AICC President Election: ಬದಲಾವಣೆಗೆ ಧೈರ್ಯ ತೋರಿ ಎಂದ ಶಶಿ ತರೂರ್
ನವದೆಹಲಿ, ಅಕ್ಟೋಬರ್ 17: ಕಾಂಗ್ರೆಸ್ ಪಕ್ಷದ ಅಧ್ಯಕ್ಕೀಯ ಚುನಾವಣೆ ಇಂದು ಆರಂಭವಾಗಿದೆ. ದೇಶದಾದ್ಯಂತ 9,000ಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಕಾಂಗ್ರೆಸ್ ಪ್ರಮುಖ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಾಂಧಿ ಪರಿವಾರದ ಬೆಂಬಲ ಇರುವುದರಿಂದ ಶಶಿ ತರೂರ್ ಅವರ ಆಯ್ಕೆ ಸುಲಭವಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದೆ.
ತಮಗೆ ಮತ ನೀಡಲು ಪ್ರತಿನಿಧಿಗಳಿಗೆ ಮನವಿ ಮಾಡಿರುವ ಶಶಿ ತರೂರ್, ಬದಲಾವಣೆಗಾಗಿ ಧೈರ್ಯ ತೋರಿ ಎಂದು ತಿಳಿಸಿದ್ದಾರೆ.
ನಾನು ಅಂದುಕೊಂಡಿರುವ ಬದಲಾವಣೆಯಲ್ಲಿ ಪಕ್ಷದ ಮೌಲ್ಯ ಹಾಗೂ ನಿಷ್ಠೆಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಗುರಿ ಸಾಧಿಸಲು ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿನಿಧಿಗಳಿಗೆ ಮಾಡಿದ ಅಂತಿಮ ಮನವಿಯಲ್ಲಿ, 'ಅನೇಕರು ನನ್ನ ಬಗ್ಗೆ ಸಂಶಯಗಳನ್ನು ಹೊಂದಿರಬಹುದು. ಅವುಗಳನ್ನು ಮುಂದೆ ಪರಿಹರಿಸುತ್ತೇನೆ. ಆದರೆ, ಬದಲಾವಣೆಗಾಗಿ ಹಿಂಜರಿಯಬೇಡಿ' ಎಂದು ತರೂರ್ ಕರೆ ನೀಡಿದ್ದಾರೆ.
ಕಾಂಗ್ರೆಸ್‌ನಂತಹ ದೊಡ್ಡ ಪಕ್ಷದಲ್ಲಿರುವ ನಾವು ಬದಲಾವಣೆಯ ಬಗ್ಗೆ ಕಾಳಜಿ ಹೊಂದಿರುವುದು ಸಹಜ. ಅದಕ್ಕಾಗಿಯೇ ನೇರವಾಗಿ ಪ್ರತಿನಿಧಿಗಳಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಟ್ವಿಟರ್‌ನಲ್ಲಿ ವಿಡಿಯೊ ಪೋಸ್ಟ್ ಮಾಡಿದ್ದಾರೆ.
'ಕಳೆದ ಕೆಲ ದಿನಗಳಲ್ಲಿ ನಾನು ಹಲವು ಸಂಭಾಷಣೆಗಳನ್ನು ನಡೆಸಿದ್ದೇನೆ. ನಾನು ತಿಳಿದುಕೊಂಡಿರುವ ಪ್ರಕಾರ, ಇನ್ನೂ ಹಲವರು ಯಾರಿಗೆ ಮತ ನೀಡಬೇಕು ಎಂಬುದರ ಬಗ್ಗೆ ತೀರ್ಮಾನ ಮಾಡಿಲ್ಲ. ಅಧಿಕಾರ ವಿಕೇಂದ್ರೀಕರಣ, ನವೀಕರಣ ಹಾಗೂ ಒಳಗೊಳ್ಳುವಿಕೆಯ ಸಂದೇಶವನ್ನು ನಾನು ನಿಮಗೆ ನೀಡಿದ್ದೇನೆ. ಈ ಸಂದೇಶವು ನಿಮಗೆ ಇಷ್ಟವಾಗಬಹುದು ಎಂಬುದಾಗಿ ನಾನು ನಂಬಿದ್ದೇನೆ. ನೀವು ಬದಲಾವಣೆಯ ಬಗ್ಗೆ ಕಾಳಜಿ ಹೊಂದಿದ್ದೀರಿ. ಅದರ ಜೊತೆ ಹಿಂಜರಿಕೆಯನ್ನೂ ಹೊಂದಿದ್ದೀರಿ. ಬದಲಾವಣೆ ಸುಲಭವಲ್ಲವೆಂಬುದು ನನಗೂ ಗೊತ್ತಿದೆ. ಆದರೆ, ಅದನ್ನು ಅಳವಡಿಸಿಕೊಂಡರೆ ಪಕ್ಷಕ್ಕೆ ಹಲವು ಅನುಕೂಲಗಳಾಗಲಿವೆ' ಎಂದು ತಿಳಿಸಿದ್ದಾರೆ.

