ದೆಹಲಿ ಮಹಿಳಾ ಆಯೋಗ ಅಧ್ಯಕ್ಷೆ ರಾಜೀನಾಮೆ, ಎಎಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನ
ನವದೆಹಲಿ, ಜನವರಿ 05: ಜನವರಿ 19 ರಂದು ನಡೆಯಲಿರುವ ದೆಹಲಿಯ ರಾಜ್ಯಸಭಾ ಚುನಾವಣೆಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಮತ್ತು ಪಕ್ಷದ ಹಿರಿಯ ಸದಸ್ಯೆ ಸ್ವಾತಿ ಮಲಿವಾಲ್ ಅವರನ್ನು ನಾಮನಿರ್ದೇಶನ ಮಾಡುವುದಾಗಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಜಕೀಯ ವ್ಯವಹಾರಗಳ ಸಮಿತಿ ಶುಕ್ರವಾರ ತಿಳಿಸಿದೆ.
ದೆಹಲಿಯ ಮೂವರು ರಾಜ್ಯಸಭಾ ಸಂಸದರ ಆರು ವರ್ಷಗಳ ಅವಧಿ ಈ ತಿಂಗಳಿಗೆ ಕೊನೆಗೊಳ್ಳಲಿದ್ದು, ಹೊಸ ಸದಸ್ಯರನ್ನು ಆಯ್ಕೆ ಮಾಡಲು ಜನವರಿ 19 ರಂದು ಮತದಾನ ನಡೆಯಲಿದೆ. ಇಲ್ಲಿ ಮೂವರು ಸದಸ್ಯರು - ಸಂಜಯ್ ಸಿಂಗ್, ಸುಶೀಲ್ ಕುಮಾರ್ ಗುಪ್ತಾ ಮತ್ತು ನರೇನ್ ದಾಸ್ ಗುಪ್ತಾ - ಜನವರಿ 27 ರಂದು ನಿವೃತ್ತರಾಗಲಿದ್ದಾರೆ.

ಆದಾಗ್ಯೂ, ಎನ್‌ಡಿ ಗುಪ್ತಾ ಮತ್ತು ಜೈಲಿನಲ್ಲಿರುವ ಹಿರಿಯ ನಾಯಕ ಸಂಜಯ್ ಸಿಂಗ್ ಅವರನ್ನು ಮರು ನಾಮನಿರ್ದೇಶನ ಮಾಡಲಾಗುವುದು. ಆದರೆ ಪಕ್ಷದ ಮೂಲಗಳ ಪ್ರಕಾರ ಸುಶೀಲ್ ಕುಮಾರ್ ಗುಪ್ತಾ ಹರಿಯಾಣದ ಚುನಾವಣಾ ರಾಜಕೀಯದತ್ತ ತಮ್ಮ ಗಮನ ನೀಡುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ.
ಎನ್‌ಡಿ ಗುಪ್ತಾ ಪಕ್ಷದ ಖಜಾಂಚಿ ಮತ್ತು ಸುಶೀಲ್ ಗುಪ್ತಾ ಹರಿಯಾಣ ಘಟಕದ ಎಎಪಿ ಅಧ್ಯಕ್ಷರಾಗಿದ್ದಾರೆ. ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. "ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ, ಸಮಿತಿಯು ಇಬ್ಬರು ಸದಸ್ಯರನ್ನು ಮರು ನಾಮನಿರ್ದೇಶನಕ್ಕಾಗಿ ಅನುಮೋದಿಸಲು ನಿರ್ಧರಿಸಿತು. ಆದರೆ ಸುಶೀಲ್ ಕುಮಾರ್ ಗುಪ್ತಾ ಹರಿಯಾಣದ ಚುನಾವಣಾ ರಾಜಕೀಯದತ್ತ ತಮ್ಮ ಗಮನ ನೀಡುವ ಉದ್ದೇಶವನ್ನು ವ್ಯಕ್ತಪಡಿಸಿದರು" ಎಂದು ಪಕ್ಷವು ಹೇಳಿದೆ.
ಸ್ವಾತಿ ಮಲಿವಾಲ್ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ದೆಹಲಿ ಮಹಿಳಾ ಆಯೋಗದ (DCW) ಹಾಲಿ ಅಧ್ಯಕ್ಷೆ. ಡಿಸಿಡಬ್ಲ್ಯೂಗೆ ಸೇರುವ ಮೊದಲು ಮಲಿವಾಲ್ ಅವರು ಸಾರ್ವಜನಿಕ ಕುಂದುಕೊರತೆಗಳ ಕುರಿತು ದೆಹಲಿಯ ಮುಖ್ಯಮಂತ್ರಿಯ ಸಲಹೆಗಾರರಾಗಿ ಕೆಲಸ ಮಾಡಿದವರು. ಮಲಿವಾಲ್ ಅವರು ಭ್ರಷ್ಟಾಚಾರದ ವಿರುದ್ಧ ಭಾರತೀಯ ಚಳವಳಿಯ ಪ್ರಮುಖ ಸದಸ್ಯರಾಗಿದ್ದರು.
ಮಲಿವಾಲ್ ಅವರು ಮಹಿಳೆಯರ ವಿರುದ್ಧದ ದೌರ್ಜನ್ಯ ವಿರುದ್ಧ ಕಠಿಣ ಕಾನೂನುಗಳನ್ನು ಪ್ರತಿಪಾದಿಸಲು ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ವಿವಿಧ ಅಭಿಯಾನಗಳು ಮತ್ತು ಚಳುವಳಿಗಳೊಂದಿಗೆ ತೊಡಗಿಸಿಕೊಂಡಿದ್ದಾರೆ. ಏತನ್ಮಧ್ಯೆ, ಗುರುವಾರ ದೆಹಲಿ ನ್ಯಾಯಾಲಯವು ಪಕ್ಷದ ನಾಯಕ ಸಂಜಯ್ ಸಿಂಗ್ ಅವರಿಗೆ ಜೈಲಿನಿಂದ ಮರು ನಾಮನಿರ್ದೇಶನ ದಾಖಲೆಗಳಿಗೆ ಸಹಿ ಹಾಕಲು ಅನುಮತಿ ನೀಡಿದೆ. ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್ ಅವರು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಅಕ್ಟೋಬರ್ 4, 2023 ರಂದು ಜಾರಿ ನಿರ್ದೇಶನಾಲಯದಿಂದ ಬಂಧಿಸಲಾಯಿತು.












Click it and Unblock the Notifications