ದೆಹಲಿ ಚುನಾವಣೆಯಲ್ಲಿ ಗೆಲ್ಲುವುದು ಪಕ್ಷಗಳ ಅಭ್ಯರ್ಥಿನಾ? ಗ್ಯಾರಂಟಿ ಯೋಜನೆನಾ?

ನವದೆಹಲಿ, ಫೆಬ್ರವರಿ 03: ದೇಶದ ಜನ ದೆಹಲಿ ವಿಧಾನಸಭಾ ಚುನಾವಣೆಯತ್ತ ಕಣ್ಣು ನೆಟ್ಟಿದ್ದಾರೆ. ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ದೇಶದ ಜನ ಕುತೂಹಲದಿಂದ ನೋಡುತ್ತಿದ್ದಾರೆ. ಪ್ರಮುಖ ಮೂರು ಪಕ್ಷದ ನಾಯಕರು ಜಿದ್ದಿಗೆ ಬಿದ್ದಂತೆ ಮತ ಸೆಳೆಯಲು ಹೋರಾಟ ಮಾಡುತ್ತಿದ್ದು, ಮತದಾರರು ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬುದನ್ನು ನೋಡುವುದಕ್ಕೆ ಇನ್ನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದೆ. ಸದ್ಯ ಮತದಾನಕ್ಕೆ ಇನ್ನೊಂದೇ ದಿನ ಬಾಕಿಯಿದೆ. ಮೂರು ಪಕ್ಷಗಳು ಮತದಾರರಿಗೆ ಬಂಪರ್ ಭಾಗ್ಯಗಳನ್ನು ಘೋಷಿಸಿರುವ ಕಾರಣದಿಂದಾಗಿ ಇಲ್ಲಿ ಯಾರು ಗೆದ್ದರೂ ಮತದಾರರಿಗೆ ಸಿಗಬೇಕಾಗಿರುವುದು ಸಿಕ್ಕೇ ಸಿಗುತ್ತದೆ ಎಂಬ ಖುಷಿಯಲ್ಲಿದ್ದಾರೆ.

ಇವತ್ತಿನ ಗ್ಯಾರಂಟಿ ಯೋಜನೆಗಳ ಕಾಲದಲ್ಲಿ ಯಾರು ಹೆಚ್ಚು ಉಚಿತಗಳನ್ನು ನೀಡುವ ಘೋಷಣೆ ಮಾಡುತ್ತಾರೆಯೋ ಅವರಿಗೆ ಮತ ನೀಡುವ ಮನಸ್ಥಿತಿ ಮತದಾರರು ಬಂದು ಬಿಟ್ಟರೆ ಮುಂದಿನ ಗತಿ ಏನು? ಎಂದು ಪ್ರಜ್ಞಾವಂತರು ಕೇಳುತ್ತಿದ್ದಾರೆ. ಆದರೆ ಇಲ್ಲಿ ದೇಶದ ಭವಿಷ್ಯಕ್ಕಿಂತ ಮತದಾರರಿಗೆ ಗ್ಯಾರಂಟಿ ಯೋಜನೆಗಳನ್ನು ತೋರಿಸಿ ಮತ ಕೇಳುವುದು ಮತ್ತು ಅಧಿಕಾರ ಪಡೆಯುವುದಷ್ಟೇ ರಾಜಕೀಯ ಪಕ್ಷಗಳ ಅಜೆಂಡಾ ಆಗಿರುವುದರಿಂದ ಅದನ್ನು ಅಧಿಕಾರದ ಬಯಕೆ ಹೊಂದಿರುವ ಎಲ್ಲ ಪಕ್ಷಗಳು ಮಾಡುವುದು ಅನಿವಾರ್ಯವಾಗುತ್ತಿದೆ. ಇದರಿಂದ ಲಾಭನಷ್ಟದ ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟು ಜನಸಾಮಾನ್ಯರು ನನಗೆಷ್ಟು ಲಾಭವಾಗುತ್ತದೆ ಎಂಬುದನ್ನಷ್ಟೆ ನೋಡುತ್ತಿದ್ದಾರೆ.

