Delhi Assembly Election 2025: ದೆಹಲಿ ಚುನಾವಣೆ, ಅಬ್ಬರದ ಪ್ರಚಾರ ಸಂಜೆ ಅಂತ್ಯ
ನವದೆಹಲಿ, ಫೆಬ್ರವರಿ 03: ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿರುವ ದೆಹಲಿ ವಿಧಾನಸಭೆ ಚುನಾವಣೆ-2025ರ ಪ್ರಚಾರ ಸೋಮವಾರ ಸಂಜೆ ಅಂತ್ಯವಾಗಲಿದೆ. ಫೆಬ್ರವರಿ 5ರ ಬುಧವಾರ 70 ಸದಸ್ಯ ಬಲದ ವಿಧಾನಸಭೆಗೆ ಮತದಾನ ನಡೆಯಲಿದೆ, ಫೆಬ್ರವರಿ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ಹಾಲಿ ರಾಜ್ಯದ ಆಡಳಿತ ಪಕ್ಷ ಎಎಪಿ.
ಈ ಬಾರಿಯ ದೆಹಲಿ ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ನೇರ ಎದುರಾಳಿಗಳು. ಆದರೆ ಪ್ರಚಾರದಲ್ಲಿ ಬಿಜೆಪಿ, ಎಎಪಿ ನಡುವೆ ನೇರ ಪೈಪೋಟಿ ಕಾಣುತ್ತಿದೆ. ಎಎಪಿ 2015, 2020ರ ಚುನಾವಣೆಯಲ್ಲಿ ಗೆದ್ದು, ಆಡಳಿತ ನಡೆಸಿದೆ. ಈ ಬಾರಿಯೂ ಗೆದ್ದು ಹ್ಯಾಟ್ರಿಕ್ ಸಾಧಿಸುವ ಉತ್ಸಾಹದಲ್ಲಿದೆ.

ಪ್ರಚಾರ ಸಂಜೆ ಅಂತ್ಯ: ದೆಹಲಿ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರ ಸೋಮವಾರ ಸಂಜೆ 5 ಗಂಟೆಗೆ ಅಂತ್ಯಗೊಳ್ಳಲಿದೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ವಿವಿಧ ರಾಜ್ಯಗಳ ರಾಜಕೀಯ ನಾಯಕರು, ಕಾರ್ಯಕರ್ತರು ಕ್ಷೇತ್ರವನ್ನು ಬಿಟ್ಟು ವಾಪಸ್ ಆಗಬೇಕಿದೆ. ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲು ಅವಕಾಶವಿದೆ.
ಬುಧವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ. ಮಂಗಳವಾರ ಮಧ್ಯಾಹ್ನ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ/ ಸಿಬ್ಬಂದಿಗಳು ಮತಯಂತ್ರದ ಜೊತೆಗೆ ಮತಗಟ್ಟೆಗಳಿಗೆ ತೆರಳಲಿದ್ದಾರೆ. 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಚುನಾವಣಾ ಬಹಿರಂಗ ಪ್ರಚಾರದ ಅಂತಿಮ ದಿನವಾದ ಸೋಮವಾರ ಬಿಜೆಪಿ 22 ರೋಡ್ ಶೋಗಳನ್ನು ಆಯೋಜನೆ ಮಾಡಿದೆ. 25 ವರ್ಷಗಳ ಬಳಿಕ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿರುವ ಪಕ್ಷ ಬಿರುಸಿನಿಂದ ಚುನಾವಣಾ ಪ್ರಚಾರವನ್ನು ನಡೆಸಿದೆ.
ಕಾಂಗ್ರೆಸ್ 15 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ. 2015ರ ಚುನಾವಣೆಯಲ್ಲಿ ಎಎಪಿಗೆ ಅಧಿಕಾರ ಬಿಟ್ಟುಕೊಟ್ಟ ಪಕ್ಷ ಕಳೆದ ಎರಡು ಚುನಾವಣೆಯಲ್ಲಿ ಯಾವುದೇ ಸೀಟುಗಳಲ್ಲಿ ಜಯಗಳಿಸದೇ ರಾಜ್ಯದಲ್ಲಿ ಹಿಡಿತವನ್ನು ಕಳೆದುಕೊಂಡಿದೆ. ಆದರೆ ಈ ಬಾರಿಯೂ ಪಕ್ಷ ಅಬ್ಬರದ ಪ್ರಚಾರ ನಡೆಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಆಮ್ ಆದ್ಮಿ ಪಕ್ಷ ಈ ಬಾರಿಯೂ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಎಎಪಿ-ಬಿಜೆಪಿ ನೇರ ಎದುರಾಳಿಗಳು. ಹಲವು ಕ್ಷೇತ್ರದಲ್ಲಿ ನೇರ ಪೈಪೋಟಿ ನಡೆಯಲಿದೆ ಎಂದು ಅಂದಾಜಿಸಿವೆ. ಸಮೀಕ್ಷೆಗಳ ಪ್ರಕಾರ ಎಎಪಿ ಮತ್ತೆ ಅಧಿಕಾರಕ್ಕೆ ಬರಲಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 1.56 ಕೋಟಿ ಮತದಾರರು ಬುಧವಾ ಮತ ಚಲಾವಣೆಯ ಹಕ್ಕು ಪಡೆದಿದ್ದಾರೆ. 13,766 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ. ವಯೋದ್ಧರು, ವಿಕಲಾಂಗರು ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿತ್ತು. 7,553 ಮತದಾರರ ಪೈಕಿ 6,980 ಮತದಾರರು ಈಗಾಗಲೇ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ದೆಹಲಿ ಚುನಾವಣೆಯ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ವಿವಿಧ ಸಚಿವರು ಸಹ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿಯ ಪ್ರಕಾರ ಆಡಳಿತ ವಿರೋಧಿ ಅಲೆ ಇದೆ. ಭ್ರಷ್ಟಾಚಾರದ ಆರೋಪಗಳು ಎಎಪಿಗೆ ಸಂಕಷ್ಟ ತರಲಿದ್ದು, ಜನರು ಬಿಜೆಪಿ ಬೆಂಬಲಿಸಲಿದ್ದಾರೆ.












Click it and Unblock the Notifications