ಆಮ್ ಆದ್ಮಿಯ ಅಂಧಾ ದರ್ಬಾರ್ ಅಂತ್ಯ: ಮುಂದೇನು?
ನವದೆಹಲಿ, ಫೆ. 15-ಆತುರಗೇಡಿ/ಅರಿವುಗೇಡಿ ಅರವಿಂದ್ ಕೇಜ್ರಿವಾಲಾ ನೇತೃತ್ವದ ಆಮ್ ಆದ್ಮಿ ಪಕ್ಷವು ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡಿದೆ. ಈಗಂತೂ ಬಿಡಿ, ಇದು fastfood ಜಮಾನಾ. ಎಲ್ಲವೂ ಕ್ಷಣಾರ್ಧದಲ್ಲಿ ಮುಗಿದುಹೋಗಬೇಕು; ವ್ಯವಧಾನವೇ ಇಲ್ಲ. ಆದರೂ ತೀರಾ ಈ ಪಾಟಿ ಶತದಿನೋತ್ಸವವೂ ಆಚರಿಸದೆ ಕನಿಷ್ಠ ಹಾಫ್ ಸೆಂಚುರಿಯನ್ನೂ ಬಾರಿಸದೆ ಹಿಟ್ ವಿಕೆಟ್ ಆಗಿದ್ದಾರೆಂದರೆ... ಅರವಿಂದ್ ಕೇಜ್ರಿವಾಲಾ ಬಗ್ಗೆ ಮತ್ತೊಮ್ಮೆ ಹೇಳಲೇಬೇಕಾಗುತ್ತದೆ ಆತುರಗೇಡಿ/ಅರಿವುಗೇಡಿ ಅಂತ.
ಅವಕಾಶವೇ ಇಲ್ಲದಿದ್ದರೂ ಅಧಿಕಾರಕ್ಕೇರುವ ಮುನ್ನ ಅದೆಂಥದ್ದೋ ರೆಫರಂಡಂ ಎಂದು ಜನ ನನಗೆ ಇಮೇಲು, ಮೊಬೈಲು ಮೂಲಕ ಹೇಳಿದ್ದಾರೆ. ಮೊದಲು ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸಿಬಿಡು ಆಮೇಲಿನದು ನೋಡಿಕೊಳ್ಳೋಣ ಅಂತ ಹಾಗಾಗಿ ನಾನು ಅಧಿಕಾರಕ್ಕೇರುವೆ ಎಂದು ಘೋಷಿಸಿದ್ದ ಕೇಜ್ರಿವಾಲಾ ಅಧಿಕಾರದಿಂದ ಇಳಿಯುವ ಮುನ್ನ ಕನಿಷ್ಠ ಸೌಜನ್ಯಕ್ಕಾದರೂ ದಿಲ್ಲಿಯ ಒಬ್ಬೇ ಒಬ್ಬ ಜನಸಾಮಾನ್ಯನನ್ನು ಒಂದೇ ಒಂದು ಮಾತು ಕೇಳದೇ ಹೊರಟೇ ಹೋದರು ಕ್ರೇಜಿವಾಲಾ!
ಅಷ್ಟಕ್ಕೂ ಈ ಕೇಜ್ರಿವಾಲಾಗೆ 6 ತಿಂಗಳ ಟೈಮಿತ್ತು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾರೂ ಈತನ ಸರಕಾರವನ್ನು ಬೀಳಿಸಲು ಯತ್ನಿಸುತ್ತಿರಲಿಲ್ಲ. ಒಂದಷ್ಟು ದಿನ ತಡೆದು, ಎಲ್ಲಾ ಕಾನೂನು ಪ್ರಕ್ರಿಯೆ ಪೂರೈಸಿಕೊಂಡು ಮಹತ್ವದ ಜನ ಲೋಕಪಾಲ್ ವಿಧೇಯಕವನ್ನು ಮಂಡಿಸಬಹುದಿತ್ತು. ನಿನ್ನೆ ಶುಕ್ರವಾರವೇ ವಿಧೇಯಕವನ್ನು ಮಸೂದೆಯಾಗಿಸಿ, ಇಂದು ಶನಿವಾರವೇ ಜನ ಲೋಕಪಾಲದಿಂದ ಏನು ಮಾಡಿಬಿಡುತ್ತಿದ್ದರೊ ಕೇಜ್ರಿವಾಲಾರು !?

