Odisha Train Accident: ಒಡಿಶಾ ರೈಲು ದುರಂತದ ಸಾವಿನ ಸಂಖ್ಯೆ ಮತ್ತೆ ಏರಿಕೆ!
ಒಡಿಶಾ: ಭೀಕರ ರೈಲು ದುರಂತದ ಕಹಿಘಟನೆ ನಡೆದು ಬರೋಬ್ಬರಿ 2 ವಾರಗಳೇ ಕಳೆದು ಹೋಗಿವೆ. ಆದರೂ ಸಾವಿನ ಸುದ್ದಿ ಮಾತ್ರ ಕೇಳಿ ಬರುತ್ತಲೇ ಇದೆ. ಈಗಾಗಲೇ 290 ಜನ ಪ್ರಯಾಣಿಕರು ಒಡಿಶಾದ ಭೀಕರ ರೈಲು ದುರಂತದಲ್ಲಿ ಮೃತಪಟ್ಟಿದ್ದರು. ಈಗ ಆ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹೌದು, ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ 3 ರೈಲುಗಳ ನಡುವೆ ಸಂಭವಿಸಿದ ಪರಿಣಾಮ ಒಂದೇ ದಿನದಲ್ಲಿ 250ಕ್ಕೂ ಹೆಚ್ಚು ಜನ ಮೃತಪಟ್ಟಿದ್ರು. ಆದ್ರೆ ರೈಲು ದುರಂತ ಸ್ಥಳದಲ್ಲಿ ಕಾರ್ಯಾಚರಣೆ ಸಂಪೂರ್ಣ ಮುಗಿದ ನಂತರ ಸಾವಿನ ಸಂಖ್ಯೆ 288ಕ್ಕೆ ಏರಿಕೆ ಕಂಡಿತ್ತು. ಈಗಲೂ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಮೊನ್ನೆ ತಾನೆ ಬಿಹಾರದ ಪ್ರಯಾಣಿಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಈಗ ಮತ್ತೆ ಬಿಹಾರ ಮೂಲದ ವ್ಯಕ್ತಿಯೇ ಮೃತಪಟ್ಟಿದ್ದಾರೆ. ಈ ಮೂಲಕ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 291ಕ್ಕೆ ಏರಿಕೆ ಕಂಡಿದೆ (Odisha Train Accident).

