''ನ್ಯಾಯಾಧೀಶರಿಗೆ ಬೆದರಿಕೆಯಿದ್ದರೂ ಸಿಬಿಐ ಸುಮ್ಮನಿರುತ್ತೆ ಏಕೆ?"
ನವದೆಹಲಿ, ಆಗಸ್ಟ್ 6: ''ನ್ಯಾಯಾಧೀಶರಿಗೆ ಬೆದರಿಕೆ ಇದೆ ಎಂದು ಹೇಳಿದರೂ ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಕೇಂದ್ರ ಗುಪ್ತಚರ ದಳ (ಐಬಿ) ನ್ಯಾಯಾಂಗಕ್ಕೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ, '' ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸಿಬಿಐ ಹಾಗೂ ಐಬಿ ವಿರುದ್ಧ ಕಿಡಿಕಾರಿದೆ.
''ಪ್ರಭಾವಿ ವ್ಯಕ್ತಿಗಳು ಅಥವಾ ಪಾತಕಿಗಳ ಪ್ರಕರಣಗಳ ವಿಚಾರಣೆ ಕೈಗೊಳ್ಳುವಾಗ ನ್ಯಾಯಾಧೀಶರಿಗೆ ಬೆದರಿಕೆಯೊಡ್ಡುವುದು, ಮಾನಸಿಕವಾಗಿ ಕಿರುಕುಳ ನೀಡುವುದು ಅನೇಕ ಸಂದರ್ಭಗಳಲ್ಲಿ ನಡೆಯುತ್ತದೆ. ಇಂತಹ ಸನ್ನಿವೇಶಗಳಲ್ಲಿ ಸಿಬಿಐ ಅಥವಾ ಪೊಲೀಸರಿಗೆ ದೂರು ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ,'' ಎಂದು ನ್ಯಾಯಾಲಯ ಹೇಳಿದೆ.
ಸಿಬಿಐನ ವರ್ತನೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ನ್ಯಾಯಾಂಗಕ್ಕೆ ಯಾವುದೇ ಸಹಾಯ ದೊರೆಯುತ್ತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟ ಶಬ್ದಗಳಲ್ಲಿ ತನ್ನ ಅಸಮಾಧಾನ ಹೊರಹಾಕಿದೆ. ಅಂತಿಮವಾಗಿ ನ್ಯಾಯಾಲಯವು ಪ್ರಕರಣದ ಸಂಬಂಧ ಎಲ್ಲ ರಾಜ್ಯಗಳಿಗೆ ನೋಟಿಸ್ ಜಾರಿಗೊಳಿಸಿ, ವಸ್ತುಸ್ಥಿತಿ ವರದಿ ಸಲ್ಲಿಸಲು ಸೂಚಿಸಿದ್ದಲ್ಲದೆ, ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 17ರಂದು ನಡೆಯಲಿದೆ.
ಹಿನ್ನೆಲೆ ಏನು?: ಇತ್ತೀಚೆಗೆ ಧನ್‌ಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಬೆಳಗಿನ ವಾಯು ಸಂಚಾರದ ವೇಳೆ ವಾಹನವೊಂದು ಶಂಕಾಸ್ಪದವಾಗಿ ಗುದ್ದಿದ ಪರಿಣಾಮ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು, ''ಪಾತಕಿ ವ್ಯಕ್ತಿಗಳನ್ನು ಒಳಗೊಳ್ಳುವಂತಹ ಪ್ರಭಾವಿ ವ್ಯಕ್ತಿಗಳ ವಿರುದ್ಧದ ಪ್ರಕರಣಗಳು ಇಂದು ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ನ್ಯಾಯಾಧೀಶರಿಗೆ ಎಸ್‌ಎಂಎಸ್ ಮೂಲಕ ವಾಟ್ಸಪ್ ಮೂಲಕ ಮಾನಸಿಕವಾಗಿ ಬೆದರಿಸುವುದು ನಡೆಯುತ್ತಿದೆ. ಈ ಸಂಬಂಧ ದೂರುಗಳನ್ನು ದಾಖಲಿಸಲಾಗಿದೆ. ಆದರೆ ಸಿಬಿಐ ಏನನ್ನೂ ಮಾಡಿಲ್ಲ. ಸಿಬಿಐ ವರ್ತನೆಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಹೇಳಲು ವಿಷಾದವಾಗುತ್ತಿದೆ,'' ಎಂದರು.