ಒನ್ಇಂಡಿಯಾಕನ್ನಡ ಅಂದೇ ಸ್ಪಷ್ಟವಾಗಿ ಬರೆದಿತ್ತು
ಒನ್ಇಂಡಿಯಾಕನ್ನಡ ಅಂದೇ ಸ್ಪಷ್ಟವಾಗಿ ಬರೆದಿತ್ತು... AAP ಅಧಿಕಾರದ ಗದ್ದುಗೆಯೇರುತ್ತಿರುವ ಈ ಸಂದರ್ಭದಲ್ಲಿ ಪಕ್ಷದ ಅಂಧಃಪತನದ ಕ್ಷಣಗಣನೆಯೂ ಪ್ರಾರಂಭವಾಗಿದೆ ಎಂದಿತ್ತು. ಇಂದು, ಅಂಧಾ ದರ್ಬಾರ್ ಅಂತ್ಯವಾಗಿದೆ. ಮುಂದೇನು?

ಬಿಜೆಪಿ ಅಧಿಕಾರಕ್ಕೆ ಯತ್ನಿಸುತ್ತದಾ? ನೋ ಛಾನ್ಸ್!
ಬಿಜೆಪಿ ಅಧಿಕಾರಕ್ಕೆ ಯತ್ನಿಸುತ್ತದಾ? ನೋ ಛಾನ್ಸ್. ದಿಲ್ಲಿ ಬಿಜೆಪಿಯ ಯಜಮಾನ ಡಾ. ಹರ್ಷವರ್ಧನ ಅವರ concious ತುಂಬಾ ತುಂಬಾ ಕ್ಲಿಯರ್ ಆಗಿದೆ. ಹಾಗಾಗಿ ಮತ್ತೆ ಜನರ ಬಳಿ ಹೋಗುವ ನೈತಿಕತೆಯನ್ನು ಡಾ. ಹರ್ಷ ದಿಟ್ಟವಾಗಿ ಪ್ರದರ್ಶಿಸಿದ್ದಾರೆ

ದಿಲ್ಲಿ ವಿಧಾನಸಭೆ ಅಮಾನತು
ಆದರೂ ಶಾಸ್ತ್ರಕ್ಕೆಂದು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು 32 ಶಾಸಕರನ್ನು ಹೊಂದಿರುವ ಬಿಜೆಪಿಯತ್ತ ದೃಷ್ಟಿ ಹರಿಸಬಹುದು. ಆಗಲೂ ನಾ ಒಲ್ಲೆ ಎಂಬುದೇ ಡಾ. ಹರ್ಷರ ನಿರ್ಧಾರವಾಗಿದ್ದರೆ ರಾಜ್ಯಪಾಲರು ಅನಿವಾರ್ಯವಾಗಿ ವಿಧಾನಸಭೆಯನ್ನು ಅಮಾನತುಗೊಳಿಸಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಕೋರಬಹುದು.

