ಕೇರಳ ಅನಂತ ಪದ್ಮನಾಭಸ್ವಾಮಿ ದೇಗುಲದಲ್ಲಿನ 'ದೇವರ ಮೊಸಳೆ' ಮರಣ
ತಿರುವನಂತಪುರಂ, ಅಕ್ಟೋಬರ್ 10: 'ದೇವರ ಮೊಸಳೆ' ಎಂದು ಹೆಸರುವಾಸಿಯಾಗಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಪ್ರಸಿದ್ಧ ಅನಂತ ಪದ್ಮನಾಭ ದೇವಸ್ಥಾನದ ಮೊಸಳೆ ಮೃತಪಟ್ಟಿದೆ.
ದೇಶಾದ್ಯಂತ ಭಕ್ತರನ್ನಯ ಹೊಂದಿರುವ ಅನಂತ ಪದ್ಮನಾಭ ದೇವಸ್ಥಾನದಲ್ಲಿದ್ದ ಮೊಸಳೆ ಹೆಸರು ಬಬಿಯಾ. ಇದು ಹಲವಾರು ವರ್ಷಗಳಿಂದ ದೇವಸ್ಥಾನದ ಕೊಳದಲ್ಲಿ ವಾಸವಿತ್ತು. ಹಲವು ವರ್ಷಗಳಿಂದ ದೇಗುಲದ ಕೆರೆಯಲ್ಲೇ ಇರುತ್ತಿದ್ದ ಬಬಿಯಾ ಮೊಸಳೆಗೆ ಪ್ರತಿನಿತ್ಯದ ಪೂಜೆಯ ಬಳಿಕ ನೈವೇದ್ಯ ಅರ್ಪಿಸುವುದು ಇಲ್ಲಿನ ಸಂಪ್ರದಾಯವಾಗಿತ್ತು. ಕೆಲವೇ ವರ್ಷದ ಹಿಂದೆ ಕೆರೆಯಿಂದ ಹೊರಬಂದ ಬಬಿಯಾ ದೇವಾಲಯದ ಬಳಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಕೇರಳದ ದೇವಸ್ಥಾನದಲ್ಲಿ ಸಾಮಾನ್ಯವಾಗಿ ಆನೆ, ಹಸು, ಎತ್ತು ಇವೇ ಮೊದಲಾದ ಪ್ರಾಣಿಗಳು ಇರುತ್ತವೆ. ಆದರೆ ಈ ಅನಂತ ಪದ್ಮನಾಭ ದೇವಸ್ಥಾನದ ವಿಶೇಷಗಳಲ್ಲಿ ಈ ಮೊಸಳೆಯು ಒಂದಾಗಿತ್ತು. ಇದು ದೇವರಿಗೆ ಕಾವಲು ಇರುವ ಮೊಸಳೆ ಎಂದು ಖ್ಯಾತಿ ಪಡೆದಿತ್ತು. ದೇವಸ್ಥಾನದ ಕೆರೆ ವರ್ಷದ 365 ದಿನವೂ ತುಂಬಿ ಶುದ್ಧ ನೀರಿನಿಂದ ಕಂಗೊಳಿಸುತ್ತಿತ್ತು.

ಅನಂತ ಪದ್ಮನಾಭ ದೇವರ ನೈವೇದ್ಯವೇ ಇದಕ್ಕೆ ನಿತ್ಯದ ಆಹಾರವಾಗಿತ್ತು. ಮೊಸಳೆ ಬಬಿಯಾ ಈ ಕೆರೆಯಿಂದ ದೇವಾಲಯದಲ್ಲಿರುವ ದೊಡ್ಡ ಕೆರೆಗೆ ಮನುಷ್ಯರು ನಡೆದಾಡುವ ದಾರಿಯಲ್ಲೇ ಓಡಾಡಿಕೊಂಡು ವಾಸವಾಗಿರುತ್ತಿತ್ತು. ಆದರೆ ಬಬಿಯಾ ಇದುವರೆಗೂ ಯಾರ ಮೇಲೂ ದಾಳಿ ಮಾಡಿದ್ದ ಇಲ್ಲವೇ ನೋವನ್ನುಂಟು ಮಾಡಿದ ಘಟನೆಗಳು ಇಲ್ಲ ಎಂದು ಜನರು ಹೇಳುತ್ತಾರೆ. ದೇವಾಲಯ ಕ್ಷೇತ್ರದಲ್ಲಿರುವ ಈ ಮೊಸಳೆ ಹೆಚ್ಚಿನ ಸಂದರ್ಭದಲ್ಲಿ ದೇವಾಲಯದ ಎಡಬದಿಯ ಗುಹೆಯಲ್ಲಿ ಇರುತ್ತಿತ್ತು. ಮಧ್ಯಾಹ್ನ ದೇವಾಲಯದ ನೈವೇದ್ಯವನ್ನು ಇಟ್ಟು ಮೊಸಳೆಯನ್ನು ಪ್ರತಿದಿನ ಕರೆಯಲಾಗುತ್ತಿತ್ತು.

2017ರಲ್ಲಿ ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷವಾಗಿ ಭಕ್ತರಲ್ಲಿ ಅಚ್ಚರಿ ಮೂಡಿಸಿತ್ತು. ದೇವಸ್ಥಾನದಲ್ಲಿ ಯಜ್ಞದ ಅಂಗವಾಗಿ ನಡೆಯುತ್ತಿದ್ದ ಪ್ರವಚನದ ವೇಳೆ ಕೆರೆಯ ನೈಋತ್ಯ ಭಾಗದಲ್ಲಿ ಮೊಸಳೆ ಬಾಯ್ತೆರೆದು ನಿಂತಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮೊಸಳೆ ಹಾಗೆ ಇದ್ದಿದ್ದನ್ನು ನೋಡಿ ದೇಗುಲದ ಕಾಯಕರ್ತರು, ಭಕ್ತರು ಅಶ್ಚರ್ಯ ವ್ಯಕ್ತ ಪಡಿಸಿದ್ದರು.












Click it and Unblock the Notifications