Meghalaya election 2023; ಸಿಎಂ ಕಾನ್ರಾಡ್ ಸಂಗ್ಮಾ ಗೆಲುವು
ಮೇಘಾಲಯ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗಿದೆ. ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ದಕ್ಷಿಣ ತುರಾ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಮತ್ತೆ ಅಧಿಕಾರ ಹಿಡಿಯಲಿದೆ. ಎನ್‌ಪಿಪಿ ಪಕ್ಷಕ್ಕೆ ಎರಡು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಬೆಂಬಲ ಘೋಷಣೆ ಮಾಡಿದೆ. ಕಾಂಗ್ರೆಸ್ ಮತ್ತು ಟಿಎಂಸಿ ತಲಾ 5 ಕ್ಷೇತ್ರಗಳಲ್ಲಿ ಗೆದ್ದಿವೆ. ಯುಡಿಪಿ 11 ಕ್ಷೇತ್ರಗಳಲ್ಲಿ ಗೆದ್ದಿದೆ.
2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ (ಎಂಡಿಎ) ನೇತೃತ್ವದ ಸರ್ಕಾರವನ್ನು ರಚನೆ ಮಾಡಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಕಾನ್ರಾಡ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದರು. 2023ರ ಚುನಾವಣೆಯಲ್ಲಿಯೂ ಅವರು ದಕ್ಷಿಣ ತುರಾ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. 13,342 ಮತಗಳನ್ನು ಪಡೆದ ಅವರು 5016 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಕ್ಷಿಣ ತುರಾ ವಿಧಾನಸಭಾ ಕ್ಷೇತ್ರದಲ್ಲಿ ಕಾನ್ರಾಡ್ ಸಂಗ್ಮಾಗೆ ಬಿಜೆಪಿಯ ಬೇನಾರ್ಡ್ ಎನ್. ಮಾರ್ಕ್ ಪ್ರಬಲ ಪೈಪೋಟಿ ನೀಡಿದರು. ಅವರು ಚುನಾವಣೆಯಲ್ಲಿ 8326 ಮತಗಳನ್ನು ಪಡೆದು ಸೋಲು ಕಂಡರು. ಟಿಎಂಸಿಯ ರಿಚರ್ಡ್ ಎಂ. ಮಾರ್ಕ್ 2312 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.
ಗುರುವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಂಡಿತು. ಸಂಜೆಯ 8 ಗಂಟೆಯ ತನಕ ಎಣಿಕೆ ಕಾರ್ಯ ನಡೆಯಿತು. ಬಳಿಕ ಕೇಂದ್ರ ಚುನಾವಣಾ ಆಯೋಗ ಅಂತಿಮ ಫಲಿತಾಂಶವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಎನ್‌ಪಿಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚನೆ ಮಾಡಲು ಬಹುಮತವಿಲ್ಲ. ಕಾನ್ರಾಡ್ ಸಂಗ್ಮಾ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕರೆ ಮಾಡಿ ಸರ್ಕಾರ ರಚಿಸಲು ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆಯೂ ಸಿಕ್ಕಿದೆ.

ರಾಜ್ಯದ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕ ಮುಕುಲ್ ಸಂಗ್ಮಾ ಎನ್‌ಪಿಪಿ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. 2021ರಲ್ಲಿ ಮುಕುಲ್ ಸಂಗ್ಮಾ ಕಾಂಗ್ರೆಸ್ ತೊರೆದು 11 ಶಾಸಕರ ಜೊತೆ ಟಿಎಂಸಿ ಸೇರಿದ್ದರು. ಆದರೆ ಇದು ಚುನಾವಣೆಯಲ್ಲಿ ಯಾವುದೇ ಪ್ರಭಾವ ಬೀರಲಿಲ್ಲ. ಟಿಎಂಸಿ ಪಕ್ಷ ಕೇವಲ 5 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.
2018ರ ತನಕ ಮೇಘಾಲಯ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿತ್ತು. 2023ರ ಚುನಾವಣೆಯಲ್ಲಿಯೂ ಪಕ್ಷ ಹಿನ್ನಡೆ ಅನುಭವಿಸಿದೆ. ಎರಡಂಕಿ ಸೀಟುಗಳನ್ನು ಗೆಲ್ಲಲು ಪಕ್ಷ ವಿಫಲವಾಗಿದ್ದು, 5 ಸ್ಥಾನಗಳಲ್ಲಿ ಜಯಗಳಿಸಿದೆ.
ಮೇಘಾಲಯ ವಿಧಾನಸಭೆ ಚುನಾವಣೆ 2023ರಲ್ಲಿ 26 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಹಾಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಅತಿ ದೊಡ್ಡ ಪಕ್ಷವಾಗಿದೆ. ಯುಡಿಪಿ 11 ಸ್ಥಾನ, ಟಿಎಂಸಿ 5 ಸ್ಥಾನ, ಕಾಂಗ್ರೆಸ್ 5 ಸ್ಥಾನ, ಬಿಜೆಪಿ 2ಸ್ಥಾನಗಳಲ್ಲಿ ಜಯಗಳಿಸಿದೆ. ಹೆಚ್‌ಎಸ್‌ಪಿಡಿಪಿ 2, ಪಿಡಿಎಫ್ 2, ವಿಪಿಪಿ 4, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಮತದಾನ ಬಾಕಿ ಇದೆ; ಮೇಘಾಲಯ ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಆದರೆ ಫೆಬ್ರವರಿ 27ರಂದು 59 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ. ಶಿಲ್ಲಾಂಗ್ ವಿಧಾನಸಭಾ ಕ್ಷೇತ್ರದ ಯುನೈಟೆಡ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಚ್. ಡಿ. ಆರ್. ಲಿಂಗ್ಡೊ ಫೆಬ್ರವರಿ 20ರಂದು ಮೃತಪಟ್ಟ ಕಾರಣ ಆ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಈಗ ಸರ್ಕಾರ ರಚನೆಯಾದ ಬಳಿಕ ಚುನಾವಣೆ ನಡೆಯಲಿದೆ.












Click it and Unblock the Notifications