Delhi Election 2025 Who Will Win Candidates or Promises

ಬಡತನ ರೇಖೆಗಿಂತ ಕೆಳಗಿರುವ ಗೃಹಿಣಿಯರಿಗೆ ಮಾಸಿಕವಾಗಿ ಎರಡೋ, ಎರಡುವರೆ ಸಾವಿರವೋ ಸಿಗುತ್ತದೆ ಎನ್ನುವುದಾದರೆ ಅದು ಆಕೆಯ ಕುಟುಂಬ ನಿರ್ವಹಣೆಗೆ ಆಧಾರವಾಗುತ್ತದೆ. ಆದರೆ ಇಲ್ಲಿ ಸರ್ಕಾರದ ಹಣ ಎನ್ನುವ ಕಾರಣಕ್ಕಾಗಿ ಯೋಜನೆಯನ್ನು ಪಡೆಯಲು ಅರ್ಹರು ಅನರ್ಹರು ಎಂಬ ಬೇಧಭಾವವಿಲ್ಲದೆ ಎಲ್ಲರೂ ಮುಂದೆ ಬಂದೇ ಬರುತ್ತಾರೆ. ಇದರಿಂದ ಆರ್ಥಿಕ ಹೊರೆಯಾಗುತ್ತದೆ. ಅದರ ಪರಿಣಾಮ ಬೆಲೆ ಏರಿಕೆಗಳಾಗುತ್ತವೆ. ಅಭಿವೃದ್ಧಿ ಕುಂಠಿತವಾಗುತ್ತವೆ. ಇದನ್ನು ಯೋಜನೆಯ ಲಾಭಪಡೆದವನು, ಪಡೆಯದವನು ಎಲ್ಲರೂ ಅನುಭವಿಸಬೇಕಾಗುತ್ತದೆ.

ದೆಹಲಿ ಗದ್ದುಗೆ ಮೇಲೆ ಕಣ್ಣಿಟ್ಟ ಪಕ್ಷಗಳು

ದೆಹಲಿ ಗದ್ದುಗೆಯ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಭುತ್ವ ಸಾಧಿಸಲು ಹವಣಿಸುತ್ತಿದ್ದರೆ, ಎಎಪಿಗೆ ಇರುವ ಅಧಿಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ. ಮೊದಲ ಬಾರಿಗೆ ವಿದ್ಯುತ್, ನೀರು ಎಲ್ಲವನ್ನು ಉಚಿತವಾಗಿ ಕೊಟ್ಟು ಎರಡು ಅವಧಿಯ ಅಧಿಕಾರವನ್ನು ಅನುಭವಿಸಿರುವ ಎಎಪಿಗೆ ಈ ಬಾರಿಯ ಚುನಾವಣೆ ಈ ಹಿಂದೆ ನಡೆದ ಎರಡು ಅವಧಿಯಷ್ಟು ಸುಲಭವಾಗಿಲ್ಲ. ಭ್ರಷ್ಟಾಚಾರವನ್ನು ಗುಡಿಸಿ ಹಾಕಿ ಬಿಡುತ್ತೇವೆ ಎಂಬ ಘೋಷವಾಕ್ಯದೊಂದಿಗೆ ಪೊರಕೆ ಹಿಡಿದುಕೊಂಡು ಅಧಿಕಾರಕ್ಕೆ ಬಂದ ಎಎಪಿಗೆ ಈ ಬಾರಿಯ ಚುನಾವಣೆ ಕಠಿಣ ಸವಾಲ್ ಆಗಿದೆ. ಇದಕ್ಕೆ ಕಾರಣವಾಗಿರುವುದು ಭ್ರಷ್ಟಾಚಾರದ ಆರೋಪಗಳಾಗಿವೆ.

