Heavy Rain: ಮೆಟ್ರೋ ನಿಲ್ದಾಣದ ಬಳಿ ಮಹಾ ದುರಂತ: ಕೋರ್ಟ್‌ಗೂ ಹಾನಿ?
ಜಲಪ್ರಳಯಕ್ಕೆ ಸಿಲುಕಿ ನಲುಗಿ ಹೋಗಿರುವ ರಾಷ್ಟ್ರ ರಾಜಧಾನಿ ಜನಕ್ಕೆ ಮತ್ತೊಂದು ಶಾಕ್ ಸಿಕ್ಕಿದೆ. ನೋಡ ನೋಡುತ್ತಿದ್ದಂತೆ ಇಡೀ ದೆಹಲಿ ಮುಳುಗಿ ಹೋಗುತ್ತಿದ್ದು, ಈಗ ಮೆಟ್ರೋ ನಿಲ್ದಾಣದ ಸಮೀಪ ಘೋರ ದುರಂತ ನಡೆದಿದೆ. ಹೀಗಾಗಿ ದೆಹಲಿಯಲ್ಲಿ ಮತ್ತಷ್ಟು ಭೀತಿ ಆವರಿಸಿದ್ದು, ಸುಪ್ರೀಂಕೋರ್ಟ್ ಕಟ್ಟಡ ಕೂಡ ಮುಳುಗಡೆ ಭೀತಿ ಎದುರಿಸುತ್ತಿದೆ.
ದೆಹಲಿಯಲ್ಲಿ ಎಲ್ಲವೂ ನೀರಲ್ಲಿ ಕೊಚ್ಚಿ ಹೋಗಿದೆ, ರಸ್ತೆಗಳು ಯಮುನೆಯ ಪ್ರವಾಹದಲ್ಲಿ ಕಾಣೆಯಾಗಿವೆ. ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಲ್ಲಿನ ಮೆಟ್ರೋ ಸಂಚಾರ ಬಂದ್ ಆಗಿದೆ. ಈ ಮಧ್ಯೆ ದೆಹಲಿಯ ಇಂದ್ರಪ್ರಸ್ಥ ಮೆಟ್ರೋ ನಿಲ್ದಾಣದ ಬಳಿ ದೆಹಲಿ ಜಲ ನಿಗಮದ ಕಂಟ್ರೋಲ್ ಸೆಂಟರ್‌ಗೂ ಭಾರಿ ಹಾನಿಯಾಗಿಬಿಟ್ಟಿದೆ, ಈ ಹಾನಿ ಸರಿಪಡಿಸಲು ಅಧಿಕಾರಿಗಳು ಒದ್ದಾಡುತ್ತಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರಿದ್ದು, ದೆಹಲಿ ಜನರು ಭಯಗೊಂಡಿದ್ದಾರೆ. ಅಕಸ್ಮಾತ್ ದೆಹಲಿ ಜಲ ನಿಗಮದ ಕಂಟ್ರೋಲ್ ಸೆಂಟರ್ ಹಿಡಿತಕ್ಕೆ ಸಿಗದೇ ಹೋದರೆ ಸುಪ್ರೀಂಕೋರ್ಟ್ ಆವರಣಕ್ಕೆ ಇನ್ನೇನು ಕೆಲವೇ ನಿಮಿಷದಲ್ಲಿ ನೀರು ನುಗ್ಗುವ ಸಾಧ್ಯತೆ ದಟ್ಟವಾಗಿದೆ.

ಮುಳುಗಡೆ ಆಗುತ್ತಾ ಸುಪ್ರೀಂಕೋರ್ಟ್?
ಹೌದು, ದೇಶದ ಅತ್ಯುನ್ನತ ಕೋರ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ಸುಪ್ರೀಂಕೋರ್ಟ್‌ಗೂ ಈಗ ಭೀತಿ ಎದುರಾಗಿದೆ. ಭೀಕರ ಜಲಪ್ರಳಯಕ್ಕೆ ಸಿಲುಕಿ ಈಗಾಗಲೇ ದೇಶದ ರಾಜಧಾನಿ ದೆಹಲಿ ನಲುಗಿ ಹೋಗಿದೆ. ದೇಶದ ಶಕ್ತಿ ಕೇಂದ್ರ ಅಥವಾ ಹೃದಯ ಎಂದೇ ಕರೆಸಿಕೊಳ್ಳುವ ರಾಜಧಾನಿ ದೆಹಲಿಯಲ್ಲಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಯಮುನಾ ನದಿ ನೀರು ಕ್ಷಣದಿಂದ ಕ್ಷಣಕ್ಕೆ ಏರಿಕೆ ಆಗುತ್ತಲೇ ಇದೆ. ಹೀಗೆ ಎಲ್ಲವೂ ಕೈಮೀರಿ ಹೋಗಿರುವಾಗ ದೆಹಲಿ ಜಲ ನಿಗಮದ ಕಂಟ್ರೋಲ್ ಸೆಂಟರ್ ಕೂಡ ಕೈಕೊಟ್ಟಿದೆ. ಹೀಗಾಗಿ ಯಾವ ಕ್ಷಣ ಏನಾಗುತ್ತೋ ಗೊತ್ತಿಲ್ಲ. ಅಕಸ್ಮಾತ್ ಯಮುನಾ ನದಿ ನೀರು ಸುಪ್ರೀಂಕೋರ್ಟ್ ಆವರಣಕ್ಕೆ ಪ್ರವೇಶ ಪಡೆದರೆ ಪರಿಸ್ಥಿತಿ ಇನ್ನಷ್ಟು ಭೀಕರವಾಗಲಿದೆ.
