Breaking: ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಗೆ ಡಿಸಿಜಿಐ ಶಿಫಾರಸ್ಸು
ನವದೆಹಲಿ, ಫೆಬ್ರವರಿ 4: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಣಕ್ಕೆ ಈಗಾಗಲೇ ಹಲವು ಲಸಿಕೆಗಳನ್ನು ವಿತರಿಸಲಾಗುತ್ತಿದೆ. ಇದರ ಮಧ್ಯೆ ರೂಪಾಂತರಿಗಳ ವಿರುದ್ಧ ಸಮರ್ಥವಾಗಿ ಹೋರಾಡಲು ರಷ್ಯಾದ ಮತ್ತೊಂದು ಲಸಿಕೆಗೆ ಡಿಸಿಜಿಐ ಶಿಫಾರಸ್ಸು ಮಾಡಿದೆ.
ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಒಂದು ಡೋಸ್ ಅನ್ನು ಪಡೆದುಕೊಳ್ಳುವುದಕ್ಕೆ ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರದ ವಿಷಯ ತಜ್ಞರ ಸಮಿತಿಯು ಶಿಫಾರಸ್ಸು ಮಾಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಹಿಂದೆ ಕೊವಿಡ್ -19 ಸಾಂಕ್ರಾಮಿಕದ ಕಾಲದಲ್ಲಿ ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಮೊದಲ ಡೋಸ್ ಮೂರು ತಿಂಗಳಲ್ಲಿ ವೈರಸ್‌ನ ಡೆಲ್ಟಾ ರೂಪಾಂತರದ ವಿರುದ್ಧ ಶೇ.70ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡಲಿದೆ. ಸ್ಪುಟ್ನಿಕ್ ಲೈಟ್ ಲಸಿಕೆ 60 ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ.

ಜಗತ್ತಿನಲ್ಲೇ ಮೊದಲು ಅನುಮೋದನೆ ಪಡೆದ ಲಸಿಕೆ ಸ್ಪುಟ್ನಿಕ್-ವಿ:
ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆ ಮಾನವ ಅಡೆನೊವೈರಸ್ ಸೆರೊಟೈಪ್ 26 ಅನ್ನು ಆಧರಿಸಿದೆ. ಕೊರೊನಾವೈರಸ್ ವಿರುದ್ಧ ಜಗತ್ತಿನಲ್ಲೇ ಮೊದಲು ಅನುಮೋದನೆ ಪಡೆದ ಲಸಿಕೆ ಸ್ಪುಟ್ನಿಕ್-ವಿ ಆಗಿದೆ. ಇಂದು ಜಗತ್ತಿನ 70 ರಾಷ್ಟ್ರಗಳಲ್ಲಿ ಕೊವಿಡ್-19 ವಿರುದ್ಧ ಸ್ಪುಟ್ನಿಕ್-ವಿ ಲಸಿಕೆಯನ್ನು ಬಳಸುವುದಕ್ಕೆ ಅನುಮತಿ ನೀಡಲಾಗಿದೆ. ಒಂದು ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು 15ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತಗೊಳಿಸಲಾಗಿದ್ದು, ಇನ್ನೂ 30 ದೇಶಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಸ್ಪುಟ್ನಿಕ್ ಲೈಟ್ ಬಗ್ಗೆ ತಿಳಿಯಿರಿ:
ಸ್ಪುಟ್ನಿಕ್ ಲೈಟ್ ಇತರ ಲಸಿಕೆಗಳಿಗೆ ಸಾರ್ವತ್ರಿಕ ಬೂಸ್ಟರ್ ಆಗಿದೆ. ಅರ್ಜೆಂಟೀನಾ ಮತ್ತು ಇತರ ದೇಶಗಳಲ್ಲಿನ ನಡೆಸಿದ ವೈದ್ಯಕೀಯ ಅಧ್ಯಯನಗಳಲ್ಲಿ ಧನಾತ್ಮಕ ಮಾಹಿತಿ ಗೊತ್ತಾಗಿದೆ. ಇತರೆ ಉತ್ಪಾದಕ ಲಸಿಕೆಗಳಿಗೆ ಸ್ಪುಟ್ನಿಕ್ ಲೈಟ್ ಲಸಿಕೆಯು ಬೂಸ್ಟರ್ ಶಾಟ್ ಆಗಿ ಕೆಲಸ ಮಾಡುತ್ತದೆ. ಬೂಸ್ಟರ್ ಲಸಿಕೆಯಾಗಿ ಕೂಡಾ ಸ್ಪುಟ್ನಿಕ್ ಲೈಟ್ ಹೆಚ್ಚಿನ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವ ಕೆಲಸ ಮಾಡುತ್ತದೆ.
ಭಾರತದಲ್ಲಿ ಕೊವಿಡ್-19 ಸ್ಥಿತಿಗತಿ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ನಡುವೆ ಭಾರತದಲ್ಲಿ ಒಂದೇ ದಿನ 1.50 ಲಕ್ಷಕ್ಕಿಂತ ಕಡಿಮೆ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 149,394 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,100 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 246,674 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 41,952,712ಕ್ಕೆ ಏರಿಕೆಯಾಗಿದೆ. ಈ ಪೈಕಿ 40,017,088 ಸೋಂಕಿತರು ಗುಣಮುಖರಾಗಿದ್ದರೆ, 500,087 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 1,435,537 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications