ಕಾಂಗ್ರೆಸ್‌ನಿಂದ 'ಜೀವನ ರಕ್ಷಾ ಯೋಜನೆ' ಘೋಷಣೆ: 25 ಲಕ್ಷ ರೂ. ಆರೋಗ್ಯ ವಿಮೆಯ ಭರವಸೆ
ನವದೆಹಲಿ, ಜನವರಿ 08: ಕಾಂಗ್ರೆಸ್ ದೆಹಲಿಯಲ್ಲಿ ಇಂದು 'ಜೀವನ ರಕ್ಷಾ ಯೋಜನೆ' ಪ್ರಾರಂಭಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ 25 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ.
ದೆಹಲಿ ಜನತೆಗೆ ಕಾಂಗ್ರೆಸ್‌ನಿಂದ ಇದು ಎರಡನೇ ಗ್ಯಾರಂಟಿಯಾಗಿದೆ. ಇದಕ್ಕೂ ಮೊದಲು ಜನವರಿ 6ರಂದು ಕಾಂಗ್ರೆಸ್ 'ಪ್ಯಾರಿ ದೀದಿ ಯೋಜನೆ' ಎಂಬ ಯೋಜನೆಯನ್ನು ಪ್ರಾರಂಭಿಸಿತ್ತು. ಆ ಯೋಜನೆಯಡಿ ದೆಹಲಿಯ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವುದಾಗಿ ಘೋಷಿಸಲಾಗಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಎರಡೂ ಯೋಜನೆಗಳನ್ನು ಪ್ರಮುಖವಾಗಿ ಜಾರಿಗೊಳಿಸಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.

ದೆಹಲಿ ಚುನಾವಣೆ ಈಗಾಗಲೇ ಘೋಷಣೆಯಾಗಿದೆ. ದೆಹಲಿಯ ವಿಧಾನಸಭಾ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದ್ದು, ಮತಗಳ ಎಣಿಕೆಯನ್ನು ಫೆಬ್ರವರಿ 8ಕ್ಕೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ, ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಚುನಾವಣಾ ಪ್ರಚಾರ ಆರಂಭಿಸಿದ್ದು, ಹೊಸ ಹೊಸ ಘೋಷಣೆಗಳನ್ನು ನೀಡುವ ಮೂಲಕ ಮತದಾರರನ್ನ ಸೆಳೆಯಲು ಮುಂದಾಗಿದೆ.
ಜೀವನ ರಕ್ಷಾ ಯೋಜನೆ' ಕುರಿತು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಾತನಾಡಿ, ಮುಂಬರುವ ಚುನಾವಣೆಯ ಪ್ರಣಾಳಿಕೆಯಲ್ಲಿ 'ಜೀವನ ರಕ್ಷಾ ಯೋಜನೆ'ಯನ್ನು ಸೇರಿಸಲು ದೆಹಲಿ ಕಾಂಗ್ರೆಸ್ ನಿರ್ಧರಿಸಿದೆ, ಈ ಯೋಜನೆಯಡಿಯಲ್ಲಿ 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆಯನ್ನು ಒದಗಿಸಲಾಗುವುದು. ರಾಜಸ್ಥಾನದಲ್ಲಿ ಇದೇ ರೀತಿಯ ಉಪಕ್ರಮವನ್ನು ಪ್ರಾರಂಭಿಸಲಾಯಿತು, ಎಲ್ಲಾ ನಿವಾಸಿಗಳಿಗೆ ರೂ 25 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತದೆ, ಯಾವುದೇ ಕಡ್ಡಾಯ ಷರತ್ತುಗಳು ಅಥವಾ ನಿರ್ಬಂಧಗಳಿಲ್ಲದೆ, ಈ ಯೋಜನೆಯ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ.
ಮುಂದೆ ರಾಜಸ್ಥಾನದ ಚಿರಂಜೀವಿ ಯೋಜನೆಯಂತೆ 'ಜೀವನ ರಕ್ಷಾ ಯೋಜನೆ'ಯೂ ಕೆಲಸ ಮಾಡಲಿದೆ. ನಾವು ರಾಜಸ್ಥಾನದಲ್ಲಿ 'ಆರೋಗ್ಯದ ಹಕ್ಕು' ಕಾಯಿದೆಯನ್ನು ಮಾಡಿದ್ದೇವೆ. ಇದರಲ್ಲಿ ಸಾರ್ವಜನಿಕರಿಗೆ ಹಕ್ಕುಗಳನ್ನು ನೀಡಲಾಗಿದೆ ಮತ್ತು ಈ ಕಾಯಿದೆಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದೆ. ಇದು ರಾಜಸ್ಥಾನದಲ್ಲಿ ಕ್ರಾಂತಿಕಾರಿ ಯೋಜನೆಯಾಗಿದೆ. ಈ ಯೋಜನೆ ಪ್ರಾರಂಭಿಸಲು ನನ್ನನ್ನು ಇಲ್ಲಿಗೆ ಕರೆದಿದ್ದಕ್ಕೆ ನನಗೆ ಸಂತೋಷವಾಗಿದೆ. ಜೀವನ್ ರಕ್ಷಾ ಯೋಜನೆಯು ದೆಹಲಿಗೆ ಒಂದು ಗೇಮ್ ಚೇಂಜರ್ ಯೋಜನೆಯಾಗಿದೆ ಮತ್ತು ನಾವು ಅದರ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತೇವೆ ಎಂದು ಗೆಹ್ಲೋಟ್ ಹೇಳಿದರು.
ಕಾಂಗ್ರೆಸ್ ಚುನಾವಣಾ ಉಸ್ತುವಾರಿ ದೇವೇಂದ್ರ ಯಾದವ್ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಮಾಡಿಕೊಂಡ ಒಪ್ಪಂದವು ದೊಡ್ಡ ತಪ್ಪು ಎಂದು ನಾವು ಒಪ್ಪಿಕೊಳ್ಳುತ್ತೇವೆ, ನಾವು ತಪ್ಪನ್ನು ಪುನರಾವರ್ತಿಸುವುದಿಲ್ಲ. ನಿಮ್ಮ ಆಡಳಿತ ವಿರೋಧಿ ಧೋರಣೆಯಿಂದಾಗಿ ದೆಹಲಿಯ ಜನರು ಈಗ ಕಾಂಗ್ರೆಸ್ ಮೇಲೆ ವಿಶ್ವಾಸ ಇರಿಸಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಜನವರಿ 7ರಂದು ದೆಹಲಿಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿತು. ದಿನಾಂಕಗಳ ಘೋಷಣೆಯೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಮಾದರಿ ನೀತಿ ಸಂಹಿತೆ (MCC) ಸಹ ಜಾರಿಗೆ ಬಂದಿದೆ. ಫೆಬ್ರವರಿ 5ರಂದು ದೆಹಲಿಯ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications