ದೇಶದ ಆರ್ಥಿಕತೆಯ ಮೇಲೆ ಕೊರೊನಾ ಪರಿಣಾಮ ಬೀರಲಿದೆ: ಮೋದಿ
ದೆಹಲಿ, ಮಾರ್ಚ್ 19: ಜಾಗತಿಕ ಸಾಂಕ್ರಾಮಿಕ ರೋಗವಾಗಿರುವ ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಈ ಮಾತನ್ನು ಒಪ್ಪಿಕೊಂಡಿದ್ದಾರೆ.
ದೇಶದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ನರೇಂದ್ರ ಮೋದಿ 'ಕೊರೊನಾದಿಂದ ದೇಶದಲ್ಲಿ ಕಳವಳ ಹೆಚ್ಚಿದೆ. ಪ್ರಥಮ ಹಾಗೂ ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲೂ ರಾಷ್ಟ್ರಗಳು ಈ ರೀತಿ ಆತಂಕಕ್ಕೆ ಒಳಗಾಗಿರಲಿಲ್ಲ. ಕೊರನಾದಿಂದ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೂ ವಿಜ್ಞಾನದಲ್ಲಿ ಇದಕ್ಕೆ ಲಸಿಕೆ ಕಂಡುಹಿಡಿದಿಲ್ಲ. ನಿಶ್ಚಿತ ಔಷಧವೂ ಸಿಕ್ಕಿಲ್ಲ. ನನಗೆ ನಿಮ್ಮ ಸಮಯಬೇಕು. ಒಗ್ಗಟ್ಟಾಗಿ ಕೊರೊನಾ ಎದುರಿಬೇಕು ಎಂದು ಹೇಳಿದ್ದಾರೆ.
'ಕೊರೊನಾದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ. ಒಂದು ದೇಶವೂ ಇನ್ನೊಂದು ದೇಶಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ಕಂಪನಿಗಳು ಕೂಡ ಕಾರ್ಮಿಕರಲ್ಲಿ ಸಹಾನುಭೂತಿ ತೋರಿಸಿ. ಕೆಲಸ ಕಳೆದುಕೊಳ್ಳಬಹುದು ಎಂಬ ಆತಂಕದಲ್ಲಿದ್ದಾರೆ. ಅವರನ್ನು ರಕ್ಷಿಸುವ ಕೆಲಸ ಆಗಲಿ, ಯಾರನ್ನು ಕೆಲಸದಿಂದ ವಜಾಗೊಳಿಸಬೇಡಿ' ಎಂದು ಮೋದಿ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.

'ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ವಿಶೇಷ ಟಾಸ್ಕ್ ಪೋರ್ಸ್ ರಚಿಸಲಾಗುವುದು. ಈ ತಂಡ ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಕ್ಷಣ ಕ್ಷಣಕ್ಕೂ ಅವಲೋಕನ ಮಾಡಲಿದೆ' ಎಂದು ತಿಳಿಸಿದರು.
ಈಗಾಗಲೇ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಉಂಟಾಗಲಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಎಚ್ಚರಿಕೆ ನೀಡಿದೆ. ಕೊರೊನಾ ಭೀತಿಯಿಂದ ಅನೇಕ ರಾಷ್ಟ್ರಗಳಲ್ಲಿ ಉದ್ಯಮ ಕ್ಷೇತ್ರ ತನ್ನ ಕೆಲಸ ನಿಲ್ಲಿಸಿದೆ. ಕೆಲವು ಕಂಪನಿಗಳು ಕಷ್ಟ ಪಟ್ಟು ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಸರ್ಕಾರಗಳು ಇದರಿಂದ ಜಾಗೃತರಾಗದಿದ್ದರೆ ವಿಶ್ವದಾದ್ಯಂತ 2.5 ಕೋಟಿ ಜನರು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.
ಇನ್ನು ಕೊರೊನಾ ಭೀತಿಯಿಂದ ಖಾಸಗಿ ಸಂಸ್ಥೆಗಳು, ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅವಕಾಶ ಮಾಡಿಕೊಟ್ಟಿದೆ. ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ.












Click it and Unblock the Notifications