ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಸ್ಮೃತಿ ಇರಾನಿಗೆ ಆಹ್ವಾನ: ಸಚಿವೆ ಕಚೇರಿ ಹೇಳಿದ್ದೇನು?
ಅಮೇಠಿ, ಡಿಸೆಂಬರ್ 30: ಕಾಂಗ್ರೆಸ್ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಎಂಎಲ್‌ಸಿ ದೀಪಕ್ ಸಿಂಗ್ ಅವರು ಗುರುವಾರ ಅಮೇಥಿಯ ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಸಾಗಲಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಸ್ಮೃತಿ ಇರಾನಿ ಆಹ್ವಾನಿಸಿದ್ದಾರೆ.
ಗೌರಿಗಂಜ್‌ನಲ್ಲಿರುವ ಅವರ ಕಚೇರಿಯಲ್ಲಿ ಇರಾನಿ ಅವರ ಕಾರ್ಯದರ್ಶಿ ನರೇಶ್ ಶರ್ಮಾ ಅವರಿಗೆ ಆಹ್ವಾನ ಪತ್ರವನ್ನು ನೀಡಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಗೆ ಎಲ್ಲರನ್ನು ಆಹ್ವಾನಿಸುವಂತೆ ತಮ್ಮ ಪಕ್ಷದ ಹಿರಿಯ ನಾಯಕರು ನಿರ್ದೇಶಿಸಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹೇಳಿದ್ದಾರೆ.
ಅಮೇಥಿ ಸಂಸದೆ ಸ್ಮೃತಿ ಇರಾನಿ ಅವರಿಗೆ ಎಲ್ಲರಿಗಿಂತ ಮೊದಲು ಆಹ್ವಾನ ಪತ್ರಿಕೆ ನೀಡಬೇಕು ಎಂದು ನಾನು ಭಾವಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಆಹ್ವಾನದ ಬಗ್ಗೆ ಕೇಳಿದ ಪ್ರಶ್ನೆಗೆ ಬಿಜೆಪಿಯ ಜಿಲ್ಲಾಧ್ಯಕ್ಷ ದುರ್ಗೇಶ್ ತ್ರಿಪಾಠಿ, ಅಮೇಥಿ ಸಂಸದೆ ಸ್ಮೃತಿ ಇರಾನಿ ಅಥವಾ ಪಕ್ಷದ ಇತರ ಯಾವುದೇ ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಯಾವಾಗಲೂ ಅಖಂಡ ಭಾರತದ ಪರಿಕಲ್ಪನೆಯ ಮೇಲೆ ಕೆಲಸ ಮಾಡುತ್ತದೆ. ಭಾರತ ಯಾವತ್ತೂ ಒಡೆದು ಹೋಗಿಲ್ಲ. ಹಾಗಾದರೆ ಒಗ್ಗೂಡಿಸುವ ಈ ಮಾತು ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದ್ದಾರೆ.
2019 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಸ್ಪರ್ಧಿಸಿದ್ದ ಇರಾನಿ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿಸಿದ್ದರು. ಜನವರಿ 3 ರಂದು ಗಾಜಿಯಾಬಾದ್ ಮೂಲಕ ಯಾತ್ರೆ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ.

10 ರಾಜ್ಯಗಳ ಮೂಲಕ 2,800 ಕಿ.ಮೀ.ಗೂ ಹೆಚ್ಚು ಕ್ರಮಿಸಿರುವ ಯಾತ್ರೆ ಒಂಬತ್ತು ದಿನಗಳ ಚಳಿಗಾಲದ ವಿರಾಮದಲ್ಲಿದ್ದು, ಜನವರಿ 3 ರಂದು ಪುನರಾರಂಭಗೊಳ್ಳಲಿದೆ. ಅಂದು ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಸೇರಿದಂತೆ ರಾಜ್ಯದ ಪ್ರಮುಖ ಬಿಜೆಪಿಯೇತರ ನಾಯಕರನ್ನು ಆಹ್ವಾನಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ನಡೆಯುವ ಯಾತ್ರೆಯು ಸೆಪ್ಟೆಂಬರ್ 7 ರಂದು ಆರಂಭವಾಗಿದೆ. ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಹಾಗೂ ಹರಿಯಾಣದ ಮೂಲಕ ಯಾತ್ರೆ ಸಾಗಿ ಹೋಗಿದೆ.












Click it and Unblock the Notifications