Delhi Services Bill: ದೆಹಲಿ ಸೇವಾ ಮಸೂದೆ ಲೋಕಸಭೆಯಲ್ಲಿ ಮಂಡನೆ- ರಾಷ್ಟ್ರ ರಾಜಧಾನಿ ಮೇಲಿನ ನಿಯಂತ್ರಣ ಕಳೆದುಕೊಂಡ ಕೇಜ್ರಿವಾಲ್
ನವದೆಹಲಿ, ಆಗಸ್ಟ್ 01: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಲೋಕಸಭೆಯಲ್ಲಿ ದೆಹಲಿ ಸೇವಾ ಮಸೂದೆಯನ್ನು ಮಂಡಿಸಿದರು. ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶದ (ತಿದ್ದುಪಡಿ) ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ ವಿರೋಧ ಪಕ್ಷಗಳ ಆಕ್ಷೇಪಣೆಗಳನ್ನು 'ರಾಜಕೀಯ' ಎಂದು ಕರೆದರು.
ಕೆಳಮನೆಯಲ್ಲಿ ಮಸೂದೆಯನ್ನು ಮಂಡಿಸಲು ಅನುಮತಿ ಕೋರಿದ ಅಮಿತ್ ಶಾ, 'ದೆಹಲಿಯಲ್ಲಿ ಯಾವುದೇ ಕಾನೂನು ತರುವ ಅಧಿಕಾರವನ್ನು ಲೋಕಸಭೆಗೆ ನೀಡಲಾಗಿದೆ' ಎಂದು ಹೇಳಿದರು.

'ದೆಹಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನನ್ನು ಅಂಗೀಕರಿಸುವ ಅಧಿಕಾರವನ್ನು ಸಂವಿಧಾನವು ಸದನಕ್ಕೆ ನೀಡಿದೆ. ದೆಹಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತು ಯಾವುದೇ ಕಾನೂನನ್ನು ತರಬಹುದು' ಎಂದು ಸ್ಪಷ್ಟಪಡಿಸಿದರು.
ಈ ಕುರಿತಾದ ಎಲ್ಲಾ ಆಕ್ಷೇಪಣೆಗಳು ರಾಜಕೀಯ ಪ್ರೇರಿತವಾಗಿವೆ. ದಯವಿಟ್ಟು ಈ ಮಸೂದೆಯನ್ನು ತರಲು ನನಗೆ ಅನುಮತಿ ನೀಡಿ ಎಂದು ಅಮಿತ್ ಶಾ ಹೇಳಿದರು. ಈ ವೇಳೆ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗುತ್ತಿದ್ದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ದೆಹಲಿಯ ಮೇಲೆ ಕೇಂದ್ರ ಸರ್ಕಾರ ಅಧಿಕಾರ ಹೊಂದುವುದು ಸಂವಿಧಾನ ವಿರೋಧಿ ನೀತಿಯಾಗಿದೆ. ಜನರಿಂದ ಆಯ್ಕೆಯಾಗಿರುವ ರಾಜ್ಯ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸುವುದು ಕಾನೂನು ಉಲ್ಲಂಗನೆಯಾಗಿದೆ ಎಂದು ಹೇಳಿದರು.
'ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುತ್ತಿದೆ. ರಾಜ್ಯ ಸರ್ಕಾರ ಕಾನೂನುಗಳನ್ನು ತರುವ ಅಧಿಕಾರವನ್ನು ಈ ಮಸೂದೆಯು ಕಸಿದುಕೊಳ್ಳುತ್ತದೆ. ಸೇವಾ ಕ್ಷೇತ್ರಗಳಲ್ಲಿ ಕಾನೂನು ತರುವ ಅಧಿಕಾರವನ್ನು ದೆಹಲಿ ಸರ್ಕಾರ ಹೊಂದಿರಬೇಕು' ಎಂದು ಚೌಧರಿ ಪ್ರತಿಪಾದಿಸಿದರು.

'ಮಸೂದೆಯು ಫೆಡರಲಿಸಂ ತತ್ವಗಳಿಗೆ ವಿರುದ್ಧವಾಗಿದೆ. ಚುನಾಯಿತ ಸರ್ಕಾರವು ಯಾವುದೇ ಆಡಳಿತಾತ್ಮಕ ಮತ್ತು ಅಧಿಕಾರಶಾಹಿ ನಿಯಂತ್ರಣವನ್ನು ಹೊಂದಿಲ್ಲದಿದ್ದರೆ, ಅಧಿಕಾರ ಹೊಂದುವುದರ ಉದ್ದೇಶವೇನು?' ಎಂದು ಸಮಾಜವಾದಿ ಪಕ್ಷದ ಸಂಸದ ಎನ್‌ಕೆ ಪ್ರೇಮಚಂದ್ರನ್ ಕೇಳಿದರು.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಮಸೂದೆಯನ್ನು ವಿರೋಧಿಸಿದರು. ಇದು ಅಧಿಕಾರದ ಪ್ರತ್ಯೇಕತೆಯ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಹಾಗೂ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಕೇಂದ್ರಕ್ಕೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮಸೂದೆ ಸಲೀಸಾಗಿ ಪಾಸಾಯಿತು.
ದೆಹಲಿ ಸೇವಾ ಮಸೂದೆ ವಿರುದ್ಧದ ಹೋರಾಟದಲ್ಲಿ ಆಮ್ ಆದ್ಮಿ ಪಕ್ಷ ಇಂದು ಭಾರಿ ಹಿನ್ನಡೆ ಅನುಭವಿಸಿದಂತಾಗಿದೆ.












Click it and Unblock the Notifications