ಕನ್ನಡಿಗನ ಕೈತಪ್ಪಿದ 'ಯುವ ಕಾಂಗ್ರೆಸ್' ಅಧ್ಯಕ್ಷ ಸ್ಥಾನ; ಹೊಸ ಸಾರಥಿ ಯಾರು?
ಭಾರತೀಯ ಯುವ ಕಾಂಗ್ರೆಸ್‌ಗೆ (IYC) ಹೊಸ ಅಧ್ಯಕ್ಷರ ನೇಮಕವಾಗಿದೆ. ಕಾಂಗ್ರೆಸ್ ನ ಯುವ ನಾಯಕ ಉದಯ್ ಭಾನು ಚಿಬ್ ಅವರನ್ನು ಯುವ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿದೆ. ಉದಯ್ ಭಾನು ಚಿಬ್ ಅವರು ಸದ್ಯ ಭಾರತೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಇದೀಗ ಯುವ ಕಾಂಗ್ರೆಸ್ ಸಾರಥ್ಯವನ್ನು ಚಿಬ್ ವಹಿಸಿಕೊಂಡಿದ್ದಾರೆ. ಇನ್ನು ಇಲ್ಲಿವರೆಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕನ್ನಡಿಗ ಬಿ.ವಿ.ಶ್ರೀನಿವಾಸ್ ಇದ್ದರು. ಈಗ ಚಿಬ್ ಅವರು ಆ ಸ್ಥಾನ ಅಲಂಕರಿಸಿದ್ದಾರೆ.
ಉದಯ್ ಭಾನು ಚಿಬ್ ಅವರನ್ನು ಯುವ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ಇಲ್ಲಿವರೆಗೆ ಭಾರತೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಬಿ.ವಿ.ಶ್ರೀನಿವಾಸ್ ಇದ್ದರು. ಅವರ ಕೊಡುಗೆಗಳನ್ನು ಪಕ್ಷವು ಶ್ಲಾಘಿಸುತ್ತದೆ ವೇಣುಗೋಪಾಲ್ ಹೇಳಿದ್ದಾರೆ.

ಸದ್ಯ ಭಾರತೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಉದಯ್ ಭಾನು ಚಿಬ್, ಜಮ್ಮು ಮತ್ತು ಕಾಶ್ಮೀರ ಪ್ರದೇಶ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ನಡುವೆಯೇ ಉದಯ್ ಭಾನು ಚಿಬ್ ಅವರನ್ನು ನೇಮಕ ಮಾಡಲಾಗಿದ್ದು, ಚಿಬ್ ಅವರು ಜಮ್ಮುಕಾಶ್ಮೀರ ಚುನಾವಣೆಗಳಿಗಾಗಿ ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿಯ ಭಾಗವೂ ಆಗಿದ್ದರು.
2022ರಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ ಬಿ.ವಿ.ಶ್ರೀನಿವಾಸ್ ಅವರು ನೇಮಕಗೊಂಡಿದ್ದರು. ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಈ ಶ್ರೀನಿವಾಸ್ ಅವರನ್ನು ಮೊದಲಿಗೆ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಈ ಸಮಯದಲ್ಲಿ ಶ್ರೀನಿವಾಸ್ ಅವರ ಪಕ್ಷ ಸಂಘಟನೆ, ನಿರಂತರ ಪ್ರತಿಭಟನೆ ಸೇರಿದಂತೆ ಯುವ ಕಾಂಗ್ರೆಸ್‌ನ ಕಾರ್ಯಗಳಿಂದಾಗಿ ಹೈಕಮಾಂಡ್‌ನಿಂದ ಪ್ರಶಂಸೆ ಪಡೆದುಕೊಂಡಿದ್ದರು.

ಬಳಿಕ ಶ್ರೀನಿವಾಸ್ ಅವರನ್ನೇ ಪೂರ್ಣಾವಧಿ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಗಿತ್ತು. ಅಖಿಲ ಭಾರತ ಯುವ ಕಾಂಗ್ರೆಸ್‌ಗೆ ಕರ್ನಾಟಕದಿಂದ ಅಧ್ಯಕ್ಷರಾಗಿದ್ದ ಎರಡನೇಯವರು ಎಂದು ಶ್ರೀನಿವಾಸ್ ಅವರಿಗೆ ಹೇಳಲಾಗಿತ್ತು. ಇದಕ್ಕೂ ಮೊದಲು 1987ರಲ್ಲಿ ಕರ್ನಾಟಕದ ಗುರುದಾಸ್ ಕಾಮತ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಹಲವು ಅಧ್ಯಕ್ಷರ ಬದಲಾವಣೆ: ಕಾಂಗ್ರೆಸ್ ಪಕ್ಷವು ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅಧೀರ್ ರಂಜನ್ ಚೌಧರಿ ಅವರ ಬದಲಿಗೆ ಸುಭಾಂಕರ್ ಸರ್ಕಾರ್ ಅವರನ್ನು ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಹೊಸ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕಾರ್ಯದರ್ಶಿಯಾಗಿ ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಸರ್ಕಾರ್ ಅವರಿಗೆ ಈ ಜವಾಬ್ದಾರಿ ನೀಡಲಾಗಿದ್ದು, ಈ ಹಿಂದೆ ನೀಡಿದ ಜವಾಬ್ದಾರಿಗಳಿಂದ ಬಿಡುಗಡೆಗೊಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ (ಡಬ್ಲ್ಯುಬಿಪಿಸಿಸಿ) ಮುಖ್ಯಸ್ಥರಾಗಿ ಸರ್ಕಾರ್ ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ನೇಮಕ ಮಾಡುವುದಾಗಿ ಘೋಷಿಸಿದ್ದರು. ನಿರ್ಗಮಿತ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರ ಕೊಡುಗೆಗಳಿಗೆ ಕೃತಜ್ಞತೆಗಳನ್ನು ಸಹ ವ್ಯಕ್ತಪಡಿಸಿದ್ದರು. ಸದ್ಯ ಕಾಂಗ್ರೆಸ್‌ನಲ್ಲಿ ಪ್ರಮುಖ ಘಟಕಗಳ ಅಧ್ಯಕ್ಷರು ಬದಲಾಗಿದ್ದಾರೆ.












Click it and Unblock the Notifications