Delhi Election 2025 Who Will Win Candidates or Promises

ಈ ಚುನಾವಣೆಯಲ್ಲಿ ಅತ್ತ ಕಾಂಗ್ರೆಸ್ ಇತ್ತ ಬಿಜೆಪಿ ಎರಡು ಪಕ್ಷಗಳು ಎಎಪಿಯನ್ನೇ ಟಾರ್ಗೆಟ್ ಮಾಡಿರುವುದರಿಂದ ಎರಡು ಪಕ್ಷದ ಜತೆಗೆ ಹೋರಾಟ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಕಳೆದ ಕೆಲವು ವರ್ಷಗಳಿಂದ ಬಿಜೆಪಿಯನ್ನು ಎದುರಿಸುವ ಸಲುವಾಗಿ ಕಾಂಗ್ರೆಸ್ ಜತೆಗೆ ನಿಂತು ಹೋರಾಟ ಮಾಡಿದ್ದ ಎಎಪಿಗೆ ಇದೀಗ ಕಾಂಗ್ರೆಸ್ ಎದುರು ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಚುನಾವಣೆಯ ಸಲುವಾಗಿ ಮೂರು ಪಕ್ಷಗಳು ಸಮಾವೇಶ, ಪ್ರಚಾರಗಳನ್ನು ನಡೆಸುವ ಮೂಲಕ ಘಟಾನುಘಟಿ ನಾಯಕರು ಮತಯಾಚನೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದರನ್ನೊಂದು ದೂಷಣೆ ಮಾಡುವ ಬದಲಿಗೆ ಇದೆರಡು ಪಕ್ಷಗಳು ಟಾರ್ಗೆಟ್ ಮಾಡಿರುವುದು ಎಎಪಿಯನ್ನೇ.

ಕರ್ನಾಟಕದ 'ಕೈ' ತಂತ್ರ ದೆಹಲಿಯಲ್ಲಿ ಫಲಿಸುತ್ತಾ?

ಐಎನ್ ಡಿಐಎ ರಚನೆ ನಂತರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಎಎಪಿ ಪಕ್ಷವು ಕಾಂಗ್ರೆಸ್ ನ್ನು ಹತ್ತಿರಕ್ಕೂ ಬಿಟ್ಟುಕೊಂಡಿರಲಿಲ್ಲ. ನಾಮಕಾವಸ್ಥೆಗೆ ಎಎಪಿ ಒಕ್ಕೂಟದಲ್ಲಿತ್ತಾದರೂ ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡರೆ ವಿಧಾನಸಭೆಯಲ್ಲಿಯೂ ಮೈತ್ರಿ ಮುಂದುವರೆಸಬೇಕಾಗುತ್ತದೆ. ನಮ್ಮದೇ ಪ್ರಾಬಲ್ಯದ ಕ್ಷೇತ್ರಗಳನ್ನು ನಾವೇಕೆ ಕಾಂಗ್ರೆಸ್ ಗೆ ಬಿಟ್ಟುಕೊಡಬೇಕು. ಒಂದು ವೇಳೆ ಅವರಿಗೆ ನಮ್ಮ ಪ್ರಾಬಲ್ಯದ ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಮುಂದೆ ನಮಗೆ ಕಷ್ಟವಾಗುತ್ತದೆ ಎಂಬ ಭಯ ಎಎಪಿಗೆ ಇತ್ತು. ಹೀಗಾಗಿಯೇ ಅವರು ಕಾಂಗ್ರೆಸ್ ನಿಂದ ಅಂತರ ಕಾಯ್ದು ಕೊಂಡಿದ್ದರು.

