Devendra Fadnavis: ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ನೂತನ ಸಿಎಂ- ಘೋಷಣೆಗೆ ಕ್ಷಣಗಣನೆ
ಮುಂಬೈ, ನವೆಂಬರ್ 27: ಮಹಾರಾಷ್ಟ್ರದಲ್ಲಿ ಮಹಾಯುತಿಯ ಭರ್ಜರಿ ಗೆಲುವು ಸಾಧಿಸಿದ್ದು, ಇದೀಗ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ಜೋರಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಬಿಜಪಿಯ ದೇವೇಂದ್ರ ಫಡ್ನವಿಸ್ ಅವರ ಹೆಸರೇ ಅಂತಿಮಗೊಂಡಿದ್ದು, ಕೆಲವು ಕ್ಷಣದಲ್ಲೇ ಅಧಿಕೃತವಾಗಿ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಲಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರ ಹೆಸರನ್ನು ಏಕನಾಥ್ ಶಿಂಧೆ ಒಪ್ಪಿದ್ದು, ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಸಿಎಂ ಹೆಸರಿನ ಸಸ್ಪೆನ್ಸ್ ಅಂತ್ಯಗೊಂಡಿದ್ದು, ಕೇಂದ್ರದಲ್ಲಿ ಉಪ ಮುಖ್ಯಮಂತ್ರಿ ಅಥವಾ ಸಚಿವರಾಗುವ ಪ್ರಸ್ತಾಪವನ್ನು ಏಕನಾಥ್ ಶಿಂಧೆ ತಿರಸ್ಕರಿಸಿದ್ದಾರೆ. ಬದಲಿಗೆ, ಅವರು ತಮ್ಮದೇ ಆದ ಹೋಸ ಪ್ರಸ್ತಾಪವನ್ನು ಬಿಜೆಪಿ ಉನ್ನತ ನಾಯಕರ ಮುಂದೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಮೂಲಗಳ ಪ್ರಕಾರ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಅವರೊಂದಿಗೆ ಶಿವಸೇನೆಯಿಂದ ಏಕನಾಥ್ ಶಿಂಧೆ ಅವರ ಮಗ ಹಾಲಿ ಸಂಸದ ಶ್ರೀಕಾಂತ್ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಬಹುದು ಎನ್ನಲಾಗುತ್ತಿದ್ದು, ಏಕನಾಥ್ ಶಿಂಧೆ ಅವರು ಮಹಾಯುತಿಯ ಸಂಚಾಲಕರಾಗುವ ಎಲ್ಲ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ನಿರ್ಧರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿದ್ದೇನೆ ಎಂದು ಏಕನಾಥ್ ಶಿಂಧೆ ಅವರು ಈಗಾಗಲೇ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. ಏಕನಾಥ್ ಶಿಂಧೆ ಅವರ ಈ ಹೇಳಿಕೆಯನ್ನ ಗಮನಿಸಿದೇ ದೇವೇಂದ್ರ ಫಡ್ನವಿಸ್ ಅವರೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂಬುದು ಖಚಿತವಾದಂತಾಗಿದೆ.
ಇದುವರೆಗೆ ಮುಖ್ಯಮಂತ್ರಿಯಾಗಿದ್ದ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಲು ಒಪ್ಪಿಲ್ಲ. ಇದೇ ಕಾರಣಕ್ಕೆ ತಮ್ಮ ಪುತ್ರ ಶ್ರೀಕಾಂತ್ ಗೆ ಉಪಮುಖ್ಯಮಂತ್ರಿ ಆಗಲು ಒಪ್ಪಿಗೆ ನೀಡಿದ್ದಾರಾದರೂ ಸ್ವತಃ ದೆಹಲಿಗೆ ಹೋಗಲು ನಿರಾಕರಿಸಿದ್ದಾರೆ. ಹೀಗಾಗಿ ಪುತ್ರ ಶ್ರೀಕಾಂತ್ ಶಿಂಧೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಕೇಂದ್ರದಲ್ಲಿ ನೀವು ಸಚಿವರಾಗುವಂತೆ ಬಿಜೆಪಿ ಪ್ರಸ್ತಾವನೆ ಕಳುಹಿಸಿತ್ತು. ಅಲ್ಲದೇ ಗೃಹ ಇಲಾಖೆ ಸೇರಿದಂತೆ ಕೆಲವು ಪ್ರಮುಖ ಖಾತೆಗಳನ್ನು ಶಿವಸೇನೆಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಮೂಲಗಳ ಪ್ರಕಾರ ಬಿಜೆಪಿಯು ಏಕನಾಥ್ ಶಿಂಧೆ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಥವಾ ಕೇಂದ್ರದಲ್ಲಿ ಸಚಿವ ಸ್ಥಾನದ ಹುದ್ದೆ ಕೊಡುವುದಾಗಿ ತಿಳಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಶಿವಸೇನಾ ಮುಖ್ಯಸ್ಥ ಏಕನಾಥ್ ಶಿಂಧೆ ತಿರಸ್ಕರಿಸಿ, ತಮ್ಮದೇ ಪ್ರಸ್ತಾಪವನ್ನು ಬಿಜೆಪಿಯ ಉನ್ನತ ನಾಯಕರೊಂದಿಗೆ ಮುಂದಿಟ್ಟಿದ್ಧಾರೆ ಎಂದು ಹೇಳಲಾಗಿದೆ. ಅಲ್ಲದೇ ಶಿವಸೇನೆಗೆ ಕೆಲವು ಪ್ರಮುಖ ಖಾತೆಗಳನ್ನು ನೀಡಿ ಎಂದು ಏಕನಾಥ್ ಶಿಂಧೆ ಅವರು ಬಿಜೆಪಿ ನಾಯಕರ ಮುಂದೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ಇನ್ನೂ ಈ ಬಾರಿಯೂ ಸಹ ಮಹಾಯುತಿ ಸರ್ಕಾರದಲ್ಲೂ ಒಬ್ಬ ಸಿಎಂ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳ ಸೂತ್ರವೇ ಪುನರಾವರ್ತನೆಯಾಗಲಿದೆಬಿಜೆಪಿಯಿಂದ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಅವರ ಹೆಸರು ಬಹುತೇಕ ಖಚಿತವಾಗಿದೆ. ಏಕನಾಥ್ ಶಿಂಧೆ ಅವರನ್ನು ಸಂಪೂರ್ಣವಾಗಿ ಮನವೊಲಿಸಲು ಬಿಜೆಪಿ ಬಯಸಿದ್ದು, ಇದಾದ ಬಳಿಕ ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಹೆಸರು ಘೋಷಣೆಯಾಗಲಿದೆ. ಅಲ್ಲದೇ ಎನ್‌ಸಿಪಿಯ ಅಜಿತ್ ಬಣದಿಂದ ಅಜಿತ್ ಪವಾರ್ ಅವರು ಮತ್ತೆ ಉಪ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.












Click it and Unblock the Notifications