ಲೋಕಸಭೆ ಜತೆಗೆ ದಿಲ್ಲಿ ವಿಧಾನಸಭೆಗೂ ಚುನಾವಣೆ
ಹೇಗೂ ಏಪ್ರಿಲ್ ಮೇನಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಅದರ ಜತೆಗೆ ಮತ್ತೆ ದಿಲ್ಲಿ ವಿಧಾನಸಭೆಗೂ ಚುನಾವಣೆ ನಡೆಯುವುದು ಕಡ್ಡಾಯ. ಕೇಜ್ರಿವಾಲಾ ಮುಖ್ಯಮಂತ್ರಿಯಾಗದಿದ್ದರೂ ಇದೇ ಆಗುತ್ತಿದ್ದುದು. ಈಗ ವೃಥಾ ಒಂದಷ್ಟು ಹೆಚ್ಚು ಖರ್ಚುಗಳು ಆಗಿವೆ ಅಷ್ಟೆ. ಹುತಾತ್ಮ ಪೊಲೀಸಪ್ಪನಿಗೆ 1 ಕೋಟಿ ರೂ. ನೀಡಿದ ಸಮಾಧಾನದೊಂದಿಗೆ ಕೇಜ್ರಿವಾಲಾ ನಿರ್ಗಮಿಸಬಹುದು ಅಷ್ಟೇ!

ಮಧ್ಯೆ confuse ಆಗಿದ್ದಂತೂ ದಿಲ್ಲಿಯ ಮಹಾಜನತೆ
ಏಕ ನಗರ-ರಾಜ್ಯವಾದ ದಿಲ್ಲಿಗೆ ಸದ್ಯಕ್ಕೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಆಡಳಿತವೇ ಗತಿ. ಮಧ್ಯೆ confuse ಆಗಿರುವುದಂತೂ ದಿಲ್ಲಿಯ ಮಹಾಜನತೆ. ಆದಷ್ಟು ಬೇಗ ದಿಲ್ಲಿ ರಾಜಕೀಯ ತಿಳಿಯಾಗಲಿ. ಏಕೆಂದರೆ ರಾಷ್ಟ್ರದ ರಾಜಧಾನಿಯನ್ನು ಹೆಚ್ಚು ಕಾಲ ಅತಂತ್ರವಾಗಿಡುವುದು ಒಳ್ಳೆಯ ಲಕ್ಷಣವಲ್ಲ. ಏನಂತೀರಿ ?

ಪ್ರಹಸನದಲ್ಲಿ ಬೇಳೆ ಬೇಯಿಸಿಕೊಂಡಿದ್ದು ಯಾರು
ಇಡೀ ಪ್ರಕರಣ/ಪ್ರಹಸನದಲ್ಲಿ ತನ್ನ ಬೇಳೆ ಬೇಯಿಸಿಕೊಂಡಿದ್ದು ನಿಸ್ಸಂಶಯವಾಗಿ ಕಾಂಗ್ರೆಸ್ ಪಕ್ಷ ಅನ್ನುತ್ತಿದ್ದಾರೆ ಬಿಜೆಪಿಯ ಮಂದಿ. ಇಡೀ ಪ್ರಕರಣ/ಪ್ರಹಸನವನ್ನು ಅಣಕವಾಡುವಂತೆ ದಿಲ್ಲಿಯ ಕಾಂಗ್ರೆಸ್ ಶಾಸಕ ಮೊಹಮದ್ ಅಸೀಫ್ ನಿನ್ನೆ ವಿಧಾನಸಭೆಯಲ್ಲಿ ಕಂಡುಬಂದ ದೃಶ್ಯವಿದು!

ಸಾಮಾಜಿಕ ಕಳಕಳಿಯ ಕೇಜ್ರಿವಾಲಾ ಭವಿಷ್ಯವೇನು?
ಇದೆಲ್ಲಾ ರಾಮಾಯಣ ಮುಗಿದ ಮೇಲೆ ಮೂಡುವ ಕಟ್ಟಕಡೆಯ ಪ್ರಶ್ನೆ ಅರವಿಂದ್ ಕೇಜ್ರಿವಾಲಾ ಎಂಬ ಸಾಮಾಜಿಕ ಕಳಕಳಿಯಿರುವ ವ್ಯಕ್ತಿ ಭವಿಷ್ಯದಲ್ಲಿ ಏನು ಮಾಡಬಹುದು? ಎಂದು. ಕಾಲವೇ ಉತ್ತರಿಸಬೇಕು!












Click it and Unblock the Notifications