Cyclone Dana: ಡಾನಾ ಚಂಡಮಾರುತ ಅಪ್ಪಳಿಸುವ ನಿರೀಕ್ಷೆ: ಒಡಿಶಾ, ಪಶ್ಚಿಮ ಬಂಗಾಳದಾದ್ಯಂತ ರೆಡ್ ಅಲರ್ಟ್
ಭುವನೇಶ್ವರ ಅಕ್ಟೋಬರ್ 24: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಕರ್ನಾಟಕವನ್ನು ಹಿಂಡಿ ಹಿಪ್ಪೆಯನ್ನಾಗಿಸಿದೆ. ಅಲ್ಲದೆ ಇಂದು ಡಾನಾ ಚಂಡಮಾರುತ ಅಪ್ಪಳಿಸುವ ಭೀತಿ ಕೂಡ ಎದುರಾಗಿದೆ. ಡಾನಾ ಚಂಡಮಾರುತದಿಂದಾಗಿ ಇಂದು ಒಡಿಶಾ, ಪಶ್ಚಿಮ ಬಂಗಾಳದಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹೌದು.. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ಡಾನಾ ಚಂಡಮಾರುತ ಒಡಿಶಾ ಕರಾವಳಿಗೆ ಯಾವಾಗ ಬೇಕಾದರೂ ಅಪ್ಪಳಿಸಬಹುದು. ಹೀಗಾಗಿ ಹವಾಮಾನ ಇಲಾಖೆ ಒಡಿಶಾ, ಪಶ್ಚಿಮ ಬಂಗಾಳದಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ.

ಹವಾಮಾನ ಇಲಾಖೆಯ ಪ್ರಕಾರ ಡಾನಾ ಚಂಡಮಾರುತ ಭಿತರ್ಕಾನಿಕಾ ಮತ್ತು ಧಮ್ರಾ ನಡುವೆ ಭೂಕುಸಿತ ಉಂಟು ಮಾಡುವ ಸಾಧ್ಯತೆ ಇದ್ದು, ಈ ಭಾಗದ ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿಮೀ ತಲುಪುವ ನಿರೀಕ್ಷೆಯಿದೆ. ಕರಾವಳಿ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಲಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಮನೆಯಿಂದ ಹೊರಬಾರದಿರಲು ಸೂಚನೆ ನೀಡಲಾಗಿದೆ.
ಚಂಡಮಾರುತದ ಉಲ್ಬಣ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಆಗಲಿದೆ. ಹೀಗಾಗಿ ಪರದೀಪ್ ಮತ್ತು ಚಂದ್ರಭಾಗ, ಪುರಿ ಸಮುದ್ರ ತೀರದಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಪಾರಾದೀಪ್‌ನಿಂದ ಎರಸಾಮ ಸಿಯಾಲಿವರೆಗಿನ ಬೀಚ್‌ಗಳಲ್ಲಿ ಜನರ ಓಡಾಟಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.
ಒಡಿಶಾ ಕರಾವಳಿಯತ್ತ ಸ್ಥಿರವಾಗಿ ಮುನ್ನಡೆಯುತ್ತಿರುವ ಡಾನಾ ಚಂಡಮಾರುತ ಇಂದು ತಡರಾತ್ರಿ ಅಥವಾ ಶುಕ್ರವಾರ ಮುಂಜಾನೆ ಭೂಮಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಚಂಡಮಾರುತ ಪಶ್ಚಿಮ ಮತ್ತು ನೈಋತ್ಯ ಕಡೆಗೆ ಸ್ವಲ್ಪಮಟ್ಟಿಗೆ ಮರುಕಳಿಸುವ ಸಾಧ್ಯತೆಯಿದೆ. ಇದು ಅಕ್ಟೋಬರ್ 26ರ ಸುಮಾರಿಗೆ ದಕ್ಷಿಣ ಒಡಿಶಾದಲ್ಲಿ ಮಳೆಯನ್ನು ತರಲಿದೆ ಎಂದು ಭುವನೇಶ್ವರದ ಪ್ರಾದೇಶಿಕ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಗುರುವಾರ ಮಾಹಿತಿ ನೀಡಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತವು ಪರದೀಪ್‌ನ ಆಗ್ನೇಯಕ್ಕೆ 260 ಕಿಮೀ, ಧಮ್ರಾದ ಆಗ್ನೇಯಕ್ಕೆ 290 ಕಿಮೀ ಮತ್ತು ಸಾಗರ್ ದ್ವೀಪದ ಆಗ್ನೇಯಕ್ಕೆ 350 ಕಿಮೀ ದೂರದಲ್ಲಿರಲಿದೆ ಎಂದು ಮಾಧ್ಯಮಗಳಿಗೆ ಮೊಹಂತಿ ತಿಳಿಸಿದ್ದಾರೆ. ಡಾನಾ ಚಂಡಮಾರುತ ಮಧ್ಯರಾತ್ರಿಯ ಸುಮಾರಿಗೆ ತೀವ್ರಗೊಳ್ಳಲಿದ್ದು, ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 12 ಕಿಮೀ ವೇಗದಲ್ಲಿ ವಾಯುವ್ಯಕ್ಕೆ ಚಲಿಸುತ್ತಿದೆ.
