ತೆಲಗಿ ಜೊತೆ ಸತ್ತುಹೋದ ಛಾಪಾಕಾಗದ ಹಗರಣದ ಹೊರಬರದ ನಗ್ನ ಸತ್ಯಗಳು!

Posted By:
Subscribe to Oneindia Kannada

ಇಡೀ ದೇಶದ ಅರ್ಥವ್ಯವಸ್ಥೆಯನ್ನೇ ಬುಡಬೇಲು ಮಾಡಿದ್ದ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂಲಾಲ್ ತೆಲಗಿ ಬಹು ಅಂಗಾಂಗ ವೈಫಲ್ಯದಿಂದ ಗುರುವಾರ (ಅ 26) ನಿಧನ ಹೊಂದಿದ್ದಾನೆ. ಇವನ ಜೊತೆಗೆ, ಹಗರಣದ ಕಟುಸತ್ಯಗಳೂ ಸತ್ತುಹೋಗಿವೆ.

ಬೆಳಗಾವಿಯ ಖಾನಾಪುರದಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡು ಅಲ್ಲಿಂದ ಸೌದಿ ಅರೇಬಿಯಾದಲ್ಲಿ ಕೂಲಿ ಕೆಲಸ ಮಾಡಿ, ಭಾರತಕ್ಕೆ ವಾಪಸ್ ಬಂದು ಮುಂಬೈನ ದಲಾಲ್ ಸ್ಟ್ರೀಟ್ ನಲ್ಲಿ ಟ್ರಾವೆಲ್ ಏಜೆನ್ಸಿ ಇಟ್ಟುಕೊಂಡು, ಬಹುಬೇಗ ಶ್ರೀಮಂತನಾಗಲು ತೆಲಗಿ ಹಿಡಿದಿದ್ದು ಅಡ್ಡದಾರಿಯನ್ನ.

ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ನಿಧನ

ನಕಲಿ ವೀಸಾ ದಂಧೆಯಿಂದ ಹಿಡಿದು ಬಹುಕೋಟಿ ಸ್ಟ್ಯಾಂಪ್ ಹಗರಣದವರೆಗೆ ಇವನ ಎಲ್ಲಾ ದಂಧೆಗಳು ಹೊರಬರುವ ವೇಳೆ, ಮಹಾರಾಷ್ಟ್ರ ಮತ್ತು ಕರ್ನಾಟಕದ ರಾಜಕಾರಣಿಗಳು, ಪೊಲೀಸ್ ಮತ್ತು ಇತರ ಇಲಾಖೆಯ ಅಧಿಕಾರಿಗಳು ಇವನಿಂದ ಸಾಕಷ್ಟು ತಿಂದು ತೇಗಿದ್ದರು ಎಂದು ಸುದ್ದಿಯಾಗಿತ್ತು.

ಅಕ್ರಮ ವೀಸಾ ಸಂಬಂಧ 1992ರಲ್ಲಿ ಮುಂಬೈ ಪೊಲೀಸರು ಈತನನ್ನು ಜೈಲಿಗಟ್ಟಿದ್ದರು. ಜೈಲಿನಲ್ಲಿ ಪರಿಚಯವಾದ ರಾಮ್ ರತನ್ ಸೋನಿ ಎನ್ನುವಾತನೇ ತೆಲಗಿಗೆ ನಕಲಿ ಛಾಪಾಕಾಗದದ ಐಡಿಯಾ ಕೊಟ್ಟಿದ್ದು. ಜೈಲಿನಿಂದ ಹೊರಬಂದ ಮೇಲೆ ತೆಲಗಿ, ನಕಲಿ ಛಾಪಾ ಕಾಗದ ಮುದ್ರಣದ ದಂಧೆಗೆ ಕೈಹಾಕಿದ.

'ಮದರ್ ಆಫ್ ಆಲ್ ಕ್ರೈಂ' ಎಂದೇ ಹೆಸರಾಗಿದ್ದ ತೆಲಗಿಯ ಈ ದಂಧೆ 1992-2000ರ ವರೆಗೆ ಅವ್ಯಾಹತವಾಗಿ ಮುಂದುವರಿಯಿತು. ತನಿಖಾಧಿಕಾರಿಗಳ ಪ್ರಕಾರ ಕೇವಲ ಒಂಬತ್ತು ವರ್ಷದಲ್ಲಿ 32ಸಾವಿರ ಕೋಟಿ ದಂಧೆ ನಡೆಸಿದ್ದಾನೆಂದರೆ ಈ ಹಗರಣದ ಕರಾಳತೆಯ ಅರಿವಾಗಬಹುದು.

