ಆಮ್ ಆದ್ಮಿ ಬಿಕ್ಕಟ್ಟು: ನಿರ್ಣಾಯಕ ಸಭೆಗೆ ಕೇಜ್ರಿವಾಲ್ ಗೈರು?
ನವದೆಹಲಿ, ಮಾ 4 : ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಆಮ್ ಆದ್ಮಿ ಪಕ್ಷದ ಬಿಕ್ಕಟ್ಟು ತಾರಕಕ್ಕೇರಿದೆ. ಪಕ್ಷದೊಳಗಿನ ಅಸಮಾಧಾನ ಬಹಿರಂಗವಾಗುತ್ತಲೇ ಬುಧವಾರ (ಮಾ 4) ತರಾತುರಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಕರೆಯಲಾಗಿದೆ.
ಪಕ್ಷದ ಆಂತರಿಕ ಭಿನ್ನಮತದಿಂದ ಖಿನ್ನರಾಗಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರದ ಸಭೆಯಲ್ಲಿ ಭಾಗವಹಿಸದೇ ಇರುವ ಸಾಧ್ಯತೆಯಿದೆ. ಆ ಮೂಲಕ, ಇಬ್ಬರು ಹಿರಿಯ ಭಿನ್ನಮತೀಯ ಮುಖಂಡರಿಗೆ ಟಾಂಗ್ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. (ಏನಿದು ಪಕ್ಷದ ಭಿನ್ನಮತ)
ಪಕ್ಷದ ಮೂಲಗಳ ಪ್ರಕಾರ, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಪ್ರಮುಖ ನಿರ್ಧಾರಕ್ಕೆ ಬುಧವಾರದ ಸಭೆಯಲ್ಲಿ ಬರಲಾಗುತ್ತದೆ.
ದೆಹಲಿಯ ಜನತೆ ನಮ್ಮ ಮೇಲೆ ಸಂಪೂರ್ಣ ವಿಶ್ವಾಸವಿಟ್ಟು ನಮಗೆ ಅಭೂತಪೂರ್ವ ಬೆಂಬಲ ನೀಡಿ ಆಶೀರ್ವದಿಸಿದ್ದಾರೆ, ಪಕ್ಷದ ಬಿಕ್ಕಟ್ಟು ನನಗೆ ವೈಯಕ್ತಿಕ್ತವಾಗಿ ಬಹಳ ಬೇಸರ ತಂದಿದೆ ಮತ್ತು ಮತದಾರರ ಕ್ಷಮೆಯನ್ನು ಯಾಚಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವ ಕೇಜ್ರಿವಾಲ್, ನಾನು ಈ ವಿವಾದದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ದೆಹಲಿಯ ಅಭಿವೃದ್ದಿ ನನ್ನ ಮೊದಲ ಆದ್ಯತೆ, ನಾನು ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಲಿದ್ದೇನೆ ಎಂದಿರುವ ಕೇಜ್ರಿವಾಲ್, ಇಬ್ಬರು ಮುಖಂಡರ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿಯನ್ನು ರಾಜಕೀಯ ವ್ಯವಹಾರ ಕಮಿಟಿಗೆ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಉಲ್ಟಾ ಹೊಡೆದ ಯೋಗೀಂದ್ರ ಯಾದವ್, ಮುಂದೆ ಓದಿ..

ರಜೆ ಮೇಲೆ ತೆರಳಲಿರುವ ಕೇಜ್ರಿವಾಲ್
ಸಕ್ಕರೆ, ಗಂಟಲು ಮತ್ತು ಕಫದ ಸಮಸ್ಯೆಯಿಂದ ಬಳಲುತ್ತಿರುವ ಕೇಜ್ರಿವಾಲ್, ಇದರ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಾರ್ಚ್ ಐದರಿಂದ ಹತ್ತು ದಿನಗಳ ಕಾಲ ಕೇಜ್ರಿವಾಲ್ ವಿಶ್ರಾಂತಿಯಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ. ಕೇಜ್ರಿವಾಲ್, ಜಿಂದಾಲ್ ಅಥವಾ ನಗರದ ಹೊರವಲಯದ ವೈಟ್ ಫೀಲ್ಡ್ ಬಳಿ ಇರುವ 'ಸೌಖ್ಯ' ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ.

ಮನೀಶ್ ಸಿಸೋಡಿಯಾ
ಕೇಜ್ರಿವಾಲ್ ರಜೆಯ ಮೇಲೆ ತೆರಳಿದಾಗ ದೆಹಲಿ ಸರಕಾರವನ್ನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮುನ್ನಡೆಸಲಿದ್ದಾರೆ. ಸಿಸೋಡಿಯಾಗೆ ದೆಹಲಿಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ನೀಡಿ, ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಹೊಸರೂಪ ತರಲು ಕೇಜ್ರಿವಾಲ್ ಮುಂದಿನ ದಿನದಲ್ಲಿ ನಿರ್ಧರಿಸಲಿದ್ದಾರೆ ಎಂದೂ ಈ ಹಿಂದೆ ಸುದ್ದಿಯಾಗಿತ್ತು.

