ಕಬಾಬ್ ರುಚಿಯಿಲ್ಲ ಎಂದು ಅಡುಗೆಯವರಿಗೆ ಗುಂಡು ಹೊಡೆದು ಕೊಂದ ಗ್ರಾಹಕ!
ಲಕ್ನೋ, ಮೇ.09: ಮನುಷ್ಯನಿಗೆ ರುಚಿ ರುಚಿಯಾದ ತಿಂಡಿ ತಿನಿಸುಗಳ ಬಗ್ಗೆ ಅಪಾರ ಕಾಳಜಿ ಇರುತ್ತದೆ. ಆದರೆ, ತಿನ್ನುವ ತಿಂಡಿಗಳ ಮೇಲಿನ ಪ್ರೀತಿ ಇನ್ನೋಬ್ಬರ ಜೀವಕ್ಕೆ ಕುತ್ತು ತರಬಾರದು ಎಂಬುದು ಅಷ್ಟೇ ನಿಜ. ಉತ್ತರ ಪ್ರದೇಶದಲ್ಲಿ ಕಬಾಬ್ ಟೆಸ್ಟ್ ಇಲ್ಲ ಎಂದು ಅಡುಗೆ ಮಾಡಿದವರನ್ನೇ ಕೊಲೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಫುಡ್ ಕಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಅಡುಗೆಯವರ ಜೊತೆಗೆ ಕಬಾಬ್‌ನ ರುಚಿಯಿಲ್ಲ ಎಂದು ಅತೃಪ್ತಿಗೊಂಡ ಗ್ರಾಹಕರು ಜಗಳ ಮಾಡಿದ್ದು, ಊಟಕ್ಕೆ ಹಣ ನೀಡಲು ನಿರಾಕರಿಸಿ, ಗುಂಡಿಕ್ಕಿ ಕೊಂದಿದ್ದಾರೆ.

ಪ್ರೇಮ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯದರ್ಶಿ ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಇಬ್ಬರು ವ್ಯಕ್ತಿಗಳು ಎಸ್‌ಯುವಿ ಕಾರಿನಲ್ಲಿ ಕಬಾಬ್ ಸ್ಟಾಲ್‌ಗೆ ತೆರಳಿದ್ದರು. ಚಿಕನ್ ಮತ್ತು ಕಬಾಬ್‌ಗಳನ್ನು ಆರ್ಡರ್ ಮಾಡಿದರು. ಇದಾದ ನಂತರ ಕಬಾಬ್ ಟೆಸ್ಟ್ ಉತ್ತಮವಾಗಿಲ್ಲ ಎಂದು ಆರೋಪಿಸಿ 120 ರೂ ಬಿಲ್ ಪಾವತಿಸಲು ನಿರಾಕರಿಸಿದ್ದಾರೆ.
ಇದರಿಂದ ಸ್ಟಾಲ್ ಮಾಲೀಕರು ಮತ್ತು ಗ್ರಾಹಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳದ ನಡುವೆ ಕಬಾಬ್ ಮಾಡಿದ ಅಡುಗೆಯವರು ಮಧ್ಯಪ್ರವೇಶಿಸಿದ್ದು, ಅವರ ತಲೆಗೆ ಗ್ರಾಹಕರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಫುಡ್ ಕಾರ್ಟ್ ಮಾಲೀಕ ಅಂಕುರ್ ಸಬರ್ವಾಲ್ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಪ್ರೇಮ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

"ನಾನು ಬಿಡಿಎ ಕಚೇರಿ ಬಳಿ ಕಬಾಬ್ ಮತ್ತು ಚಿಕನ್ ಕಾರ್ನರ್ ಹೊಂದಿದ್ದೇನೆ. ಜಗತ್‌ಪುರ ನಿವಾಸಿಯಾಗಿದ್ದ ನಸೀರ್ ಅಹ್ಮದ್ ನನ್ನ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಮೇ 3 ರಂದು ರಾತ್ರಿ 10.30 ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಬಂದು ಕಬಾಬ್ ಮತ್ತು ಚಿಕನ್ ಆರ್ಡರ್ ಮಾಡಿದರು. ಬಳಿಕ ಕಬಾಬ್ ರುಚಿಯ ಬಗ್ಗೆ ಜಗಳವಾಡಲು ಪ್ರಾರಂಭಿಸಿ, ನಿಂದನೀಯ ಪದಗಳನ್ನು ಬಳಸಲಾರಂಭಿಸಿದರು. ಇಬ್ಬರೂ ಮದ್ಯಪಾದ ಮಾಡಿದಂತೆ ಕಾಣುತ್ತಿದ್ದರು. ಅದರಲ್ಲಿನ ವ್ಯಕ್ತಿಯೊಬ್ಬರು ನನ್ನ ಅಡುಗೆಯವರಿಗೆ ಗುಂಡು ಹಾರಿಸಿ ಕಾರಿನಲ್ಲಿ ಕುಳಿತು ಪರಾರಿಯಾಗಿದ್ದಾರೆ" ಎಂದು ಅಂಕುರ್ ಸಬರ್ವಾಲ್ ದೂರಿನಲ್ಲಿ ತಿಳಿಸಿದ್ದಾರೆ.
"ಆರೋಪಿಗಳಲ್ಲಿ ಒಬ್ಬರು ಅಡುಗೆಯವರ ತಲೆಗೆ ಗುಂಡು ಹಾರಿಸಿದ್ದಾರೆ. ಕಾರಿನ ನೋಂದಣಿ ವಿವರಗಳ ಸಹಾಯದಿಂದ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ" ಎಂದು ಬರೇಲಿ ಎಸ್ಪಿ (ನಗರ) ರಾಹುಲ್ ಭಾಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications