ ಹೂಡಿಕೆ ಜಾಲವನ್ನು ಪೊಲೀಸರು ಭೇದಿಸಿ ₹90 ಲಕ್ಷಕ್ಕೂ ಅಧಿಕ ಮೊತ್ತವನ್ನು ಫ್ರೀಜ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾವಂತರು ಕೂಡ ಈ ಮೋಸಗಳಿಗೆ ಒಳಗಾಗುತ್ತಿರುವುದಕ್ಕೆ ಕಾರಣ:
* ನಕಲಿ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳು ನಿಜವಾದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳಂತೆ ಕಾಣುವುದು
* ನಕಲಿ ಸೆಬಿ ನೋಂದಣಿ ಸಂಖ್ಯೆಗಳು
* ಸಾಕ್ಷ್ಯ ಹೇಳುವ ನಕಲಿ ಬಳಕೆದಾರರು ಮತ್ತು ಮೊದಲ ಹಂತದಲ್ಲಿ ತೋರಿಸುವ ಲಾಭ
* ಸುಲಭವಾಗಿ ಹೆಚ್ಚು ಹಣ ಗಳಿಸಬೇಕೆಂಬ ಆಸೆಯೇ ಅಸ್ತ್ರವಾಗುತ್ತಿದೆ.
ಈ ಹಿನ್ನೆಲೆ ಕೇಂದ್ರ ಸರ್ಕಾರವು ಡಿಜಿಟಲ್ ವಂಚನೆಗಳ ವಿರುದ್ಧ ಬಹುಮಟ್ಟದ ಕಠಿಣ ಕ್ರಮ ಕೈಗೊಂಡಿದೆ. cybercrime.gov.in ಎಂಬ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮತ್ತು 24x7 ಸಹಾಯವಾಣಿ 1930 ಮೂಲಕ ದೂರು ನೀಡಿದ ತಕ್ಷಣವೇ ಬ್ಯಾಂಕ್‌ಗಳು ಹಾಗೂ ಡಿಜಿಟಲ್ ವಾಲೆಟ್‌ಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಗೃಹ ಸಚಿವಾಲಯದ I4C ಇಂಡಿಯನ್ ಸೈಬರ್ ಕ್ರೈಂ ಕೋಆರ್ಡಿನೇಷನ್ ಸೆಂಟರ್ ಮೂಲಕ ಟೆಲಿಗ್ರಾಂ ಚಾನೆಲ್‌ಗಳು, ನಕಲಿ ಆ್ಯಪ್‌ಗಳು ಮತ್ತು ಅಂತರರಾಷ್ಟ್ರೀಯ ಹಣದ ಜಾಡು ಪತ್ತೆ ಹಚ್ಚಲಾಗುತ್ತಿದೆ. ಸಾವಿರಾರು ಮ್ಯೂಲ್ ಖಾತೆಗಳು, ಸಿಮ್ ಕಾರ್ಡ್‌ಗಳನ್ನು ಬ್ಲಾಕ್ ಮಾಡಲಾಗಿದೆ.
ನಾಗರಿಕರಿಗೆ ಸರ್ಕಾರದಿಂದ ಎಚ್ಚರಿಕೆ
* ಅಪರಿಚಿತ ವಾಟ್ಸಾಪ್ ಅಥವಾ ಟೆಲಿಗ್ರಾಂ ಹೂಡಿಕೆ ಗುಂಪುಗಳನ್ನು ನಂಬಬೇಡಿ.
* ಅನ್ಯ ವ್ಯಕ್ತಿಗಳ ಯುಪಿಐಗೆ ಹಣ ಕಳುಹಿಸಬೇಡಿ.
* ಸೆಬಿ ನೋಂದಣಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ.
* ಯಾವುದೇ ವಂಚನೆ ಕಂಡುಬಂದರೆ ತಕ್ಷಣ 1930 ಅಥವಾ cybercrime.gov.inಗೆ ದೂರು ನೀಡಿ.
ತಂತ್ರಜ್ಞಾನ ಬಳಸಿ ಜನರನ್ನು ವಂಚಿಸುವ ಸೈಬರ್ ಅಪರಾಧಿಗಳಿಗೆ ತಂತ್ರಜ್ಞಾನವೇ ಪ್ರತಿಕಾರವಾಗುತ್ತಿದೆ. ಸರ್ಕಾರ, ಬ್ಯಾಂಕ್‌ಗಳು ಮತ್ತು ಪೊಲೀಸರ ಸಮನ್ವಯದಿಂದ ಈ ಜಾಲಗಳನ್ನು ಪತ್ತೆ ಹಚ್ಚಿ ಹತ್ತಿಕ್ಕಲಾಗುತ್ತಿದೆ. ಜಾಗೃತಿ ಮತ್ತು ಎಚ್ಚರಿಕೆಯಿಂದ ಮಾತ್ರವೇ ಡಿಜಿಟಲ್ ಹೂಡಿಕೆ ವಂಚನೆಗಳ ವಿರುದ್ಧ ಗೆಲುವು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯ.












Click it and Unblock the Notifications