ಎಷ್ಟೇ ಪ್ರಯತ್ನಿಸಿದರೂ ಜೀವ ಉಳಿಯಲಿಲ್ಲ
ಅಂದಹಾಗೆ ಬಿಹಾರದ ಭಾಗಲ್ಪುರ ಜಿಲ್ಲೆ ನಿವಾಸಿ ಸಾಹಿಲ್ ಮನ್ಸೂರ್ ಚಿಕಿತ್ಸೆ ಫಲಿಸದೆ ಈಗ ಮೃತಪಟ್ಟಿದ್ದಾರೆ. ಕಿಡ್ನಿ ಸಂಬಂಧಿ ರೋಗದಿಂದ ಕೂಡ ಬಳಲುತ್ತಿದ್ದ ಸಾಹಿಲ್ ಮನ್ಸೂರ್, ಜೂ.2ರಂದು ನಡೆದಿದ್ದ ಭೀಕರ ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಸೂಕ್ತ ಚಿಕಿತ್ಸೆ ನೀಡಿ, ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದರೆ ಸಾಹಿಲ್‌ಗೆ ಅಪಘಾತದಲ್ಲಿ ತೀವ್ರ ಪೆಟ್ಟು ಬಿದ್ದು, ನರಳಾಡುತ್ತಿದ್ದರು. ಹೀಗಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಎಸ್‌ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಸುಧಾಂಶು ಶೇಖರ್ ಮಿಶ್ರಾ ಮಾಹಿತಿ ನೀಡಿದ್ದಾರೆ.
ಸಾವಿನ ಸಂಖ್ಯೆ ಮತ್ತೆ ಹೆಚ್ಚಾಗುತ್ತಾ?
ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ರೈಲು ಅಪಘಾತದಲ್ಲಿ ಗಾಯಗೊಂಡಿದ್ದ ಒಟ್ಟು 205 ಮಂದಿಯನ್ನು ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿರುವ 13 ಮಂದಿ ಸೇರಿ ಒಟ್ಟಾರೆ 46 ಪ್ರಯಾಣಿಕರಿಗೆ ಈಗಲೂ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಮತ್ತೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾರತ ಮಾತ್ರವಲ್ಲ ಇಡೀ ಜಗತ್ತೇ ಘಟನೆ ಕಂಡು ಬೆಚ್ಚಿಬಿದ್ದಿತ್ತು, ಸಾವಿನ ಸಂಖ್ಯೆ ನೋಡಿ ಮರುಗಿತ್ತು. ಹೀಗೆ 288 ಜನರ ಜೀವ ಕಸಿದಿದ್ದ ಭೀಕರ ರೈಲು ಅಪಘಾತ ಇದು. ಮೊನ್ನೆ ಮತ್ತೆ ಒಬ್ಬರ ಜೀವವನ್ನು ತೆಗೆದಿತ್ತು. ಈಗ ಮತ್ತೊಬ್ಬ ಪ್ರಯಾಣಿಕ ಕೂಡ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 291ಕ್ಕೆ ಏರಿಕೆ ಕಂಡಿದೆ.
₹10 ಲಕ್ಷ ಪರಿಹಾರ ಘೋಷಣೆ
ಮತ್ತೊಬ್ಬ ಪ್ರಯಾಣಿಕನ ಸಾವಿನ ಮೂಲಕ ಒಡಿಶಾ ರೈಲು ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 291ಕ್ಕೆ ಏರಿಕೆಯಾಗಿದೆ. ಹಾಗೇ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹10 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ ₹2 ಲಕ್ಷ ರೂಪಾಯಿ ಸೇರಿದಂತೆ ಸಣ್ಣಪುಟ್ಟ ಗಾಯಗಳೊಂದಿಗೆ ನರಳುತ್ತಿರುವ ಇತರ ಪ್ರಯಾಣಿಕರಿಗೆ 50 ಸಾವಿರ ರೂಪಾಯಿ ಪರಿಹಾರವನ್ನ ಈಗಾಗಲೇ ರೈಲ್ವೆ ಇಲಾಖೆ ಘೋಷಿಸಿದೆ. ಹಾಗೇ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಿ, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸುತ್ತಿದೆ. ಇಷ್ಟೆಲ್ಲಾ ನೋವಿನ ನಡುವೆಯೇ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ.

ಬಿಹಾರ ಸರ್ಕಾರದಿಂದ ₹2 ಲಕ್ಷ!
ಒಡಿಶಾ ರೈಲು ಅಪಘಾತದ ಬಳಿಕ ಕೇಂದ್ರ ರೈಲ್ವೆ ಇಲಾಖೆ ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಿದೆ. ಬಿಹಾರ ರಾಜ್ಯದ 54 ಪ್ರಯಾಣಿಕರು ಕೂಡ ದುರಂತದಲ್ಲಿ ಸಾವು ಕಂಡಿದ್ದು, ತಮ್ಮ ರಾಜ್ಯದ ಮೃತರ ಕುಟುಂಬಕ್ಕೆ ಬಿಹಾರ ಸರ್ಕಾರ ನೆರವು ನೀಡುತ್ತಿದೆ. ಬಿಹಾರ ಮೂಲದ ಮೃತ ಪ್ರಯಾಣಿಕರ ಕುಟುಂಬಕ್ಕೆ ₹2 ಹಾಗೂ ಗಾಯಾಳು ಕುಟುಂಬಕ್ಕೆ ₹50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಈಗ ಮೃತಪಟ್ಟ ಪ್ರಯಾಣಿಕ ಸಾಹಿಲ್ ಮನ್ಸೂರ್ ಕೂಡ ಬಿಹಾರ ಮೂಲದ ಪ್ರಯಾಣಿಕ. ಸಾಹಿಲ್ ಜೂನ್ 2ರಂದು ರೈಲು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.












Click it and Unblock the Notifications