ನರೋಡಾ ಹತ್ಯಾಕಾಂಡ, ಸಾಕ್ಷಿಯಾಗುವಂತೆ ಅಮಿತ್ ಶಾಗೆ ಸಮನ್ಸ್
ಅಹ್ಮದಾಬಾದ್, ಸೆ.12: ಗೋಧ್ರಾತ್ತರ ಹಿಂಸಾಚಾರ ಪ್ರಕರಣದಿಂದ ಬಚಾವಾಗಿರುವ ಬಿಜೆಪಿಯ ಹಾಲಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಇಲ್ಲಿನ ಎಸ್ ಐಟಿ ವಿಶೇಷ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ. ನರೋಡಾ ಗಾಮ್ ಹಿಂಸಾಚಾರ ಪ್ರಕರಣದ ಸಂಬಂಧ ಸಾಕ್ಷಿಯಾಗಿ ಕೋರ್ಟಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
2002ರಲ್ಲಿ ನಡೆದ ಈ ಪ್ರಕರಣದ ಸಂಬಂಧ ಸೆಪ್ಟೆಂಬರ್ 18ರಂದು ವಿಚಾರಣೆ ನಡೆಯಲಿದ್ದು, ಅಮಿತ್ ಶಾ ಹಾಜರಾಗಬೇಕೆಂದು ವಿಶೇಷ ನ್ಯಾಯಾಲಯ ಆದೇಶಿಸಿದೆ. ನರೋಡ ಪಟಿಯಾ ಹಿಂಸಾಚಾರ ಪ್ರಕರಣದ ಸಂಬಂಧ ಜೀವಾವಧಿ ಶಿಕ್ಷೆಗೊಳಗಾಗಿರುವ ಮಾಜಿ ಬಿಜೆಪಿ ಸಚಿವೆ, ಮಾಯಾ ಕೊಡ್ನಾನಿ ಮನವಿ ಮೇರೆಗೆ ಈ ಸಮನ್ಸ್ ಜಾರಿಯಾಗಿದೆ.

ಅಮಿತ್ ಶಾ ಅವರು ಕೋರ್ಟಿಗೆ ಹಾಜರಾಗಿ ಮಾಜಿ ಸಚಿವೆ ಮಾಯಾ ಪರ ಸಾಕ್ಷಿ ಹೇಳಿದರೆ, ಮಾಯಾ ಅವರು ಈ ಕೇಸಿನಿಂದ ಹೊರ ಬರಬಹುದಾಗಿದೆ.
ಗುಜರಾತಿನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಯಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು.
ವೃತ್ತಿಯಿಂದ ಸ್ತ್ರೀರೋಗ ತಜ್ಞೆಯಾಗಿರುವ ಮಾಯಾ ಅವರು ಘಟನೆ ನಡೆದ ದಿನದಂದು ಅಹ್ಮದಾಬಾದ್ ನಗರದ ಅಸರ್ವ ಪ್ರದೇಶದಲ್ಲಿ ನರ್ಸಿಂಗ್ ಹೋಂನಲ್ಲಿದ್ದರು ಎಂದು ವಾದಿಸಲಾಗಿದ್ದು, ಇದಕ್ಕೆ ಅಮಿತ್ ಹಾಗೂ ಇತರೆ 13 ಮಂದಿಗೆ ಸಮನ್ಸ್ ನೀಡುವಂತೆ ಮಾಯಾ ಕೋರಿದ್ದರು.
ನರೋಡಾ ಪಾಟಿಯಾ ಹತ್ಯಾಕಾಂಡ: ಈ ದುರ್ಘಟನೆಯಲ್ಲಿ 97 ಮುಸ್ಲಿಮರ ಹತ್ಯೆಯಾಗಿತ್ತು. ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಗುಂಪೇ ಹೊಣೆಯೆಂದು ಆರೋಪಿಸಲಾಗಿತ್ತು. ನರೋಡಾ ಪಾಟಿಯಾದ ಶಾಸಕಿ ಮಾಯಾ ಕೊಡ್ನಾನಿ, ವಿಹಿಂಪದ ಮಾಜಿ ಮುಖಂಡ ಬಾಬು ಬಜರಂಗಿ, ಸ್ಥಳೀಯ ಬಿಜೆಪಿ ನಾಯಕರಾದ ಬಿಪಿನ್ ಪಂಚಾಲ್, ಕಿಶನ್ ಕೊರಾನಿ, ಅಶೋಕ್ ಸಿಂಧಿ ಮತ್ತು ರಾಜು ಚುಮಾಲ್ ಸೇರಿದಂತೆ 62 ಮಂದಿ ಇಲ್ಲಿ ಆರೋಪಿಗಳಾಗಿದ್ದಾರೆ.












Click it and Unblock the Notifications