ಉಲ್ಟಾ ಹೊಡೆದ ಯೋಗೇಂದ್ರ ಯಾದವ್
ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಸಂಚಾಲಕ ಹುದ್ದೆಯನ್ನು ಹೊಂದಿರುವ ಕೇಜ್ರಿವಾಲ್ ಅವರನ್ನು ಸಂಚಾಲಕ ಹುದ್ದೆಯಿಂದ ಕೆಳಗಿಳಿಸಲು ಯತ್ನಿಸುತ್ತಿದ್ದಾರೆ ಎನ್ನುವ ಆರೋಪ ಹೊತ್ತಿರುವ ಯೋಗೇಂದ್ರ ಯಾದವ್ ಈಗ ಉಲ್ಟಾ ಹೊಡೆದಿದ್ದಾರೆ. ಕೇಜ್ರಿವಾಲ್ ಅವರೇ ನಮ್ಮ ನಾಯಕರು. ರಾಷ್ಟ್ರೀಯ ಸಂಚಾಲಕ ಹುದ್ದೆಯಲ್ಲಿ ಅವರೇ ಮುಂದುವರಿಯಲಿ, ಇಂದಿನ ಸಭೆಯಲ್ಲಿ ಏನು ನಿರ್ಧಾರಕ್ಕೆ ಬಂದರೂ ಅದಕ್ಕೆ ನಾನು ಬದ್ದನಾಗಿರುತ್ತೇನೆಂದು ಯೋಗೇಂದ್ರ ಯಾದವ್ ಹೇಳಿದ್ದಾರೆ.

ಪಕ್ಷಕ್ಕೆ ತೀವ್ರ ಮುಜುಗರ
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತರಾಗಿರುವ ಶಾಸಕರು ಮತ್ತು ಕಾರ್ಯಕರ್ತರು, ಭಿನ್ನಮತೀಯ ಮುಖಂಡ ಮತ್ತು ಪಕ್ಷದ ಅಧಿಕೃತ ವಕ್ತಾರರೂ ಆಗಿರುವ ಯೋಗೇಂದ್ರ ಯಾದವ್ ನಡೆಸಿತ್ತಿರುವ ಪಕ್ಷ ವಿರೋಧಿ ಚಟುವಟಿಕೆಗಳನ್ನು ವಿಡಿಯೋ ಮೂಲಕ ಬಿಡುಗಡೆ ಮಾಡಿ ಪಕ್ಷಕ್ಕೆ ಇನ್ನಷ್ಟು ಇರಿಸುಮುರಿಸು ತಂದಿದ್ದಾರೆ.

ಕ್ಯಾರೇ ಮಾಡಲ್ಲ ಎಂದ ಪ್ರಶಾಂತ್ ಭೂಷಣ್
ಪಕ್ಷದಲ್ಲಿನ ಸದ್ಯದ ಭಿನ್ನಮತ ಯಾರಿಗೂ ಬೇಕಾಗಿಲ್ಲ. ಕೇಜ್ರಿವಾಲ್ ಅವರು ನನ್ನ ಜೊತೆ ರಾಜಿಗೆ ಸಿದ್ದರಿರಬಹುದು, ಆದರೆ ನಾನು ಅದಕ್ಕೆ ಸಿದ್ದನಿಲ್ಲ. ಬುಧವಾರದಿಂದ ಪಕ್ಷದ ಕಾರ್ಯಕಾರಿಣಿ ಸಭೆ ಆರಂಭವಾಗಲಿದೆ. ನಾನು ಈ ಸಭೆಯಲ್ಲಿ ಭಾಗವಹಿಸಲಿದ್ದೇನೆ, ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆಂದು ಪ್ರಶಾಂತ್ ಭೂಷಣ್ ಹೇಳುವ ಮೂಲಕ ವಿವಾದ ಸುಲಭವಾಗಿ ಶಮನವಾಗದು ಎನ್ನುವ ಮುನ್ಸೂಚನೆ ನೀಡಿದ್ದಾರೆ.

ಸಕ್ಕರೆ ಸಮಸ್ಯೆಯಿಂದಲೂ ಕೇಜ್ರಿ ಬಳಲುತ್ತಿದ್ದಾರೆ
ಕೆಮ್ಮು, ಕಫದ ಸಮಸ್ಯೆಯ ಜೊತೆ ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿರುವ ಕೇಜ್ರಿವಾಲ್ ಅವರ ದೇಹದ ಸಕ್ಕರೆ ಅಂಶ ಕಳೆದ ಹತ್ತು ದಿನದಿಂದ ಮುನ್ನೂರರ ಮೇಲಿರುವುದರಿಂದ, ವೈದ್ಯರು ತುರ್ತಾಗಿ ವಿಶ್ರಾಂತಿ ಮೇಲೆ ತೆರಳುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಮೋದಿ ಕೂಡಾ ಸೂಚಿಸಿದ್ದರು
ಪ್ರಧಾನಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಜ್ರಿವಾಲ್ ಕೆಮ್ಮಿನ ಸಮಸ್ಯೆಗೆ ಬೆಂಗಳೂರು ವೈದ್ಯರ ಸಲಹೆ ಪಡೆಯುವಂತೆ ಮತ್ತು ಯೋಗಾಭ್ಯಾಸಕ್ಕೆ ಒತ್ತು ನೀಡುವಂತೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.












Click it and Unblock the Notifications