ಅಕ್ಟೋಬರ್ 1ರಂದು ಹೆಚ್ಚಲಿದೆ ಶಾಹೀನ್ ಚಂಡಮಾರುತದ ಅಬ್ಬರ
ನವದೆಹಲಿ, ಸೆಪ್ಟೆಂಬರ್ 30: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ವಿವಿಧ ರಾಜ್ಯಗಳಲ್ಲಿ ಮಳೆಯಾಗುತ್ತಿದೆ.
ಇದೀಗ ಗುಲಾಬ್ ಚಂಡಮಾರುತ ಪ್ರಭಾವ ಕ್ಷೀಣಿಸುತ್ತಿದ್ದು, ಅಕ್ಟೋಬರ್ 1 ರಂದು ಶಾಹೀನ್ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹೀಗಾಗಿ ಕರ್ನಾಟಕದಲ್ಲಿ ಇಂದಿನಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಶಾಹೀನ್ ಚಂಡಮಾರುತ ಇಂದು ಅರಬ್ಬೀ ಸಮುದ್ರಕ್ಕೆ ಅಪ್ಪಳಿಸಲಿದ್ದು, ರಾಜ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ ಎಂದು ಅಂದಾಜಿಸಲಾಗಿದೆ.

ಮುಂಗಾರು ಜೈಸಲ್ಮೇರ್, ಉದೈಪುರ್, ಇಂದೋರ್, ಜಗದಲ್ಪುರ್, ಕಳಿಂಗಪಟ್ಟಣಂ ಮತ್ತು ಪೂರ್ವ ಆಗ್ನೇಯ ದಿಕ್ಕಿನಲ್ಲಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಯವರೆಗೆ ಹಾದು ಹೋಗುತ್ತಿದೆ. ಶಾಹೀನ್ ಚಂಡಮಾರುತ ಅರಬ್ಬಿ ಸಮುದ್ರದತ್ತ ತೆರಳಿದ್ದು, ಅರಬ್ಬಿ ಸಮುದ್ರಕ್ಕೆ ಇದು ಅಪ್ಪಳಿಸಲಿದೆ. ಹೀಗಾಗಿ ಇಂದ ಕರ್ನಾಟಕದಲ್ಲಿ ಅಧಿಕ ಮಳೆ ಸುರಿಯುವ ನಿರೀಕ್ಷೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತದ ರೂಪ ತಳೆದು ಮತ್ತೆ ಅಪ್ಪಳಿಸಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಹಾಗೂ ಗುಜರಾತ್ ಕರಾವಳಿ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿ ಅ. 1ರಂದು ಶಾಹೀನ್ ಚಂಡಮಾರುತ ಅಬ್ಬರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದಿದೆ.
ಶಾಹೀನ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಗುಜರಾತ್ನಲ್ಲಿ ಈಗಾಗಲೇ ಗಾಳಿ, ಮಳೆ ಹೆಚ್ಚಾಗಿದೆ. ಸೆ. 30ರಿಂದ ಅ. 2ರವರೆಗೂ ಶಾಹೀನ್ ಚಂಡಮಾರುತದ ಅಬ್ಬರ ಹೆಚ್ಚಾಗಿರಲಿದೆ. ಇನ್ನು ಎರಡು ದಿನಗಳಲ್ಲಿ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಮರುರೂಪ ಪಡೆಯಲಿದ್ದು, ಕತಾರ್ ಈ ಶಾಹೀನ್ ಚಂಡಮಾರುತ ಎಂಬ ಹೆಸರನ್ನು ನೀಡಿದೆ.
ಶಾಹೀನ್ ಚಂಡಮಾರುತದ ಪರಿಣಾಮದಿಂದ ಗುಜರಾತ್, ಮಹಾರಾಷ್ಟ್ರ, ಕೊಂಕಣ, ಮರಾಠವಾಡ ಮತ್ತು ಗೋವಾ ಭಾಗದಲ್ಲಿ ವಿಪರೀತ ಮಳೆಯಾಗಲಿದೆ. ಹಾಗೇ, ಪಶ್ಚಿಮ ಬಂಗಾಳ. ಮರಾಠವಾಡ, ಸೌರಾಷ್ಟ್ರ, ಕಚ್, ಮಧ್ಯಪ್ರದೇಶ, ವಿದರ್ಭ, ಛತ್ತೀಸ್ಗಢ, ಜಾರ್ಖಂಡ್, ಆಂಧ್ರಪ್ರದೇಶ, ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ. ಜೊತೆಗೆ ತೆಲಂಗಾಣ, ತಮಿಳುನಾಡು, ಕೇರಳ, ಪುದುಚೆರಿ, ಮಾಹೆಯಲ್ಲಿ ಕೂಡ ಶಾಹೀನ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಲಿದೆ.
ಪಶ್ಚಿಮ ಬಂಗಾಳ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಶಾಹೀನ್ ಚಂಡಮಾರುತದ ಪರಿಣಾಮದಿಂದ ಶುಕ್ರವಾರ ವಿಪರೀತ ಮಳೆಯಾಗಲಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಈ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಇರಲಿದೆ. ಆದರೆ, ಗುಜರಾತ್ ಕರಾವಳಿ ತೀರದಲ್ಲಿ ಇದರ ಪರಿಣಾಮ ಹೆಚ್ಚಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಗುಲಾಬ್ ಚಂಡಮಾರುತ ದುರ್ಬಲಗೊಂಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತ ಶಾಹೀನ್ ಚಂಡಮಾರುತವಾಗಿ ಬದಲಾಗಿದ್ದು, ಭಾರಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಳಗಾವಿ, ಬಾಗಲಕೋಟೆ, ಬೀದರ್, ಗದಗ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕರಾವಳಿಯ ಹಲವು ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ. ಬೆಂಗಳೂರು ನಗರದಲ್ಲೂ ಮೋಡ ಕವಿದ ವಾತಾವರಣ ಕಂಡು ಬರಲಿದ್ದು, ಮಳೆ ಬೀಳುವ ನಿರೀಕ್ಷೆಯಿದೆ.












Click it and Unblock the Notifications