ಅಕ್ಟೋಬರ್ 24ರ ಮಧ್ಯರಾತ್ರಿ ಮತ್ತು ಅಕ್ಟೋಬರ್ 25 ರ ಮುಂಜಾನೆಯ ನಡುವೆ, ಚಂಡಮಾರುತವು ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯನ್ನು ಹಾದು ಹೋಗಲಿದೆ. ಪುರಿ ಮತ್ತು ಸಾಗರ್ ದ್ವೀಪದ ನಡುವೆ, ಭಿತರ್ಕನಿಕಾ ಮತ್ತು ಧಮ್ರಾ ಹತ್ತಿರ ಚಂಡಮಾರುತ ವಾಯುವ್ಯ ದಿಕ್ಕಿನಲ್ಲಿ ಚಲಿಸುವ ನಿರೀಕ್ಷೆಯಿದ್ದು ಭಾರೀ ಹಾನಿಯನ್ನುಂಟು ಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಭುವನೇಶ್ವರದಲ್ಲಿ ಗಾಳಿಯ ವೇಗವು ರಾತ್ರಿಯಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ.
ಎಲ್ಲೆಲ್ಲಿ ರೆಡ್ ಅಲರ್ಟ್?
ಚಂಡಮಾರುತದ ಪ್ರಬಲ ಪ್ರಭಾವವನ್ನು ಕಾಣುವ ಮಯೂರ್‌ಭಂಜ್, ಬಾಲಸೋರ್, ಭದ್ರಕ್, ಕೇಂದ್ರಪಾರ, ಜಗತ್‌ಸಿಂಗ್‌ಪುರ ಮತ್ತು ಜಾಜ್‌ಪುರ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಟಕ್ ಜಿಲ್ಲೆಯಲ್ಲೂ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಹೆಚ್ಚುವರಿಯಾಗಿ ಪುರಿ, ಖೋರ್ಧಾ, ನಯಾಗಢ, ಧೆಂಕನಲ್ ಮತ್ತು ಕಿಯೋಂಜರ್ ಜಿಲ್ಲೆಗಳಿಗೆ ಆರಂಜ್ ಅಲರ್ಟ್ ನೀಡಲಾಗಿದ್ದು, ಸುಂದರ್‌ಗಢ್, ದಿಯೋಗರ್, ಅಂಗುಲ್, ಬೌಧ್, ಕಂಧಮಾಲ್ ಮತ್ತು ಗಂಜಾಂನಲ್ಲಿ ಯೆಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ.
ಈಗಾಗಲೇ ಕೇಂದ್ರಪಾರಾ, ಜಗತ್‌ಸಿಂಗ್‌ಪುರ ಮತ್ತು ಭದ್ರಕ್ ಜಿಲ್ಲೆಗಳಲ್ಲಿ ಕಳೆದ ಕೆಲವು ಗಂಟೆಗಳಲ್ಲಿ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ನೂರಾರು ಮರಗಳು ಧರೆಗುರುಳಿದ್ದು, ಪ್ರಮುಖ ರಸ್ತೆಗಳು ಬಂದ್ ಆಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ರಸ್ತೆಯಲ್ಲಿ ಬಿದ್ದಿರುವ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.












Click it and Unblock the Notifications