ಯುಪಿಯಲ್ಲಿ ದಟ್ಟ ಮಂಜು: ರಾತ್ರಿ 8 ರಿಂದ ಬೆಳಿಗ್ಗೆ 8ರವರೆಗೆ ಬಸ್ ಸಂಚಾರಕ್ಕೆ ತಡೆ
ಲಕ್ನೋ ಡಿಸೆಂಬರ್ 20: ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಳಿ ಹೆಚ್ಚಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಎಲ್ಲೆಡೆ ದಟ್ಟ ಮಂಜು ಆವರಿಸಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ದಟ್ಟ ಮಂಜು ಆರವಿಸಿದ್ದು ಗೋಚರತೆ ಕಡಿಮೆಯಾಗಿದೆ. ಹೆಚ್ಚುತ್ತಿರುವ ಚಳಿಯಿಂದಾಗಿ ಜನರ ಓಡಾಟಕ್ಕೂ ತೊಂದರೆಯಾಗಿದೆ. ದಟ್ಟವಾದ ಮಂಜಿನಿಂದಾಗಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (UPSRTC) ಬಸ್‌ಗಳ ಸಮಯವನ್ನು ಬದಲಾಯಿಸಲಾಯಿಸಿದೆ.
ರಾಜ್ಯದಲ್ಲಿ ಮಂಜು ಕವಿದಿರುವ ಹಿನ್ನೆಲೆಯಲ್ಲಿ ರಾತ್ರಿ 8 ರಿಂದ ಬೆಳಗ್ಗೆ 8 ರವರೆಗೆ ಅಥವಾ ಮಂಜು ಮಾಸುವವರೆಗೆ ರಸ್ತೆ ಮಾರ್ಗದಲ್ಲಿ ಬಸ್‌ಗಳು ಸಂಚರಿಸುವುದಿಲ್ಲ. ಪ್ರಾದೇಶಿಕ ಮತ್ತು ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕರು ಬೆಳಿಗ್ಗೆ 8 ರಿಂದ ಮಧ್ಯರಾತ್ರಿ 12 ರವರೆಗೆ ಬಸ್ ನಿಲ್ದಾಣಗಳಲ್ಲಿ ಮಂಜು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಬಳಿಕ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಉತ್ತರ ಭಾರತದಲ್ಲಿ ಕೊರೆಯುವ ಚಳಿ ಹೆಚ್ಚಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಭಾರತದ ಜನರಿಗೆ ಮಂಜು ಹೆಚ್ಚು ಪ್ರಭಾವ ಬೀರಿದೆ. ಎಲ್ಲೆಡೆ ದಟ್ಟ ಮಂಜು ಆವರಿಸಿದ್ದು ಗೋಚರತೆ ಬಹುತೇಕ ಕಡಿಮೆಯಾಗಿದೆ. ಮಾತ್ರವಲ್ಲದೆ ಇದು ವಾಹನಗಳ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ. ಇದರಿಂದಾಗಿ ಭಾರತೀಯ ರೈಲ್ವೇ ನೂರಾರು ರೈಲುಗಳನ್ನು ರದ್ದುಗೊಳಿಸಿದೆ. ಅನೇಕ ರೈಲುಗಳು ತಮ್ಮ ನಿಗದಿತ ಸಮಯಕ್ಕಿಂತ ತಡವಾಗಿ ಓಡುತ್ತಿವೆ. ಉತ್ತರ ರೈಲ್ವೆ ವಲಯದಲ್ಲಿ ಮಂಜಿನಿಂದಾಗಿ 11 ರೈಲುಗಳು ತಡವಾಗಿ ಪ್ರಯಾಣಿಸಲಿವೆ. IRCTC ಇಂದು 291 ರೈಲುಗಳನ್ನು ರದ್ದುಗೊಳಿಸಿದೆ. ಯುಪಿ, ಬಿಹಾರ, ಪಶ್ಚಿಮ ಬಂಗಾಳದ ರೈಲುಗಳು ರದ್ದಾಗಿವೆ. ಭಾರತೀಯ ರೈಲ್ವೆ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ನೀಡಿದೆ.

ಉತ್ತರ ಭಾರತದಲ್ಲಿ ಹೆಚ್ಚು ಮಂಜು ಕವಿದಿದ್ದು ರೈಲುಗಳು ತಡವಾಗಿ ಓಡುವುದು ಮಾತ್ರವಲ್ಲದೆ, ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ. ದೆಹಲಿ, ಆಗ್ರಾ, ಮೀರತ್, ಮಥುರಾ ಮತ್ತು ಶಹಜಹಾನ್‌ಪುರ, ಬರೇಲಿಯ ರಸ್ತೆ ಮಾರ್ಗದ ಬಸ್‌ಗಳು ನಿಗದಿತ ಸಮಯಕ್ಕಿಂತ ತಡವಾಗಿ ಪ್ರಯಾಣಿಸುತ್ತಿವೆ. ಮತ್ತೊಂದೆಡೆ ಲಕ್ನೋದಿಂದ ಮುಂಬೈ ಮತ್ತು ಬೆಂಗಳೂರಿಗೆ ಇಂಡಿಗೋ ವಿಮಾನಗಳು ಮಂಜಿನಿಂದಾಗಿ ಇಂದು ವಿಳಂಬವಾಗಿವೆ. ಮತ್ತೊಂದೆಡೆ, ಸ್ಪೈಸ್ ಜೆಟ್ ನಿನ್ನೆ ರಾತ್ರಿಯೇ ಲಕ್ನೋದಿಂದ ದೆಹಲಿ ಮತ್ತು ಲಕ್ನೋದಿಂದ ಮುಂಬೈಗೆ ಹಾರಾಟವನ್ನು ರದ್ದುಗೊಳಿಸಿದೆ.












Click it and Unblock the Notifications