ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ಜಾಮೀನು
ನವದೆಹಲಿ, ಜುಲೈ 20: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ, ಭಾರತೀಯ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ನಿಯಮಿತ ಜಾಮೀನು ನೀಡಿದೆ.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ದೆಹಲಿ ಪೊಲೀಸರು ಸಿಂಗ್ ಅವರ ಜಾಮೀನು ಕೋರಿಕೆಯನ್ನು ವಿರೋಧಿಸದ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ತನ್ನ ತೀರ್ಪನ್ನು ಸಂಜೆಗೆ ಕಾಯ್ದಿರಿಸಿತ್ತು.

ಕುಸ್ತಿಪಟುಗಳ ಪರವಾಗಿ ಹಾಜರಾಗಿದ್ದ ವಕೀಲರು ಸಿಂಗ್ ಅವರಿಗೆ ಜಾಮೀನು ನೀಡಬಾರದೆಂದು ನ್ಯಾಯಾಲಯದ ಮುಂದೆ ವಾದಿಸಿದರು.
ಬ್ರಿಜ್ ಭೂಷನ್ ಅವರು ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷಿಗಳನ್ನು ನಾಶಪಡಿಸಬಹುದು ಎಂದು ವಕೀಲರು ವಾದಿಸಿದರು. ಬಿಜೆಪಿ ಸಂಸದರು ದೂರುದಾರರಿಗೆ ಬೆದರಿಕೆ ಹಾಕುವಷ್ಟು ಶಕ್ತಿ ಶಾಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಬಾರದು ಎಂದು ಹೇಳಿದರು.

ಆದರೆ, ಬ್ರಿಜ್ ಭೂಷನ್ ಅವರಿಗೆ ಜಾಮೀನು ನೀಡಬಾರದು ಎಂಬ ವಿಚಾರದಲ್ಲಿ ದೆಹಲಿ ಪೊಲೀಸರ ಪರ ವಾದಗಳು ಅಷ್ಟೊಂದು ಗಟ್ಟಿಯಾಗಿರಲಿಲ್ಲ. ದೆಹಲಿ ಪೊಲೀಸರ ಪರ ವಕೀಲರು ಬ್ರಿಜ್ ಭೂಷನ್ ಅವರ ಜಾಮೀನನ್ನು ವಿರೋಧಿಸಲಿಲ್ಲ. ಆ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಿ ದೆಹಲಿ ಕೋರ್ಟ್ ತೀರ್ಪು ಪ್ರಕಟಿಸಿದೆ.
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧ ದೆಹಲಿ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು. 100 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ ವಿವರವಾದ ತನಿಖೆಯ ನಂತರ ದೆಹಲಿ ಪೊಲೀಸರು ಫೆಡರೇಶನ್ ಮುಖ್ಯಸ್ಥರ ವಿರುದ್ಧ 1000 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದರು.

ವಿಚಾರಣೆಗೊಳಪಡಿಸಿದವರಲ್ಲಿ 15 ಮಂದಿ ಲೈಂಗಿಕ ಕಿರುಕುಳದ ಆರೋಪ ಮಾಡಿದ ಏಳು ಕುಸ್ತಿಪಟುಗಳ ಪರವಾಗಿ ಸಾಕ್ಷ್ಯ ನೀಡಿದ್ದರು. ಅವರಲ್ಲಿ ಕುಸ್ತಿಪಟುಗಳ ಸ್ನೇಹಿತರು ಮತ್ತು ಕುಟುಂಬದವರು ಇದ್ದರು.
ಬ್ರಿಜ್ ಭೂಷನ್ ವಿರುದ್ಧ ಲೈಂಗಿಕ ಕಿರುಕುಳ, ಹಿಂಬಾಲಿಸುವುದು, ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಗೆ ಕರೆಯುವುದು ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಲಾಗಿತ್ತು. ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿಯಲ್ಲಿ ಬ್ರಿಜ್ ಭೂಷನ್ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿತ್ತು. ಅಪ್ರಾಪ್ತ ವಯಸ್ಸಿನ ಕುಸ್ತಿಪಟುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಬ್ರಿಜ್ ಭೂಷನ್ ವಿರುದ್ಧ ಕೇಳಿಬಂದಿದೆ. ಎರಡು ಪ್ರಕರಣಗಳ ಅಡಿಯಲ್ಲಿ ಅವರು ಮೂರು ಮತ್ತು ಏಳು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.












Click it and Unblock the Notifications