Maharashtra Assembly Elections 2024: ಹರಿಯಾಣದ ಸೋಲಿನ ಪಾಠ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ತಂತ್ರ ಬದಲು
ಮುಂಬೈ, ಅಕ್ಟೋಬರ್ 15: ಹರಿಯಾಣ ವಿಧಾನಸಭೆ ಚುನಾವಣೆಯ ಹೀನಾಯ ಸೋಲು ಕಾಂಗ್ರೆಸ್‌ಗೆ ಪಾಠ ಕಲಿಸಿದೆ. ಆದ್ದರಿಂದ ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಯ ಕಾರ್ಯತಂತ್ರವನ್ನು ಪಕ್ಷ ಬದಲಾಯಿಸಲಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಮಂಗಳವಾರ ಮಧ್ಯಾಹ್ನ 3.30ಕ್ಕೆ ಪತ್ರಿಕಾಗೋಷ್ಠಿಯನ್ನು ಕರೆದಿದೆ. ಚುನಾವಣಾ ವೇಳಾಪಟ್ಟಿ ಘೋಷಣೆ ಮಾಡಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ಚುನಾವಣೆ ಎದುರಿಸಲಿದೆ.
ಹರಿಯಾಣದ ಸೋಲಿನ ಹಿನ್ನಲೆಯಲ್ಲಿ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಕಾರ್ಯತಂತ್ರ ಸಂಪೂರ್ಣ ಬದಲಾಗಲಿದೆ. ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಮೈತ್ರಿಕೂಟ ಸರ್ಕಾರ ರಚಿಸಲಿದೆ ಎಂದು ಅಂದಾಜಿಸಿದೆ. ಆದ್ದರಿಂದ ಅಧಿಕಾರ 'ಕೈ' ತಪ್ಪದಂತೆ ಕಾಂಗ್ರೆಸ್ ಎಚ್ಚರವಹಿಸಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳಿವೆ. ಈ ಮೈತ್ರಿಕೂಟದ ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆಯುತ್ತಲೇ ಇದೆ. ಯಾರಿಗೆ ಎಷ್ಟು ಸೀಟು? ಎಂಬುದು ಇನ್ನೂ ಘೋಷಣೆಯಾಗಿಲ್ಲ.
ಕಾಂಗ್ರೆಸ್ ಎಚ್ಚರಿಕೆ ಹೆಜ್ಜೆ: ಹರಿಯಾಣದಲ್ಲಿ ಅಧಿಕಾರ ಹಿಡಿಯುವ ನಿರೀಕ್ಷೆ ಇದ್ದರೂ ಸಹ ಪಕ್ಷದ ಕೆಲವು ತೀರ್ಮಾನಗಳಿಂದ ಬಿಜೆಪಿಗೆ ಅಧಿಕಾರವನ್ನು ಬಿಟ್ಟುಕೊಡಬೇಕಾಗಿದೆ. ಆದ್ದರಿಂದ ಮಹಾರಾಷ್ಟ್ರದಲ್ಲಿ ಹರಿಯಾಣ ಮಾದರಿ ತಪ್ಪುಗಳು ಮರುಕಳಿಸದಂತೆ ಕಾಂಗ್ರೆಸ್ ಎಚ್ಚರವಹಿಸಿದೆ.
ಗೊಂದಲಗಳು ಉಂಟಾಗುವುದನ್ನು ತಡೆಯಲು ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಾಗಿ ಹೋಗಲು ತೀರ್ಮಾನಿಸಲಾಗಿದೆ. ಪಕ್ಷದ ಕಾರ್ಯಕರ್ತರು, ನಾಯಕರಲ್ಲಿಯೂ ಯಾವುದೇ ಗೊಂದಲ ಉಂಟಾಗದಂತೆ ಪಕ್ಷ ಎಚ್ಚರವನ್ನು ವಹಿಸಿದೆ, ರಾಜ್ಯ ನಾಯಕರಿಗೂ ಗೊಂದಲ ಮೂಡಿಸದಂತೆ ಸೂಚನೆ ನೀಡಿದೆ.
