ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವಂತೆ ಅಖಿಲೇಶ್ ಯಾದವ್, ಮಾಯಾವತಿಗೆ ಕಾಂಗ್ರೆಸ್ ಆಹ್ವಾನ
ಲಖನೌ, ಡಿಸೆಂಬರ್ 26 : ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಬಿಎಸ್‌ಪಿ ವರಿಷ್ಠೆ ಮಾಯಾವತಿ ಮತ್ತು ಆರ್‌ಎಲ್‌ಡಿಯ ಜಯಂತ್ ಚೌಧರಿ ಸೇರಿದಂತೆ ಬಿಜೆಪಿಯೇತರ ಪಕ್ಷಗಳ ಹಲವು ನಾಯಕರನ್ನು ಉತ್ತರ ಪ್ರದೇಶದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಆಹ್ವಾನಿಸಿದೆ.
ಲಕ್ನೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿರುವ ಮಾಜಿ ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಯಾತ್ರೆಗೆ ಆಹ್ವಾನಿಸಲಾಗಿದೆ. ವಿವಿಯ ಮತ್ತೊಬ್ಬ ಪ್ರಾಧ್ಯಾಪಕ ರವಿಕಾಂತ್ ಅವರಿಗೂ ಆಹ್ವಾನ ನೀಡಲಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 3 ರಂದು ಗಾಜಿಯಾಬಾದ್‌ನ ಲೋನಿ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ. ನಂತರ ಅದು ಬಾಗ್ಪತ್ ಮತ್ತು ಶಾಮ್ಲಿ ಮೂಲಕ ಹರಿಯಾಣವನ್ನು ಪ್ರವೇಶಿಸುತ್ತದೆ.

ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ರಾಜ್ಯದ ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಪಕ್ಷ ಆಹ್ವಾನ ನೀಡಿದೆ ಎಂದು ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿಲ್ಲದ ಪ್ರಸ್ತುತ ದಿನಗಳಲ್ಲಿ, ಜನರ ಮನಸ್ಸನ್ನು ತಿಳಿದುಕೊಳ್ಳಲು ಈ ಯಾತ್ರೆ ಏಕೈಕ ಆಯ್ಕೆಯಾಗಿದೆ ಎಂದು ಅಶೋಕ್ ಸಿಂಗ್ ಹೇಳಿದ್ದಾರೆ.
ಎಲ್ಲ ವಿಪಕ್ಷಗಳು ಈ ಸರ್ಕಾರದ ಬಗ್ಗೆ ಬಹುತೇಕ ಒಂದೇ ಅಭಿಪ್ರಾಯವನ್ನು ಹೊಂದಿರುವುದರಿಂದ ಯಾತ್ರೆಯಲ್ಲಿ ಭಾಗವಹಿಸಲು ಅವರನ್ನು ಆಹ್ವಾನಿಸಲಾಗಿದೆ ಎಂದು ಅಶೋಕ್ ಸಿಂಗ್ ತಿಳಿಸಿದ್ದಾರೆ.

ಯಾದವ್, ಮಾಯಾವತಿ ಮತ್ತು ಚೌಧರಿ ಅವರಲ್ಲದೆ, ಎಸ್‌ಪಿ ಶಾಸಕ ಶಿವಪಾಲ್ ಸಿಂಗ್ ಯಾದವ್, ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ, ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂಪ್ರಕಾಶ್ ರಾಜ್‌ಭರ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಕಾರ್ಯದರ್ಶಿ ಅತುಲ್ ಅಂಜನ್ ಅವರನ್ನು ಕಾಂಗ್ರೆಸ್ ಆಹ್ವಾನಿಸಿದೆ ಎಂದು ಅವರು ಹೇಳಿದ್ದಾರೆ.
ಯಾತ್ರೆಯ ರಾಜ್ಯ ಸಂಯೋಜಕರಾಗಿರುವ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರು ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತ್ ಜೋಡೋ ಯಾತ್ರೆಯು ಯಾವುದೇ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಇಡೀ ದೇಶದ ವಿವಿಧ ಪಕ್ಷಗಳ ನಾಯಕರನ್ನು ಅದರಲ್ಲಿ ಭಾಗವಹಿಸಲು ಆಹ್ವಾನಿಸಲಾಗುವುದು ಎಂದು ಹೇಳಿದ್ದರು. ಆದರೆ, ಆಗ ಆಹ್ವಾನಿತ ನಾಯಕರ ಹೆಸರನ್ನು ಅವರು ಹಂಚಿಕೊಂಡಿರಲಿಲ್ಲ.
ಈ ವರ್ಷದ ಆರಂಭದಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಸಾಗುವ ಯಾತ್ರೆಯು ಈಗಾಗಲೇ 10 ರಾಜ್ಯಗಳಲ್ಲಿ ಕ್ರಮಿಸಿದೆ. 2,800 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಿರುವ ಯಾತ್ರೆಯು ಒಂಬತ್ತು ದಿನಗಳ ಚಳಿಗಾಲದ ವಿರಾಮದಲ್ಲಿದೆ. ಜನವರಿ 3 ರಂದು ಪುನರಾರಂಭವಾಗಲಿದೆ. ಇದು ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡಿದೆ.












Click it and Unblock the Notifications