Mizoram Assembly Election 2023: ಕಾಂಗ್ರೆಸ್ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ಲಾಲ್ಸಾವ್ತಾ
ಮಿಜೋರಾಂ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಚುನಾವಣಾ ಪ್ರಚಾರವನ್ನ ನಡೆಸಿದ್ದು, ನವೆಂಬರ್ 7 ರಂದು ನಡೆಯಲಿರುವ ಮಿಜೋರಾಂ ಚುನಾವಣೆಯಲ್ಲಿ 40 ವಿಧಾನಸಭಾ ಸ್ಥಾನಗಳ ಪೈಕಿ ಕನಿಷ್ಠ 25 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ರಾಜ್ಯ ಘಟಕದ ಮುಖ್ಯಸ್ಥ ಲಾಲ್ಸವ್ತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರವನ್ನು ತೊಡೆದುಹಾಕಲು ಮತ್ತು ಉತ್ತಮ ಆಡಳಿತವನ್ನು ತರಲು ನಮ್ಮ ಪಕ್ಷವು ಅಧಿಕಾರಕ್ಕೆ ಬಂದ ನಂತರ ಹಲವು ಸುಧಾರಣೆಗಳ ಪ್ರಾರಂಭಿಸಲಿದೆ ಎಂದು ಶನಿವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ರಾಜ್ಯ ಘಟಕದ ಮುಖ್ಯಸ್ಥ ಲಾಲ್ಸವ್ತಾ ಹೇಳಿದ್ದಾರೆ. ಮಿಜೋರಾಂವನ್ನು ಹಣಕಾಸಿನ ದುರುಪಯೋಗದಿಂದ ಹೊರಬರಲು ಕಾಂಗ್ರೆಸ್ ಗೆ ಮಾತ್ರ ಸಾಧ್ಯ. ಮತ್ತೆ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆಯನ್ನು ಪರಿಚಯಿಸುವುದಾಗಿ ಭರವಸೆ ನೀಡಿದರು.

ಇನ್ನೂ ಚುನಾವಣಾ ಪ್ರಚಾರವು ತುಂಬಾ ಚೆನ್ನಾಗಿ ನಡೆಯುತ್ತಿದೆ ಮತ್ತು ನಾವು ಮುನ್ನಡೆ ಸಾಧಿಸುತ್ತಿದ್ದೇವೆ. ರಾಜ್ಯದ ವಿವಿಧ ಭಾಗಗಳ ವರದಿಗಳ ಪ್ರಕಾರ ನಮಗೆ 26 ಸ್ಥಾನಗಳು ಸಿಗಬಹುದು. ಇಲ್ಲದಿದ್ದರೆ, ಕನಿಷ್ಠ 25 ಸ್ಥಾನಗಳು ಖಚಿತ ಎಂದು ವಿಶ್ವಾಸ ವ್ಯಕ್ತಪಸಿದ್ದಾರೆ.
ಕಾಂಗ್ರೆಸ್ ಎಲ್ಲ 40 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಐದು ಸ್ಥಾನಗಳನ್ನು ಗೆದ್ದಿತ್ತು. ಇತ್ತೀಚೆಗೆ, ಅದರ ಶಾಸಕರೊಬ್ಬರು ರಾಜೀನಾಮೆ ನೀಡಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಬಹುಮತ ಪಡೆದರೆ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಲಾಲ್ಸವ್ತಾ ಪರಿಗಣಿಸಿದ್ದಾರೆ. ಎಂಎನ್‌ಎಫ್ ಮತ್ತು ಪ್ರಮುಖ ವಿರೋಧ ಪಕ್ಷ ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ) ಎರಡೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುತ್ತಿವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ರಚಿಸಿದಾಗ ಮಾತ್ರ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುತ್ತದೆ ಎಂದು ಜನರಿಗೆ ತಿಳಿದಿದೆ. ಮಿಜೋರಾಂ ಏನು ಬಯಸುತ್ತದೆ ಎಂಬುದು ನಮಗೆ ತಿಳಿದಿದೆ. ಜನರು ನಮ್ಮ ಮತ್ತು ನಮ್ಮ ನೀತಿಗಳ ಮೇಲೆ ವಿಶ್ವಾಸ ಹೊಂದಿದ್ದಾರೆ. ನಾವು ಆಡಳಿತದ ಶೈಲಿಯನ್ನು ಬದಲಾಯಿಸುತ್ತೇವೆ ಮತ್ತು ಆಡಳಿತವನ್ನು ಜನರ ಪರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಮಿಜೋರಾಂ ಒಂದು ಬಡ ರಾಜ್ಯವಾಗಿದೆ ಮತ್ತು GST ಸಂಗ್ರಹವನ್ನು ಹೊರತುಪಡಿಸಿ ಹೆಚ್ಚಿನ ಆದಾಯದ ಮೂಲಗಳಿಲ್ಲ. ನಾವು ಹೆಚ್ಚಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳ ಮೇಲೆ ಅವಲಂಬಿತರಾಗಿದ್ದೇವೆ, ಇವುಗಳನ್ನು 90:10 ಅನುಪಾತದಲ್ಲಿ ಜಾರಿಗೆ ತರಲಾಗುತ್ತದೆ ಮತ್ತು ಹೆಚ್ಚಿನ ಭಾಗವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುತ್ತದೆ. "ಆ ಮೊತ್ತವು ದೊಡ್ಡದಾಗಿದೆ ಮತ್ತು ಅದನ್ನು ಸರಿಯಾಗಿ ನಿರ್ವಹಿಸಿದರೆ, ರಾಜ್ಯದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು, ಆದ್ದರಿಂದ ನಾವು ರಾಜ್ಯ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಬದಲಿಗೆ ಒಪಿಎಸ್ ಅನ್ನು ಪರಿಚಯಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ರಾಮ ಸಭೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ, ಜವಾಬ್ದಾರಿ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ನೀಡುವ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ನಾವು ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಆರಂಭಿಕ ನಿಧಿಯೊಂದಿಗೆ ಯುವ ಮಿಜೋ ಉದ್ಯಮಶೀಲತಾ ಕಾರ್ಯಕ್ರಮವನ್ನು ಸ್ಥಾಪಿಸುತ್ತೇವೆ. ಖಾಯಂ ಸರ್ಕಾರಿ ಉದ್ಯೋಗಿ ಇಲ್ಲದ ಮನೆಗಳಿಗೆ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆಗಾಗಿ ಪ್ರತಿ ಕುಟುಂಬಕ್ಕೆ 15 ಲಕ್ಷ ರೂಪಾಯಿಗಳ ಆರೋಗ್ಯ ವಿಮೆಯನ್ನು ನೀಡಲು ನಾವು ಯೋಜಿಸುತ್ತೇವೆ. ಕ್ಯಾನ್ಸರ್ ಮತ್ತು ಇತರ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಹಾಯ ಮಾಡಲು, ಕಾಂಗ್ರೆಸ್ ಪ್ರತಿ ವರ್ಷ 5 ಕೋಟಿ ರೂಪಾಯಿಗಳ ಬಜೆಟ್ ನಲ್ಲಿ ನೀಡಲಾಗುವುದು ಎಂದು ಹೇಳಿದ್ದಾರೆ.











Click it and Unblock the Notifications