Atal Setu: ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ್ದ ಮುಂಬೈನ ಅಟಲ್ ಸೇತು ರಸ್ತೆಯಲ್ಲಿ ಬಿರುಕು
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಡಿ ಹೊಗಳಿದ್ದ ಮುಂಬೈನ ಅಟಲ್ ಸೇತು ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ 5 ತಿಂಗಳಿನಲ್ಲೇ ಬಿರುಕು ಮೂಡಿರುವುದು ಕಾಮಗಾರಿ ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡಿಸಿದೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು ನವಿ ಮುಂಬೈನ ಉಲ್ವೆ ಕಡೆಗೆ ಟಾರ್ ರಸ್ತೆ ನಿರ್ಗಮನದಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.

ದೇಶದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಐದು ತಿಂಗಳ ಹಿಂದೆಯಷ್ಟೇ ಉದ್ಘಾಟಿಸಿದ್ದರು. ಹೊಸದಾಗಿ ಉದ್ಘಾಟನೆಯಾದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
#WATCH | Mumbai: Maharashtra Congress President Nana Patole inspected the cracks seen on the Mumbai-trans Harbour Link (MTHL) Atal Setu. pic.twitter.com/cwZU4wiI4I
— ANI (@ANI) June 21, 2024
ವಿಡಿಯೋ ಹಂಚಿಕೊಂಡ ಕಾಂಗ್ರೆಸ್ ಮುಖಂಡ
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಸ್ಥಳಕ್ಕೆ ಭೇಟಿ ನೀಡಿ ಬಿರುಕುಗಳನ್ನು ಪರಿಶೀಲಿಸಿದರು ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿದ ನಾನಾ ಪಟೋಲೆ, ನಾನು ಸುಮ್ಮನೆ ಆರೋಪ ಮಾಡುತ್ತಿಲ್ಲ ಎಂದು ತೋರಿಸಲು ಇಲ್ಲಿಗೆ ಬಂದಿದ್ದೇನೆ. ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ, ಆದರೆ ಇಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಕಣ್ಣಾರೆ ನೋಡಬಹುದು ಎಂದಿದ್ದಾರೆ.
ಅವರೇನೋ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಜನರ ಜೀವದ ಜೊತೆ ಆಟವಾಡಲು ಅವರಿಗೆ ಯಾವ ಹಕ್ಕಿದೆ, ಈ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ತೊಲಗಿಸುವ ಬಗ್ಗೆ ಜನ ಯೋಚಿಸಬೇಕು ಎಂದು ಹೇಳಿದ್ದಾರೆ.
17,840 ಕೋಟಿ ರೂಪಾಯಿ ವೆಚ್ಚ
ಸರಿಸುಮಾರು 17,840 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಅಟಲ್ ಸೇತುವನ್ನು ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥವಾಗಿ ಹೆಸರಿಸಲಾದ ಸೇತುವೆಯು ಮುಂಬೈ ಮತ್ತು ನವಿ ಮುಂಬೈ ನಡುವಿನ ಸಂಪರ್ಕವನ್ನು ಹೆಚ್ಚಿಸುವ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮಹತ್ವದ ಯೋಜನೆಯಾಗಿತ್ತು.
ಸೇತುವೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ, ಮತ್ತು ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ. ಆದರೆ ಸೇತುವೆಗೆ ಅವರ ಹೆಸರನ್ನು ಇಡುವಾಗ ಇಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ದುರದೃಷ್ಟಕರ. ಪ್ರಧಾನಿ ಮೋದಿ ಈ ಎಲ್ಲವನ್ನು ಗಮನಿಸಬೇಕು ಎಂದು ಪಟೋಲೆ ಒತ್ತಾಯಿಸಿದ್ದಾರೆ.
ಉದ್ಘಾಟನೆಯಾದ ಸಂದರ್ಭದಲ್ಲಿ ದುಬಾರಿ ಟೋಲ್ ಶುಲ್ಕದ ವಿಚಾರವಾಗಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಭಾರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೇಲ್ಸೇತುವೆ ರಸ್ತೆಗೆ ಅಷ್ಟಾದರೂ ಟೋಲ್ ದರ ಇರಲೇಬೇಕು, ಈ ರಸ್ತೆಯಲ್ಲಿ ಓಡಾಡುವದರಿಂದ ಸಮಯ ಮತ್ತು ಇಂಧನ ಎರಡೂ ಉಳಿತಾಯವಾಗುತ್ತದೆ ಎಂದು ಹಲವರು ವಾದಿಸಿದ್ದರು.












Click it and Unblock the Notifications