ಕರ್ನಾಟಕ ಸೇರಿದಂತೆ ಹದಿನೆಂಟು ರಾಜ್ಯಗಳಲ್ಲಿ ತೆಲಗಿಯ ನಕಲಿ ಛಾಪಕಾಗದದ ಪ್ರಭಾವ ಎಷ್ಟರ ಮಟ್ಟಿಗೆ ಬೀರಿತ್ತೆಂದರೆ, ಹಲವು ರಾಜ್ಯಗಳು ಸ್ಟ್ಯಾಂಪ್ ಪೇಪರ್ ಪದ್ದತಿಯನ್ನೇ ರದ್ದುಗೊಳಿಸಿದ್ದವು. 9ವರ್ಷ ತೆಲಗಿ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದರೂ, ಈತನ ಬಂಧನವಾಗಿದ್ದು 2001ರಲ್ಲಿ. 1991 ಮತ್ತು 1996ರಲ್ಲಿ ಈತನ ಮೇಲೆ ಕೇಸ್ ದಾಖಲಾಗಿದ್ದರೂ, ಮುಂಬೈ ಪೊಲೀಸರು ಕಾರ್ಯೋನ್ಮುಖವಾಗಿರಲಿಲ್ಲ. ಮುಂದೆ ಓದಿ..

ರಾಜಕಾರಣಿಗಳ ಸಹಾಯದಿಂದ ಛಾಪಾಕಾಗದ ಮುದ್ರಣಕ್ಕೆ ಬೇಕಾದ ಕಾಗದ

ರಾಜಕಾರಣಿಗಳ ಸಹಾಯದಿಂದ ಛಾಪಾಕಾಗದ ಮುದ್ರಣಕ್ಕೆ ಬೇಕಾದ ಕಾಗದ

ಹಲವು ರಾಜಕಾರಣಿಗಳ, ಅಧಿಕಾರಿಗಳ ಕೃಪೆಯಿಂದಲೇ ತೆಲಗಿಯ ನಕಲಿ ದಂಧೆ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ರಾಜಕಾರಣಿಗಳ ಸಹಾಯದಿಂದಲೇ ನಕಲಿ ಛಾಪಾಕಾಗದ ಮುದ್ರಣಕ್ಕೆ ಬೇಕಾದ ಕಾಗದಗಳನ್ನು ತೆಲಗಿ ಆಮದುಮಾಡಿಕೊಳ್ಳುತ್ತಿದ್ದ ಎನ್ನುವುದೂ ಬಹಿರಂಗವಾಗಿತ್ತು.

ಸ್ಟ್ಯಾಂಪ್ ಪೇಪರಿನ ಸರಣಿ ಸಂಖ್ಯೆ

ಸ್ಟ್ಯಾಂಪ್ ಪೇಪರಿನ ಸರಣಿ ಸಂಖ್ಯೆ

ಇದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಮುಖಂಡರ ನೆರವು ಇವನಿಗೆ ಯಾವ ಮಟ್ಟಿಗೆ ಸಿಕ್ಕಿತ್ತೆಂದರೆ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಇಂಡಿಯನ್ ಸೆಕ್ಯೂರಿಟಿ ಪ್ರೆಸ್ ಮುದ್ರಣಾಲಯದಲ್ಲಿ ಸ್ಟ್ಯಾಂಪ್ ಪೇಪರಿನ ಸರಣಿ ಸಂಖ್ಯೆಯನ್ನು (running serial number) ಪಡೆದುಕೊಂಡು, ಅದೇ ಸಂಖ್ಯೆಯಲ್ಲಿ ನಕಲಿ ಪೇಪರ್ ಮುದ್ರಿಸುತ್ತಿದ್ದ. ಹತ್ತು ರೂಪಾಯಿನಿಂದ ನೂರು ರೂಪಾಯಿವರೆಗೆ ನಕಲಿ ಛಾಪಾ ಕಾಗದ ಮುದ್ರಿಸುತ್ತಿದ್ದ.

ಶಾಸಕರಾಗಿದ್ದ ಅನಿಲ್ ಗೋಟೆ ಬಂಧನ

ಶಾಸಕರಾಗಿದ್ದ ಅನಿಲ್ ಗೋಟೆ ಬಂಧನ

ಮಹಾರಾಷ್ಟ್ರದ ಎಸ್ಪಿ ಶಾಸಕರಾಗಿದ್ದ ಅನಿಲ್ ಗೋಟೆಯವರನ್ನು ಅಧಿಕಾರಿಗಳು ಈ ಕೇಸಿಗೆ ಸಂಬಂಧಿಸಿದಂತೆ ಬಂಧಿಸಿದ್ದರು. ಇದಲ್ಲದೇ, ದೆಹಲಿ ಪೊಲೀಸರು, ಮುದ್ರಾಂಕ ಇಲಾಖೆ, ತೆಲಗಿ ಬಾಯಿಬಿಡದ ಹಲವು ರಾಜಕಾರಣಿಗಳು ಈತನಿಂದ ಭರ್ಜರಿ ಲಂಚ ಪಡೆದಿದ್ದರು ಎಂದು ವರದಿಯಾಗಿದ್ದವು.

