Devendra Fadnavis: ಮಹಾರಾಷ್ಟ್ರ ಸಿಎಂ ಆಗಿ ಫಡ್ನವೀಸ್ ಪ್ರಮಾಣವಚನ ಎಲ್ಲಿ, ಯಾವಾಗ, ಯಾರೆಲ್ಲ ಇರ್ತಾರೆ?
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬೆನ್ನಲ್ಲೇ ಬಿಜೆಪಿ ತನ್ನ ಮಹಾಯುತಿಯೊಂದಿಗೆ ನೂತನ ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಇನ್ನು ಈ ಬಾರಿ ಸಿಎಂ ಸ್ಥಾನ ಬಿಜೆಪಿ ಪಾಲಾಗಿದ್ದು, ದೇವೇಂದ್ರ ಫಡ್ನವೀಸ್ ಅವರನ್ನು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿದೆ. ಇನ್ನು ನೂತನ ಸರ್ಕಾರದ ಪ್ರಮಾಣ ವಚನ ನಾಳೆ ನಡೆಯಲಿದೆ ಎಂದು ಫಡ್ನವೀಸ್ ಮಾಹಿತಿ ನೀಡಿದ್ದಾರೆ.
ನಾಳೆ ಸಂಜೆ 5.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ನಾಳೆ ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬುದನ್ನು ಇಂದು ಸಂಜೆಯೊಳಗೆ ನಿರ್ಧರಿಸುತ್ತೇವೆ. ನಿನ್ನೆ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿ, ಈ ಸರ್ಕಾರದಲ್ಲಿ ಅವರು ನಮ್ಮೊಂದಿಗಿರಬೇಕು ಎಂದು ಕೇಳಿಕೊಂಡಿದ್ದೇವೆ. ಶಿಂಧೆ ನಮ್ಮೊಂದಿಗೆ ಇರುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ಮಹಾರಾಷ್ಟ್ರದ ಜನತೆಗೆ ನೀಡಿರುವ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.

ಶಿವಸೇನೆಯ ಅಧ್ಯಕ್ಷ ಮತ್ತು ಶಿವಸೇನೆಯ ಶಾಸಕಾಂಗ ಪಕ್ಷದ ಮುಖ್ಯಸ್ಥರಾಗಿರುವ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿ ಪತ್ರವನ್ನು ನೀಡಿದ್ದಾರೆ. ಇದರೊಂದಿಗೆ ಎನ್‌ಸಿಪಿ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಅಜಿತ್ ದಾದಾ ಪವಾರ್ ಕೂಡ ಇದೇ ಪತ್ರವನ್ನೂ ನೀಡಿದ್ದಾರೆ. ನಮ್ಮೊಂದಿಗಿರುವ ಸ್ವತಂತ್ರ ಶಾಸಕರು, ಎಲ್ಲರೂ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ ಎಂದು ಫಡ್ನವೀಸ್ ಮಾಹಿತಿ ನೀಡಿದ್ದಾರೆ.
ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಅವರು ಸಿಎಂ ಆಗಿ ಎರಡೂವರೆ ವರ್ಷ ಪೂರೈಸಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದಿದ್ದಾರೆ. ಕಳೆದ 2.5 ವರ್ಷಗಳಲ್ಲಿ ನಮ್ಮ ಸರ್ಕಾರ, ಮಹಾಯುತಿ ಸರ್ಕಾರ, ನಮ್ಮೂರು ಮತ್ತು ನಮ್ಮ ತಂಡ ಮಾಡಿದ ಕೆಲಸ ಗಮನಾರ್ಹವಾಗಿದೆ. ಇದು ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಡುತ್ತದೆ. ನಾವು ಅಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ನಮಗೆ ಸಂತೋಷವಾಗಿದೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ.

ಯಾರೆಲ್ಲ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಗೆ ಶಿಂಧೆ ಇಂದು ಸಂಜೆ ತನಕ ಕಾಯಿರಿ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಶಿಂಧೆ ಅವರಿಗೆ ಉತ್ತರಿಸಿದ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್, ನಾನು ಪ್ರಮಾಣವಚನ ತೆಗೆದುಕೊಳ್ಳುತ್ತೇನೆ, ನಾನು ಕಾಯುವುದಿಲ್ಲ ಎಂದಿದ್ದಾರೆ. ಈ ವೇಳೆ ಶಿಂಧೆ ಅಜಿತ್ ಪವಾರ್ ಬೆಳಿಗ್ಗೆ ಮತ್ತು ಸಂಜೆ ಎರಡೂ ಬಾರಿ ಪ್ರಮಾಣವಚನ ಸ್ವೀಕರಿಸಿದ ಅನುಭವವನ್ನು ಹೊಂದಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ.
ರಾಜ್ಯದಲ್ಲಿ ಸರ್ಕಾರ ನಡೆಸಲು ನಾವು ನಮ್ಮ ಕೈಲಾದಷ್ಟು ಬೆಂಬಲ ನೀಡುತ್ತೇವೆ. ಪಕ್ಷಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬಾವಂಕುಲೆ ಮತ್ತು ಎನ್‌ಸಿಪಿಯ ಸುನೀಲ್ ತಾಟ್ಕರೆ ನಿರ್ವಹಿಸುತ್ತಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಹೇಳಿದ್ದಾರೆ. ನಾಳೆ ಮಹಾರಾಷ್ಟ್ರದಲ್ಲಿ ಹೊಸ ಸಿಎಂ ಹಾಗೂ ಹೊಸ ಸರ್ಕಾರ ರಚೆನೆಗೆ ಕ್ಷಣಗಣನೆ ಶುರುವಾಗಿದೆ.












Click it and Unblock the Notifications