ಭಾರತದ ರಾಜಕಾರಣದಲ್ಲಿ ಕಾಂಗ್ರೆಸ್ ಪ್ರಮುಖ ಶಕ್ತಿಯಾಗಿ ಉಳಿದುಕೊಂಡಿದೆ. ಕಾರಣ, ಅಗತ್ಯವಿರುವ ಸಂದರ್ಭಗಳಲ್ಲಿ ಬದಲಾವಣೆಯನ್ನು ಪಕ್ಷ ಸ್ವೀಕರಿಸಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.
1991ರಲ್ಲಿ ನಡೆದ ಆರ್ಥಿಕ ಉದಾರೀಕರಣ, ರಾಜೀವ್ ಗಾಂಧಿ ತಂದ ಬದಲಾವಣೆ, ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಹಸಿರು ಕ್ರಾಂತಿಯಂತಹ ವಿಚಾರಗಳನ್ನು ತರೂರ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಹೊಸದನ್ನು ಅಪ್ಪಿಕೊಳ್ಳುವುದೆಂದರೆ, ಹಳೆಯದನ್ನು ಅವಮಾನಿಸುವುದಲ್ಲ. ನಾನು ಅಂದುಕೊಂಡಿರುವ ಬದಲಾವಣೆ ಹಳೆಯದರ ಅನುಭವ ಹಾಗೂ ಹೊಸತನದ ಶಕ್ತಿಗಳನ್ನು ಒಂದುಗೂಡಿಸುತ್ತದೆ. ಈ ಬಗ್ಗೆ ನನಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದ್ದಾರೆ.

'ನಮ್ಮ ಮೌಲ್ಯ ಹಾಗೂ ನಿಷ್ಠೆಗಳು ಒಂದೇ ಆಗಿರುತ್ತವೆ. ಆದರೆ, ಗುರಿ ತಲುಪುವ ಮಾರ್ಗ ಹಾಗೂ ವಿಧಾನಗಳು ಮಾತ್ರ ಬದಲಾಗುತ್ತವೆ' ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಸೋಮುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಿ, ಸಂಜೆ 4 ಗಂಟೆಗೆ ಮುಗಿಯಲಿದೆ. ದೇಶದಾದ್ಯಂತ 9,000 ಅಧಿಕ ಪ್ರತಿನಿಧಿಗಳು ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್‌ನ ರಾಷ್ಟ್ರೀಯ ಕಚೇರಿ ಸೇರಿದಂತೆ ಒಟ್ಟು 65 ಮತಕೇಂದ್ರಗಳಲ್ಲಿ ಮತದಾನ ನಡೆಯಲಿದೆ. ಕಾಂಗ್ರೆಸ್‌ನ 137 ವರ್ಷಗಳ ಚರಿತ್ರೆಯಲ್ಲಿ ಒಟ್ಟು ಆರು ಬಾರಿ ಅಧ್ಯಕ್ಷೀಯ ಚುನಾವಣೆ ನಡೆದಿದೆ. 20ಕ್ಕೂ ಹೆಚ್ಚು ವರ್ಷಗಳ ಕಾಲ ಗಾಂಧಿ ಕುಟುಂಬ ಸದಸ್ಯರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಸೋನಿಯಾ ಹಾಗೂ ರಾಹುಲ್ ಅಧ್ಯಕ್ಷ ಸ್ಥಾನದಲ್ಲಿದ್ದರು.












Click it and Unblock the Notifications