ಸಿಬಿಐ ವಿಶೇಷ ನ್ಯಾಯಾಲಯ, 42ವರ್ಷ ಜೈಲು ಶಿಕ್ಷೆ ವಿಧಿಸಿತ್ತು

ಸಿಬಿಐ ವಿಶೇಷ ನ್ಯಾಯಾಲಯ, 42ವರ್ಷ ಜೈಲು ಶಿಕ್ಷೆ ವಿಧಿಸಿತ್ತು

2001ರಲ್ಲಿ ಬೆಳಕಿಗೆ ಬಂದಿದ್ದ ಈ ಹಗರಣದ ತನಿಖೆಯನ್ನು 2004ರಲ್ಲಿ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯ 2010ರಲ್ಲಿ ವಿಚಾರಣೆ ಪೂರ್ಣಗೊಳಿಸಿ ಈತನಿಗೆ 42ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಹಗರಣದಲ್ಲಿ ಕರ್ನಾಟಕದಿಂದ ಕಾಂಗ್ರೆಸ್ಸಿನ ಸಚಿವ ರೋಷನ್ ಬೇಗ್, ಅವರ ಸಹೋದರ ರೇಹಾನ್ ಬೇಗ್ ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರೂ ಕೇಳಿಬಂದಿತ್ತು. ತದನಂತರ ಅವರೆಲ್ಲರೂ ಖುಲಾಷೆಗೊಂಡಿದ್ದರು.

ಪರಪ್ಪನ ಅಗ್ರಹಾರ ಕಾರಾಗೃಹ

ಪರಪ್ಪನ ಅಗ್ರಹಾರ ಕಾರಾಗೃಹ

ವಿಶೇಷ ತನಿಖಾಧಿಕಾರಿಗಳು ಈತನ ವಿಚಾರಣೆಗೆಂದು ತೆಲಗಿಯ ಮುಂಬೈ ಕೊಲಾಬದಲ್ಲಿರುವ ನಿವಾಸಕ್ಕೆ ಭೇಟಿ ನೀಡಿದಾಗ ಮುಂಬೈ ಪೊಲೀಸರು ಈತನ ಜೊತೆಗೆ ಭರ್ಜರಿ ಊಟ ಸವಿಯುತ್ತಿದ್ದರು. ಪರಪ್ಪನ ಅಗ್ರಹಾರ ಕಾರಾಗೃಹದ ಡಿಐಜಿಯಾಗಿದ್ದ ರೂಪಾ ಕೂಡಾ ತನ್ನ ವರದಿಯಲ್ಲಿ ತೆಲಗಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ಸವಲತ್ತಿನ ಬಗ್ಗೆ ವರದಿ ಮಾಡಿದ್ದರು.

ತೆಲಗಿಯ ಸಾವಿನ ಜೊತೆ ಹಗರಣದ ಹಲವು ಕಟುಸತ್ಯಗಳೂ ಸತ್ತುಹೋದವು

ತೆಲಗಿಯ ಸಾವಿನ ಜೊತೆ ಹಗರಣದ ಹಲವು ಕಟುಸತ್ಯಗಳೂ ಸತ್ತುಹೋದವು

ತೆಲಗಿ ಈ ದಂಧೆ ಆರಂಭಿಸಿ, ಜೈಲು ಪಾಲಾಗುವವರೆಗೆ ಈತನ ಬೆಂಬಲಕ್ಕೆ ರಾಜಕಾರಣಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದದ್ದು ಅತ್ಯಂತ ಸ್ಪಷ್ಟ. ಅದರಲ್ಲಿ ಕೆಲವೊಂದು ಹೆಸರುಗಳು ಮಾತ್ರ ಹೊರಗೆ ಬಂದಿದ್ದವು. ಒಟ್ಟಿನಲ್ಲಿ ದೇಶದ ಆರ್ಥಿಕ ವ್ಯವಸ್ಥೆಗೇ ಸಂಚಕಾರ ತಂದಿದ್ದ ಅಬ್ದುಲ್ ಕರೀಂಲಾಲ್ ತೆಲಗಿಯ ಸಾವಿನ ಜೊತೆ ನಕಲಿ ಛಾಪಾ ಕಾಗದದ ಹಲವು ಕಟುಸತ್ಯಗಳೂ ಸತ್ತುಹೋದವು.

ಅಜ್ಮೀರ್ ನಲ್ಲಿ ಬೆಂಗಳೂರು ಪೊಲೀಸರಿಂದ ತೆಲಗಿ ಬಂಧನ

ಅಜ್ಮೀರ್ ನಲ್ಲಿ ಬೆಂಗಳೂರು ಪೊಲೀಸರಿಂದ ತೆಲಗಿ ಬಂಧನ

ಜನವರಿ 2001ರಲ್ಲಿ ದೆಹಲಿಯ ಪೊಲೀಸ್ ಕಮಿಷನರ್ ವಿಜಯ್ ಮಲಿಕ್ ನಕಲಿ ಛಾಪಾಕಾಗದ ದಂಧೆಯ ಮಾಹಿತಿ ನೀಡಿದ್ದರು. ನವೆಂಬರ್ 2001ರಲ್ಲಿ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ತೆಲಗಿ ತೆರಳಲಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿ ಬಾವಾ ನೇತೃತ್ವದ ಬೆಂಗಳೂರು ಪೊಲೀಸರು ತೆಲಗಿಯನ್ನು ಅಜ್ಮೀರ್ ನಲ್ಲಿ ಬಂಧಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Death of Abdul Karim Telgi, India’s stamp paper scam kingpin. Cruelty of the scandal died with Telagi

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