Delhi Election 2025 Who Will Win Candidates or Promises

ಇಲ್ಲಿ ತನಕ ಇಬ್ಬರು (ಕಾಂಗ್ರೆಸ್-ಎಎಪಿ) ಒಟ್ಟಾಗಿ ಮೋದಿ ಮೇಲೆ ಹರಿಹಾಯುತ್ತಿದ್ದವರು ಈ ಬಾರಿಯ ಚುನಾವಣೆಯಲ್ಲಿ ಒಬ್ಬರನೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುವಂತಹ ಅಗ್ನಿಪರೀಕ್ಷೆಗಿಳಿದಿದ್ದಾರೆ. ಒಂದು ವೇಳೆ ಹಿಂದಿನ ಅವಧಿಯಷ್ಟು ಸ್ಥಾನಗಳು ಬಾರದೆ ಹೋದರೂ ಬಹುಮತ ಪಡೆಯುವಷ್ಟು ಸ್ಥಾನಗಳನ್ನು ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವುದು ಎಎಪಿ ನಾಯಕರ ವಿಶ್ವಾಸವಾಗಿದೆ. ಅತ್ತ ಕಾಂಗ್ರೆಸ್ ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಕರ್ನಾಟಕದಲ್ಲಿ ನಿರೀಕ್ಷೆ ಮೀರಿದ ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿದ್ದರಿಂದ ಕರ್ನಾಟಕದ ತಂತ್ರ ದೆಹಲಿಯಲ್ಲಿಯೂ ಫಲಿಸುತ್ತದೆ ಎಂಬ ನಿರೀಕ್ಷೆಯಲ್ಲಿದೆ.

ಹಲವು ಪ್ರಶ್ನೆಗಳಿಗೆ ಉತ್ತರವಾಗಲಿರುವ ದೆಹಲಿ ಚುನಾವಣೆ

ಇದೆರಡು ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ನಾಯಕರ ನಿರೀಕ್ಷೆ ದೊಡ್ಡಮಟ್ಟದಲ್ಲಿಯೇ ಇದೆ. ಈಗಾಗಲೇ ಮಧ್ಯಮವರ್ಗದವರ ಮೇಲೆ ನಿಗಾವಿಟ್ಟು ಮಂಡಿಸಿರುವ ಬಜೆಟ್ ಮತ್ತು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಉಚಿತ ಭಾಗ್ಯಗಳು ಮತ್ತು ಹಲವು ಸೌಲಭ್ಯಗಳ ಭರವಸೆಗಳನ್ನು ಮತದಾರರು ಪುರಸ್ಕರಿಸುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ. ಜತೆಗೆ ಬಿಜೆಪಿಯ ಘಟಾನುಘಟಿ ನಾಯಕರು ದೆಹಲಿ ವಿಧಾನಸಭಾ ಕ್ಷೇತ್ರಗಳ ಮೂಲೆ ಮೂಲೆಗೂ ಹೋಗಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿದಂತೆ ಹಲವು ನಾಯಕರು ದೆಹಲಿಯಲ್ಲಿ ಪ್ರವಾಸ ಮಾಡಿ ಮತಯಾಚನೆ ಮಾಡಿದ್ದಾರೆ.

ಮೊದಲಿಗೆ ಹೋಲಿಸಿದರೆ ಈಗಿನ ರಾಜಕೀಯ ವರಸೆ ಬದಲಾಗಿದೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ ಬಳಿಕ ಅದನ್ನು ಅಧಿಕಾರಕ್ಕೆ ಬರುವ ಪಕ್ಷಗಳು ಅನುಷ್ಠಾನ ಮಾಡಲೇ ಬೇಕಾಗುತ್ತದೆ. ಮೊದಲಾಗಿದ್ದರೆ ನೂರಾರು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಪಡೆದ ಮೇಲೆ ತೆಪ್ಪಗೆ ಕುಳಿತು ಬಿಡಬಹುದಿತ್ತು. ಈಗ ಹಾಗಿಲ್ಲ. ಯಾರು ಏನು ಭರವಸೆ ನೀಡಿದ್ದಾರೋ ಅದರಲ್ಲೂ ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲೇ ಬೇಕಾಗುತ್ತದೆ. ಬಹುಶಃ ದೆಹಲಿ ಚುನಾವಣೆಯನ್ನು ಗಮನಿಸಿದ್ದೇ ಆದರೆ ಮುಂದೆ ಬರಲಿರುವ ಬೇರೆ ಬೇರೆ ರಾಜ್ಯಗಳಲ್ಲಿನ ಚುನಾವಣೆಗಳೆಲ್ಲವೂ ಗ್ಯಾರಂಟಿ ಯೋಜನೆಗಳ ಮೇಲೆಯೇ ನಡೆಯಲಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+