ದೆಹಲಿಗೆ ಮುಂದೆ ಮತ್ತಷ್ಟು ಕಂಟಕ?
ಮತ್ತೊಂದ್ಕಡೆ ಮಹಾ ಪ್ರವಾಹ ಇನ್ನಷ್ಟು ಹೆಚ್ಚಾಗುವ ಭೀತಿ ಕೂಡ ಆವರಿಸಿದ್ದು, ದೆಹಲಿ ಅಲ್ಲೋಲ ಕಲ್ಲೋಲ ಪರಿಸ್ಥಿತಿಗೆ ತಲುಪಿದೆ. ಅದರಲ್ಲೂ ಕೇಂದ್ರ ಹಾಗೂ ದೆಹಲಿ ರಾಜ್ಯಗಳ ಸರ್ಕಾರಿ ಕಚೇರಿಗಳು ಕೂಡ ಪ್ರವಾಹಕ್ಕೆ ನಲುಗಿವೆ. ದೆಹಲಿ ರಸ್ತೆಗಳು ಥೇಟ್ ನದಿಯಂತೆ ಕಾಣುತ್ತಿದ್ದು, ಜನರು ಪರದಾಡುತ್ತಾ ಸವಾರಿ ಮಾಡುತ್ತಿದ್ದಾರೆ. ಇತ್ತ ಕೇಜ್ರಿವಾಲ್ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಹೆಣಗಾಡುತ್ತಿದೆ. ಅಲ್ಲದೆ ಏಕಾಏಕಿ ನೀರು ದೆಹಲಿ ಒಳಗೆ ನುಗ್ಗಿದ ಪರಿಣಾಮ ಹಾವು, ಚೇಳು ಅಲ್ಲದೆ ವಿಷಜಂತುಗಳ ಭಯದಲ್ಲಿ ರಾಷ್ಟ್ರ ರಾಜಧಾನಿ ಜನರು ನಲುಗಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿ ಜಲ ನಿಗಮ ಕೂಡ ಸಂಕಷ್ಟಕ್ಕೆ ಸಿಲುಕಿದೆ.
40 ವರ್ಷಗಳ ದಾಖಲೆ ಧೂಳ್ ಧೂಳ್!
ಉಕ್ಕಿ ಹರಿಯುತ್ತಿರುವ ಯಮುನಾ ನದಿಯು ಅದೆಷ್ಟು ಭಯಾನಕವಾಗಿ ಕಾಣುತ್ತಿದೆ ಅಂದ್ರೆ, ಜೀವನದಿ ಎಂದು ಕರೆಸಿಕೊಳ್ಳುವ ಯಮುನೆಯ ರೌದ್ರವಾತಾರ ಕಂಡು ದೆಹಲಿ ಜನ ದೂರ ಓಡುತ್ತಿದ್ದಾರೆ. ಅಲ್ಲದೆ ಯಮುನೆಯ ನೀರಿನ ಹರಿವಿನ ಮಟ್ಟ ಸುಮಾರು 40 ವರ್ಷ ಹಿಂದಿನ ದಾಖಲೆಯನ್ನೂ ಧೂಳ್ ಮಾಡಿದೆ. ಈಗ 200 ಮೀಟರ್ ಮೇಲ್ಮಟ್ಟದಲ್ಲಿ ಯಮುನಾ ನದಿ ಹರಿಯುತ್ತಿದೆ. ಹರಿಯಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕಾರಣ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಹೀಗಾಗಿಯೇ ಯಮುನೆ ನೀರಿನ ಮಟ್ಟ ಸತತ ಹಲವು ದಿನದಿಂದ ಕಡಿಮೆ ಆಗುತ್ತಿಲ್ಲ.
ಈಗಾಗಲೇ ದೆಹಲಿ ಸಿಎಂ ಮನೆ ಸಮೀಪದಲ್ಲೇ ನದಿ ನೀರು ಹರಿಯುತ್ತಿದ್ದು, ಇನ್ನೇನು ಕೆಲ ಹೊತ್ತಿನಲ್ಲೇ ಸುಪ್ರೀಂಕೋರ್ಟ್ ಆವರಣಕ್ಕೂ ನೀರು ನುಗ್ಗುವ ಭೀತಿ ಎದುರಾಗಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೊತೆ ಮಹತ್ವದ ಸಭೆ ನಡೆಸಿರುವ ಅರವಿಂದ ಕೇಜ್ರಿವಾಲ್ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆಗೆ ಘೋಷಿಸಿದ್ದಾರೆ. ತುರ್ತು ಕೆಲಸವಿದ್ದರೆ ಮಾತ್ರ ಕಚೇರಿಗೆ ಆಗಮಿಸುವಂತೆ ಸರ್ಕಾರಿ ನೌಕರರಿಗೆ ಸಿಎಂ ಕಚೇರಿ ತಿಳಿಸಿದೆ. ಹೀಗೆ ಎಲ್ಲಾ ಸಂಕಷ್ಟಗಳ ನಡುವೆ ಈಗ ದೆಹಲಿಯ ಜಲ ಮಂಡಳಿ ಕೂಡ ಸಂಕಷ್ಟಕ್ಕೆ ಸಿಲುಕಿ ಪರಿಸ್ಥಿತಿ ಸಂಪೂರ್ಣ ಕೈಮೀರಿ ಹೋಗಿದೆ.












Click it and Unblock the Notifications