Delhi Blast: ದೆಹಲಿ ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ?
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿರುವ ಸ್ಫೋಟವು ಭಾರೀ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹರಿಯಾಣದ ಫರಿದಾಬಾದ್‌ನಿಂದ ಸುಮಾರು 3,000 ಕೆ.ಜಿ ಸ್ಫೋಟಕಗಳನ್ನು ವಶಪಡಿಸಿಕೊಂಡ ಕೆಲವೇ ಗಂಟೆಗಳ ನಂತರ ರಾಷ್ಟ್ರ ರಾಜಧಾನಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸಿರುವುದು ಹಲವು ಸಂಶಯಗಳನ್ನು ಹುಟ್ಟುಹಾಕಿದೆ. ಈ ಸ್ಫೋಟಕ್ಕೂ ಭಯೋತ್ಪಾದಕರಿಗೂ ಲಿಂಕ್ ಇದೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.
ಸೋಮವಾರ ಫರಿದಾಬಾದ್‌ನಲ್ಲಿ ಕಾಶ್ಮೀರಿ ವೈದ್ಯರನ್ನು ಬಂಧಿಸಲಾಗಿದ್ದು, ಅವರ ಬಾಡಿಗೆ ವಸತಿಗೃಹದಿಂದ ಸುಮಾರು 360 ಕೆಜಿ ಸ್ಫೋಟಕಗಳು ಮತ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ ಇತ್ತೀಚೆಗೆ ಭಯೋತ್ಪಾದನೆಗೆ ಸಂಬಂಧಿಸಿದ ಹಲವು ಬೆಳವಣಿಗೆಗಳು ಬೆಳಕಿಗೆ ಬಂದಿದ್ದು, ಸಂಭಾವ್ಯ ಸ್ಫೋಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಜೈಶ್-ಎ-ಮೊಹಮ್ಮದ್ ಜೊತೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಇಬ್ಬರು ಕಾಶ್ಮೀರಿ ವೈದ್ಯರಿಗೆ ಸಂಬಂಧಿಸಿದ ಬಾಡಿಗೆ ವಸತಿಗೃಹದಿಂದ 350 ಕೆಜಿ ಸ್ಫೋಟಕಗಳು, 20 ಟೈಮರ್‌ಗಳು, ರೈಫಲ್‌ಗಳು, ಪಿಸ್ತೂಲ್‌ಗಳು ಮತ್ತು ಬಾಂಬ್ ತಯಾರಿಸುವ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಾದ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿ ಭಾರೀ ಸ್ಫೋಟ ಸಂಭವಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸ್ಫೋಟದ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಆಗಮಿಸಿದೆ. ಇಂದು ಸಂಜೆ 6.52ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ವಾಹನವು ಕೆಂಪು ದೀಪದ ಬಳಿ ನಿಂತಿತು. ಆ ವಾಹನದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಹತ್ತಿರದ ವಾಹನಗಳು ಸಹ ಹಾನಿಗೊಳಗಾಗಿವೆ. ಎಲ್ಲಾ ಏಜೆನ್ಸಿಗಳು, ಎಫ್‌ಎಸ್‌ಎಲ್, ಎನ್‌ಐಎ ಇಲ್ಲಿವೆ. ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಗೃಹ ಸಚಿವರು ಸಹ ನಮಗೆ ಕರೆ ಮಾಡಿದ್ದಾರೆ ಮತ್ತು ಕಾಲಕಾಲಕ್ಕೆ ಅವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಹೇಳಿದ್ದಾರೆ.
ಮಹಾರಾಷ್ಟ್ರ & ಯುಪಿಯಲ್ಲಿ ಹೈಅಲರ್ಟ್
ಹರಿಯಾಣದ ಫರಿದಾಬಾದ್‌ನಿಂದ 360 ಕೆಜಿ ಸಂಭಾವ್ಯ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಂಡ ನಂತರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಮಧ್ಯಾಹ್ನ ವರ್ಷಾದಲ್ಲಿ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಒಟ್ಟಾರೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈಗ ದೆಹಲಿಯಲ್ಲಿನ ಘಟನೆಯ ನಂತರ ಪೊಲೀಸರಿಗೆ ಹೈಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದಾರೆ. ಎಲ್ಲ ಏಜೆನ್ಸಿಗಳು ಜಾಗರೂಕರಾಗಿರಲು ನಿರ್ದೇಶಿಸಲಾಗಿದೆ.
ದೆಹಲಿಯ ಸ್ಫೋಟದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಸೂಕ್ಷ್ಮ ಧಾರ್ಮಿಕ ಸ್ಥಳಗಳು, ಸೂಕ್ಷ್ಮ ಜಿಲ್ಲೆಗಳು ಮತ್ತು ಗಡಿ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಉತ್ತರ ಪ್ರದೇಶದ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಡಿಜಿಪಿ ಸೂಚನೆ ನೀಡಿದ್ದಾರೆ. ಎಲ್ಲ ಭದ್ರತಾ ಸಂಸ್ಥೆಗಳನ್ನು ಸಹ ಕಟ್ಟೆಚ್ಚರದಲ್ಲಿರಿಸಲಾಗಿದೆ. ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸರನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮತ್ತು ತಪಾಸಣೆಗಳನ್ನು ಹೆಚ್ಚಿಸಲು ಲಕ್ನೋದಿಂದ ಆದೇಶ ಹೊರಡಿಸಲಾಗಿದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಅಮಿತಾಭ್ ಯಶ್ ಹೇಳಿದ್ದಾರೆ.












Click it and Unblock the Notifications