ಇದೇ ವೇಳೆ ಮುಖ್ಯ ನ್ಯಾಯಮೂರ್ತಿಗಳು, ದೇಶದಲ್ಲಿ ಹೊಸ ಪ್ರವೃತ್ತಿಯೊಂದು ಆರಂಭವಾಗಿದೆ. ತಮ್ಮ ವಿರುದ್ಧವಾದ ಆದೇಶಗಳನ್ನು ನೀಡಿದಾಗ ನ್ಯಾಯಾಧೀಶರನ್ನು ದೂಷಿಸಲಾಗುತ್ತದೆ ಎಂದು ಹೇಳಿದರು.
''ಪೊಲೀಸ್ ಅಥವಾ ಸಿಬಿಐಗೆ ನ್ಯಾಯಾಧೀಶರು ದೂರು ನೀಡಿದರೆ ಅವುಗಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಿಬಿಐ ಅಥವಾ ಗುಪ್ತಚರ ದಳಗಳು ನ್ಯಾಯಾಲಯಕ್ಕೆ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ,'' ಎಂದು ಸಿಜೆಐ ಎನ್ ವಿ ರಮಣ ಹೇಳಿದರು.
ವಾಹನವೊಂದರ ಡಿಕ್ಕಿಯಿಂದಾಗಿ ಧನಾಬಾದ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಉತ್ತಮ್ ಆನಂದ್ ಅವರು ಶಂಕಾಸ್ಪದ ರೀತಿಯಲ್ಲಿ ಸಾವಿಗೀಡಾದ ಹಿನ್ನೆಲೆಯಲ್ಲಿ ನ್ಯಾಯಾಲಯಗಳ ಸುರಕ್ಷತೆ ಮತ್ತು ನ್ಯಾಯಾಧೀಶರ ರಕ್ಷಣೆ (ಧನಾಬಾದ್‌ನ ಹೆಚ್ಚುವರಿ ಸತ್ರ ನ್ಯಾಯಾಧೀಶರ ಸಾವು) ಅಡಿಯಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣದ ದಾಖಲಿಸಿಕೊಂಡಿದೆ.

ಸಿಜೆಐ ಎನ್ ವಿ ರಮಣ ಹಾಗೂ ನ್ಯಾ. ಸೂರ್ಯಕಾಂತ್ ಅವರಿರುವ ಪೀಠ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಯನ್ನು ಕೈಗೊಂಡ ಪೀಠವು ಜಾರ್ಖಂಡ್‌ನ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ವಾರದೊಳಗೆ ಪ್ರಕರಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಸೂಚಿಸಿದೆ.
ಅಪಘಾತದಿಂದ ನ್ಯಾಯಾಧೀಶ ಆನಂದ್ ಸಾವನ್ನಪ್ಪಿರಬಹುದು ಎಂದು ನಂಬಲಾಗಿತ್ತು. ಆದರೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ವಾಹನವೊಂದರಿಂದ ರಸ್ತೆಯ ಅಂಚಿನಲ್ಲಿ ಜಾಗಿಂಗ್ ಮಾಡುತ್ತಿದ್ದ ನ್ಯಾಯಾಧೀಶ ಆನಂದ್ ಅವರ ಮೇಲೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆಸಿರುವುದು ಕಂಡುಬಂದಿತ್ತು.
ಅಪರಿಚಿತ ವಾಹನವನ್ನು ಉದ್ದೇಶಪೂರ್ವಕವಾಗಿಯೇ ನ್ಯಾಯಾಧೀಶರಿಗೆ ಡಿಕ್ಕಿಹೊಡೆದಿದ್ದು ಸ್ಪಷ್ಟವಾಗಿ ಕಾಣಿಸುತ್ತದೆ. ಹಾಡುಹಗಲಲ್ಲಿ ನ್ಯಾಯಾಧೀಶರನ್ನು ಹತ್ಯೆ ಮಾಡಿದ ವಿಚಾರವನ್ನು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ನ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್, ಸುಪ್ರೀಂಕೋರ್ಟ್‌ನ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದ ಗಮನಕ್ಕೂ ತಂದಿದ್ದರು. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ನಿರ್ದಾಕ್ಷಿಣ್ಯ ದಾಳಿ ಇದು. ಕೂಡಲೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿದ್ದರು. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)












Click it and Unblock the Notifications