ಪಕ್ಷದೊಳಗಿನ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಮುಂದಾಗಿದೆ. ಹರಿಯಾಣದಲ್ಲಿ ಚುನಾವಣೆ ಮೊದಲೇ ಬಣ ರಾಜಕೀಯದ ಕಾರಣ ಚುನಾವಣೆಯಲ್ಲಿ ಸೋಲಬೇಕಾಯಿತು ಎಂಬುದನ್ನು ಕಾಂಗ್ರೆಸ್ ತಿಳಿದುಕೊಂಡಿದೆ.
ಹರಿಯಾಣದಲ್ಲಿ ಮುಖ್ಯಮಂತ್ರಿಯಾಗಲು ಚುನಾವಣೆ ಫಲಿತಾಂಶ ಘೋಷಣೆಯಾಗುವ ಮೊದಲೇ ಕುಮಾರಿ ಸೆಲ್ಜಾ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ನಡುವೆ ನಡೆಯುತ್ತಿದ್ದ ಪೈಪೋಟಿ ಕಾಂಗ್ರೆಸ್ ಅನ್ನು ಸೋಲಿನ ಸುಳಿಗೆ ಸಿಲುಕಿಸಿತು. ಆದ್ದರಿಂದ ಮಹಾರಾಷ್ಟ್ರದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡದೇ ಚುನಾವಣೆ ಎದುರಿಸಲು ಕಾಂಗ್ರೆಸ್ ಮುಂದಾಗಿದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳು ಮಾತ್ರವಲ್ಲ 'ಇಂಡಿಯಾ' ಮೈತ್ರಿಕೂಟದ ಭಾಗವಾದ ಎಎಪಿ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾದರೆ ಆ ಆಯ್ಕೆಯನ್ನು ಸಹ ಕಾಂಗ್ರೆಸ್ ಮುಕ್ತವಾಗಿಟ್ಟಿದೆ. ಚುನಾವಣೆಯ ಗೆಲುವು ಮಾತ್ರ ಮಾನದಂಡವಾಗಬೇಕು ಎಂಬುದು ರಾಜ್ಯ ನಾಯಕರಿಗೆ ಸೂಚಿಸಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹಾರಾಷ್ಟ್ರ ರಾಜ್ಯದ ಕಾಂಗ್ರೆಸ್ ನಾಯಕರ ಜೊತೆ ಮಹತ್ವದ ಸಭೆಯನ್ನು ನಡೆಸಿದ್ದಾರೆ. ಚುನಾವಣೆ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ತಂತ್ರಗಳ ಕುರಿತು ವಿವರಣೆ ನೀಡಿದ್ದಾರೆ.
ಎಂವಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿರುವ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ನಾಯಕ ಉದ್ಧವ್ ಠಾಕ್ರೆ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಮಾತನಾಡಿದ್ದಾರೆ. "ಕಾಂಗ್ರೆಸ್ ಅಥವ ಎನ್‌ಸಿಪಿ (ಶರದ್ ಪವಾರ್) ಪಕ್ಷಗಳು ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದರೆ ಪಕ್ಷ ಅದನ್ನು ಬೆಂಬಲಸಲಿದೆ" ಎಂದು ಹೇಳಿದ್ದಾರೆ. ಆದರೆ ಈಗ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲು ಘೋಷಣೆ ಮಾಡದಿರಲು ತೀರ್ಮಾನಿಸಿದೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಿದೆ. ಕಾಂಗ್ರೆಸ್‌ಗೆ ಹೆಚ್ಚು ಸೀಟು ಸಿಗಲಿದ್ದು, ಶಿವಸೇನೆ ಮತ್ತು ಎನ್‌ಸಿಪಿ ನಂತರ ಸೀಟುಗಳನ್ನು ಪಡೆಯಲಿವೆ. ಯಾವ ಭಾಗದಲ್ಲಿ ಯಾರು ಹೆಚ್ಚು ಸ್ಥಾನಗಳಲ್ಲಿ ಕಣಕ್ಕಿಳಿಯಬೇಕು ಎಂದು ಈಗಾಗಲೇ ಮಾತುಕತೆಗಳು ನಡೆಯುತ್ತಿವೆ.












Click it and Unblock the Notifications