Delhi Elections 2025: ದೆಹಲಿ ಚುನಾವಣೆ ಫಲಿತಾಂಶದ ಬಗ್ಗೆ ಅರವಿಂದ್ ಕೇಜ್ರಿವಾಲ್ ಭವಿಷ್ಯ
ಬೆಂಗಳೂರು, ಫೆಬ್ರವರಿ 04: ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರದ ಕಾವು ಜೋರಾಗಿದ್ದು, ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದಿದ್ದೆ. ಇತ್ತ ಬಿಜೆಪಿ, ಕಾಂಗ್ರೆಸ್ ಹಾಗೂ ಆಡಳಿತರೂಢ ಎಎಪಿ ಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರವನ್ನ ಹಾಕಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಚುನಾವಣೆಯಲ್ಲಿನ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು 70 ಸ್ಥಾನಗಳ ಪೈಕಿ 55 ರಲ್ಲಿ ಗೆಲ್ಲುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸೋಮವಾರ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಗರದಲ್ಲಿನ ಎಲ್ಲಾ ಉಚಿತ ಯೋಜನೆಗಳನ್ನು ಸ್ಥಗಿತಗೊಳಿಸುತ್ತದೆ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಫೆಬ್ರವರಿ 5 ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು, ಇದರ ಬೆನ್ನಲ್ಲೇ ಹಿಂದಿಯಲ್ಲಿ ಪೋಸ್ಟ್ ಮಾಡಿದ ಕೇಜ್ರಿವಾಲ್, ನನ್ನ ಅಂದಾಜಿನ ಪ್ರಕಾರ, ಆಮ್ ಆದ್ಮಿ ಪಕ್ಷವು 55 ಸ್ಥಾನಗಳನ್ನು ಪಡೆಯಲಿದೆ.
ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರೆ ಈ ಸಂಖ್ಯೆ 60 ಮೀರಬಹುದು ಎಂದು ಅವರು ನಂಬುತ್ತಾರೆ. ಮಹಿಳೆಯರು ಸಾಕಷ್ಟು ಪ್ರಯತ್ನ ಮಾಡಿದರೆ ಮತ್ತು ಅವರ ಕುಟುಂಬದ ಪುರುಷರನ್ನು ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕುವಂತೆ ಮನವೊಲಿಸಿದರೆ ಎಎಪಿ 60ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ, ಎಎಪಿ ರಾಜಕೀಯ ಪ್ರಾಬಲ್ಯ ಸಾಧಿಸಿತು, 2015 ರಲ್ಲಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತು ಮತ್ತು 2020 ರಲ್ಲಿ 62 ಸ್ಥಾನಗಳನ್ನು ಗಳಿಸಿತು. ಬಿಜೆಪಿ ಕ್ರಮವಾಗಿ ಮೂರು ಮತ್ತು ಎಂಟು ಸ್ಥಾನಗಳನ್ನು ಮಾತ್ರ ಗಳಿಸಿತು, ಆದರೆ ಕಾಂಗ್ರೆಸ್ ಎರಡೂ ಬಾರಿ ಶೂನ್ಯ ಸ್ಥಾನಗಳನ್ನು ಗಳಿಸಿತು. ಈ ಬಾರಿಯ ಚುನಾವಣೆ ಪ್ರತಿಷ್ಠೆಯಾಗಿದ್ದು, ಸ್ಪರ್ಧಾತ್ಮಕವಾಗಿ ರೂಪುಗೊಳ್ಳುತ್ತಿದೆ, ಬಿಜೆಪಿ ಎಎಪಿಯ ಪರಂಪರೆಯನ್ನು ಮುರಿಯುವ ವಿಶ್ವಾಸ ಹೊಂದಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಆಕ್ರಮಣಕಾರಿ ಪ್ರಯತ್ನ ನಡೆಸುತ್ತಿದೆ.
2013 ರವರೆಗೆ 15 ವರ್ಷಗಳ ಕಾಲ ದೆಹಲಿಯನ್ನು ಆಳಿದ ಕಾಂಗ್ರೆಸ್, ತನ್ನ ಸಾಂಪ್ರದಾಯಿಕ ಮತದಾರರ ನೆಲೆಯನ್ನು, ವಿಶೇಷವಾಗಿ ಗಣನೀಯ ಮುಸ್ಲಿಂ ಮತ್ತು ದಲಿತ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳಲ್ಲಿ, ಮರಳಿ ಪಡೆಯುವತ್ತ ಗಮನಹರಿಸುತ್ತಿದೆ. ಸೀಲಾಂಪುರ್, ಮತಿಯಾ ಮಹಲ್, ಬಲ್ಲಿಮಾರನ್, ಓಖ್ಲಾ, ಚಾಂದನಿ ಚೌಕ್, ಸೀಮಾಪುರಿ ಮತ್ತು ಸುಲ್ತಾನ್‌ಪುರ್ ಮಜ್ರಾ ಸೇರಿದಂತೆ ಕನಿಷ್ಠ 12 ಪ್ರಮುಖ ಸ್ಥಾನಗಳಲ್ಲಿ ಪಕ್ಷವು ಎಎಪಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದಲಿತ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸಕ್ರಿಯವಾಗಿ ಪ್ರಚಾರ ಮಾಡಿದ್ದಾರೆ. ಸೀಲಾಂಪುರ್ ಮತ್ತು ಇತರ ಪ್ರದೇಶಗಳಲ್ಲಿ ರಾಹುಲ್ ಗಾಂಧಿ ಅವರ ರ್ಯಾಲಿಗಳ ಮೂಲಕ ಕಾಂಗ್ರೆಸ್ ಪರವಾಗಿ ಮತ ಸೆಳೆಯುವ ಗುರಿಯನ್ನ ಕೈ ನಾಯಕರು ಹಾಕಿಕೊಂಡಿದ್ದಾರೆ.












Click it and Unblock the Notifications