ರಾಮನವಮಿ ರ್‍ಯಾಲಿಯಲ್ಲಿ ಬಿಜೆಪಿ ಶಾಸಕ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ
ಹೈದರಾಬಾದ್ ಏಪ್ರಿಲ್ 1: ಹೈದರಾಬಾದ್‌ನಲ್ಲಿ ರಾಮನವಮಿ ರ್‍ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆಗಾಗಿ ಅಮಾನತುಗೊಂಡ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ನಿವಾಸ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಅಫ್ಜಲ್‌ಗುಂಜ್ ಪೊಲೀಸರು ಅಮಾನತುಗೊಂಡ ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಫಜಲಗುಂಜ್ ಪೊಲೀಸ್ ಠಾಣೆಗೆ ಎಸ್‌ಐ ಜೆ ವೀರಬಾಬು ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾಜಾ ಸಿಂಗ್ ಶಂಕರ್ ಶೇರ್ ಹೋಟೆಲ್ ಬಳಿ ರ್‍ಯಾಲಿ ನಡೆಸುತ್ತಿದ್ದಾಗ ಕಾನ್‌ಸ್ಟೆಬಲ್ ಕೀರ್ತಿ ಕುಮಾರ್ ಎಂಬುವರು ಬಿಜೆಪಿ ಶಾಸಕ ರಾಜಾ ಸಿಂಗ್ ರ ದ್ವೇಷದ ಭಾಷಣವನ್ನು ವಿಡಿಯೋ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಇದರ ಆಧಾರದ ಮೇಲೆ ಅಫಜಲಗುಂಜ್ ಪೊಲೀಸ್ ಠಾಣೆಗೆ ಎಸ್‌ಐ ಜೆ ವೀರಬಾಬು ದೂರು ದಾಖಲಿಸಿದ್ದಾರೆ. ಹೀಗಾಗಿ ಎಸ್‌ಎಚ್‌ಒ ಎಂ.ರವೀಂದರ್ ರೆಡ್ಡಿ ಅವರನ್ನು ಈ ವಿಷಯದ ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.

ರಾಜಾ ಸಿಂಗ್ ಅವರ ಶೋಬಾ ಯಾತ್ರೆ ರಾತ್ರಿ 9 ಗಂಟೆಗೆ ಎಸ್‌ಎ ಬಜಾರ್ ತಲುಪಿತು. ಆನೆಯ ಮೇಲೆ ಸವಾರಿ ಮಾಡಿದ ರಾಜಾ ಸಿಂಗ್ ಹಿಂದಿಯಲ್ಲಿ ಭಾಷಣ ಮಾಡಿದರು. ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಟಿ ರಾಜಾ ಸಿಂಗ್ ಅವರು ಹೈದರಾಬಾದ್‌ನಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಭಾರತ ಹಿಂದೂ ರಾಷ್ಟ್ರವಾದರೆ ಎರಡು ಮಕ್ಕಳ ನೀತಿಯನ್ನು ಅನುಸರಿಸುವವರಿಗೆ ಮಾತ್ರ ಮತದಾನದ ಹಕ್ಕನ್ನು ನೀಡಲಾಗುವುದು ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದರು.
ರಾಮನವಮಿ ರ್‍ಯಾಲಿಯಲ್ಲಿ ವಿವಾದಾತ್ಮಕ ಹೇಳಿಕೆ
"ಭಾರತವು ಹಿಂದೂ ರಾಷ್ಟ್ರವಾದರೆ, 'ನಾವಿಬ್ಬರು, ನಮ್ಮಿಬ್ಬರು' ನೀತಿಯನ್ನು ನಂಬುವವರಿಗೆ ಮಾತ್ರ ಮತದಾನದ ಹಕ್ಕು ಸಿಗುತ್ತದೆ" ಎಂದು ಅವರು ಹೇಳಿದರು. 'ನಾವು ಐದು, ನಮಗೆ 50' ನೀತಿಯನ್ನು ಅನುಸರಿಸುವವರಿಗೆ ಮತ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದಿದ್ದರು.

"ನಮ್ಮ ಸಂತರು ಹಿಂದೂ ರಾಷ್ಟ್ರ ಹೇಗಿರುತ್ತದೆ ಎಂಬುದನ್ನು ಚಿತ್ರಿಸಲು ಪ್ರಾರಂಭಿಸಿದ್ದಾರೆ. ಅದರ ಸಂವಿಧಾನವನ್ನೂ ರಚಿಸಲಾಗುತ್ತಿದೆ. ಹಿಂದೂ ರಾಷ್ಟ್ರದ ರಾಜಧಾನಿ ದೆಹಲಿ ಆಗುವುದಿಲ್ಲ. ಸಂತರು ಕಾಶಿ, ಮಥುರಾ ಮತ್ತು ಅಯೋಧ್ಯೆಗಳನ್ನು ಇದಕ್ಕಾಗಿ ಆಯ್ಕೆ ಮಾಡುತ್ತಿದ್ದಾರೆ'' ಎಂದಿದ್ದಾರೆ. ಹಿಂದೂ ರಾಷ್ಟ್ರವು ರೈತರಿಗೆ ತೆರಿಗೆ ಮುಕ್ತವಾಗಿರುತ್ತದೆ ಮತ್ತು ಅಲ್ಲಿ ಗೋಹತ್ಯೆ ಮತ್ತು ಮತಾಂತರ ಇರುವುದಿಲ್ಲ ಎಂದು ಅವರು ಹೇಳಿದರು.
ಈ ವರ್ಷದ ಜನವರಿಯಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಅಮಾನತುಗೊಂಡ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಟಿ ರಾಜಾ ಸಿಂಗ್ ಅವರು ಜನವರಿ 29 ರಂದು ಮುಂಬೈನಲ್ಲಿ ಆಯೋಜಿಸಿದ್ದ ಸಕಲ್ ಹಿಂದೂ ಸಮಾಜ ರ್‍ಯಾಲಿಯಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪ್ರವಾದಿ ವಿರುದ್ಧ ಹೇಳಿಕೆ
ಅಂದಹಾಗೆ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಪ್ರವಾದಿ ಮುಹಮ್ಮದ್ ಅವರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದರು. ವಿವಾದಾತ್ಮಕ ಹೇಳಿಕೆಯ ನಂತರ ರಾಜಾ ಸಿಂಗ್ ಅವರ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆ ಮತ್ತು ಜನರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಬಿಜೆಪಿ ಶಾಸಕನ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದರು.












Click it and Unblock the Notifications