Cyclone Dana: ಡಾನಾ ಚಂಡಮಾರುತ ಅಬ್ಬರ; ಧರೆಗುರುಳಿದ ಮರಗಳು, 16 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ
ಗುರುವಾರ ಮಧ್ಯರಾತ್ರಿ 12.10 ಗಂಟೆಯ ವೇಳೆಗೆ ಡಾನಾ ಚಂಡಮಾರುತ ಒಡಿಶಾದ ಕೇಂದ್ರಪಾರ ಜಿಲ್ಲೆಯ ಭಿತರ್ಕಾನಿಕಾ ಮತ್ತು ಭದ್ರಕ್ ಜಿಲ್ಲೆಯ ಧಮ್ರಾ ನಡುವೆ ಅಪ್ಪಳಿಸಿದೆ. ಶುಕ್ರವಾರ ಮುಂಜಾನೆಯವರೆಗೂ ಚಂಡಮಾರುತ ಈ ಪ್ರದೇಶಗಳಲ್ಲಿ ಅಪ್ಪಳಿಸಲಿದ್ದು ಬಳಿಕ ಚಂಡಮಾರುತವು ದುರ್ಬಳಗೊಳ್ಳುತ್ತದೆ, ಕಿಯೋಂಜಾರ್ ಬದಲಾಗಿ ಧೆಂಕನಾಲ್ ಮತ್ತು ಅಂಗುಲ್ ಜಿಲ್ಲೆಗಳ ಕಡೆಗೆ ಚಲಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಭುವನೇಶ್ವರದ ಪ್ರಾದೇಶಿಕ ನಿರ್ದೇಶಕಿ ಮನೋರಮಾ ಮೊಹಂತಿ ಮಾಹಿತಿ ನೀಡಿದ್ದಾರೆ.
ಚಂಡಮಾರುತದ ಪರಿಣಾಮ ಗಂಟೆಗೆ 120 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹಲವು ಜಿಲ್ಲೆಗಳಲ್ಲಿ ಈಗಾಗಲೇ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಮರಗಳು ಕೆಳಗುರುಳಿವೆ. ತಗ್ಗು ಪ್ರದೇಶಗಳು, ಅಪಾಯಕಾರಿ ಪ್ರದೇಶಗಳನ್ನು ಮೊದಲೇ ಗುರುತಿಸಿದ್ದ ಒಡಿಶಾ ಸರ್ಕಾರ ಈಗಾಗಲೇ 5.84 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಚಂಡಮಾರುತ ನಿಭಾಯಿಸಲು ರಾಜ್ಯದ ಸಿದ್ಧತೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರನ್ನು ಸ್ಥಳಾಂತರ ಮಾಡುವ ಬಗ್ಗೆ ಒಡಿಶಾ ಸರ್ಕಾರ ಯೋಜಿಸಿತ್ತು. ಆದರೆ ಡಾನಾ ಚಂಡಮಾರುತ ಅಂದುಕೊಂಡಿದ್ದಕ್ಕಿಂತ ದುರ್ಬಲವಾಗಿರುವ ಕಾರಣ ಇದೀಗ 5.84 ಲಕ್ಷ ಜನರನ್ನು ಮಾತ್ರ ಸ್ಥಳಾಂತರಿಸಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗಿನವರೆಗೆ, ಜಾಜ್‌ಪುರ, ಭದ್ರಕ್, ಪುರಿ, ಧೆಂಕನಲ್, ಖೋರ್ಧಾ, ಕಟಕ್, ಜಗತ್‌ಸಿಂಗ್‌ಪುರ, ಕೇಂದ್ರಪದ, ಅಂಗುಲ್, ಬಾಲಸೋರ್ ಮತ್ತು ಮಯೂರ್‌ಭಂಜ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹೇಳಲಾಗಿದೆ.
16 ಜಿಲ್ಲೆಗಳಲ್ಲಿ ಪ್ರವಾಹದ ಮುನ್ಸೂಚನೆ
ಚಂಡಮಾರುತದಿಂದ ಭಾರೀ ಮಳೆಯಿಂದಾಗಿ 16 ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ನಮ್ಮ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ, ಹಾನಿಯನ್ನು ಕಡಿಮೆ ಮಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಮೋಹನ್ ಚರಣ್ ಮಾಝಿ ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಡಾನಾ ಚಂಡಮಾರುತ ಅಪ್ಪಳಿಸುವಿಕೆ ಭದ್ರಕ್ ಜಿಲ್ಲೆಯಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಿಂದಾಗಿ ಹಲವಾರು ಮರಗಳು ನೆಲಕ್ಕುರುಳಿವೆ. ವನಸಬಾದಲ್ಲಿ ಕೂಡ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದೆ.
ಡಾನಾ ಚಂಡಮಾರುತದ ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಾರ್ಖಂಡ್‌ನಲ್ಲಿ ಕೆಲವು ಪ್ರದೇಶಗಳಲ್ಲಿ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 6 ರಿಂದ ಶುಕ್ರವಾರ ಬೆಳಿಗ್ಗೆ 9 ರವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಭುವನೇಶ್ವರ ವಿಮಾನ ನಿಲ್ದಾಣವನ್ನು ಗುರುವಾರ ಸಂಜೆ 5 ರಿಂದ ಶುಕ್ರವಾರ ಬೆಳಿಗ್ಗೆ 9 ರವರೆಗೆ ಮುಚ್ಚಲಾಗಿದೆ. ಎರಡು ರಾಜ್ಯಗಳ ಮೂಲಕ ಹಾದುಹೋಗುವ 400 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.












Click it and Unblock the Notifications