Anna Bhagya: ಬಿಜೆಪಿ ಸೋಲಿಸಿದ್ದಕ್ಕೆ ರಾಜ್ಯಕ್ಕೆ ಅಕ್ಕಿ ಕೊಡ್ತಿಲ್ಲ: ಮೋದಿ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ
ನವದೆಹಲಿ, ಜುಲೈ 6: ಕೇಂದ್ರ ಸರಕಾರ ತನ್ನ ಸಂಗ್ರಹದಲ್ಲಿರುವ ಆಹಾರ ಧಾನ್ಯಗಳನ್ನು ರಾಜ್ಯ ಸರಕಾರಗಳಿಗೆ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಗುರುವಾರ ತೀವ್ರ ವಾಗ್ದಾಳಿ ನಡೆಸಿದೆ. ಕರ್ನಾಟಕದ ಮೇಲೆ ಬಿಜೆಪಿ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ್ದಕ್ಕೆ ಕರ್ನಾಟಕದ ಜನತೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮೋದಿ ಈ ರೀತಿಯ ರಾಜಕೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದೆ. ಜೂನ್ 13 ರಂದು, ಹಣದುಬ್ಬರದ ಒತ್ತಡ ಮತ್ತು ಮಾನ್ಸೂನ್ ಮಳೆಯ ಅನಿಶ್ಚಿತತೆಯಿಂದಾಗಿ ಕೇಂದ್ರವು ಅಧಿಕೃತವಾಗಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS) ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಬಫರ್ ಸ್ಟಾಕ್‌ನಿಂದ ಅಕ್ಕಿ ಮತ್ತು ಗೋಧಿಯ ಮಾರಾಟವನ್ನು ಸ್ಥಗಿತಗೊಳಿಸಿದೆ.

ಕರ್ನಾಟಕ ಸರ್ಕಾರದ ಅನ್ನ ಭಾಗ್ಯ ಯೋಜನೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿ ಕುಟಂಬದ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
ಟ್ವೀಟ್ ಮಾಡಿ ಕಿಡಿ ಕಾರಿದ ಜೈರಾಮ್ ರಮೇಶ್
ಕೇಂದ್ರ ಸರ್ಕಾರವು ಬಡವರ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸುವ ಬದಲು ಎಥೆನಾಲ್ ಉತ್ಪಾದನೆಗೆ ಅಕ್ಕಿ ಪೂರೈಕೆಗೆ ಆದ್ಯತೆ ನೀಡುತ್ತಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರೊಂದಿಗೆ ಪಿಯೂಷ್ ಗೋಯಲ್ ಬುಧವಾರದ ಸಭೆಯ ನಂತರ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್‌ನಲ್ಲಿ ಕಿಡಿ ಕಾರಿದ್ದಾರೆ.
"ಕರ್ನಾಟಕದಂತಹ ರಾಜ್ಯಗಳು ತಮ್ಮ ಆಹಾರ ಭದ್ರತೆಯ ಅಗತ್ಯತೆಗಳನ್ನು ಪೂರೈಸಲು ಭಾರತೀಯ ಆಹಾರ ನಿಗಮಕ್ಕೆ (ಎಫ್‌ಸಿಐ) ಪ್ರತಿ ಕೆಜಿಗೆ 34 ರೂ ಪಾವತಿಸಲು ಸಿದ್ಧವಾಗಿವೆ, ಆದರೆ ಲಜ್ಜೆಗೆಟ್ಟ ಮೋದಿ ಸರ್ಕಾರ, ಪ್ರತೀಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದು, ಬಾಗಿಲು ಮುಚ್ಚಿದೆ" ಎಂದು ಹೇಳಿದ್ದಾರೆ.
"ಎಫ್‌ಸಿಐ ಎಥೆನಾಲ್ ಉತ್ಪಾದಕರಿಗೆ ಕೆಜಿಗೆ 20 ರೂ.ಗೆ ಅಕ್ಕಿಯನ್ನು ಮಾರಾಟ ಮಾಡುವುದನ್ನು ಮುಂದುವರಿಸಿದೆ" ಎಂದು ರಮೇಶ್ ಹೇಳಿದ್ದಾರೆ.
ಕರ್ನಾಟಕದಂತಹ ರಾಜ್ಯಗಳಿಗೆ ಅಡೆತಡೆಗಳನ್ನು ಸೃಷ್ಟಿಸಲು ಪ್ರಧಾನಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಅವರ ನಿರ್ಧಾರ ಹೊಡೆತ ನೀಡುತ್ತದೆ ಎಂದು ಆರೋಪಿಸಿದರು.
ಎರಡು ತಿಂಗಳ ಹಿಂದೆ ತನ್ನನ್ನು ಮತ್ತು ತನ್ನ ಪಕ್ಷವನ್ನು ಬಹಳ ಸಮಗ್ರವಾಗಿ ತಿರಸ್ಕರಿಸಿದ್ದಕ್ಕಾಗಿ ಇದು ಕರ್ನಾಟಕದ ಜನತೆಯ ಮೇಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಧಾನಿಯವರ ಸೇಡಿನ ರಾಜಕಾರಣ ಅವರ ಮೇಲೆ ಬೂಮರಾಂಗ್ ಆಗುತ್ತದೆ. ಕರ್ನಾಟಕ ಸರ್ಕಾರದ ಅನ್ನಭಾಗ್ಯ ಯೋಜನೆ ಆಹಾರ ಭದ್ರತೆಯ ಖಾತರಿಯನ್ನು ಪೂರೈಸುತ್ತದೆ ಎಂದು ಹೇಳಿದರು.
ಹಲವು ರಾಜ್ಯಗಳಿಂದ ಬೇಡಿಕೆ
ಕರ್ನಾಟಕ, ತಮಿಳುನಾಡು, ಜಾರ್ಖಂಡ್ ಮತ್ತು ರಾಜಸ್ಥಾನಗಳು ತಮ್ಮ ರಾಜ್ಯದ ಕಲ್ಯಾಣ ಯೋಜನೆಗಳಿಗೆ ಆಹಾರ ಧಾನ್ಯಗಳನ್ನು ಒಎಂಎಸ್‌ಎಸ್ ಅಡಿಯಲ್ಲಿ ಬಫರ್ ಸ್ಟಾಕ್‌ನಿಂದ ಒದಗಿಸುವಂತೆ ಕೇಂದ್ರವನ್ನು ಕೇಳಿಕೊಂಡಿವೆ ಎಂದು ಕರ್ನಾಟಕ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.
ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆ ಮತ್ತು ಖಾರಿಫ್ ಬೆಳೆಗಳ ಖರೀದಿ ಕುರಿತು ಚರ್ಚಿಸಲು ರಾಷ್ಟ್ರ ರಾಜಧಾನಿಯಲ್ಲಿ ನಡೆದ ರಾಜ್ಯ ಆಹಾರ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ನಾಲ್ಕು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳು ಈ ಬೇಡಿಕೆಯನ್ನು ಮಂಡಿಸಿದ್ದವು.
ಸದ್ಯ ಅಕ್ಕಿ ಪೂರೈಕೆ ಇಲ್ಲದ ಕಾರಣ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ 5 ಕೆ.ಜಿ. ಅಕ್ಕಿಯ ಜೊತೆ 170 ರೂಪಾಯಿ ಹಣ ಕೊಡುವುದಾಗಿ ಹೇಳಿದೆ. ಅಕ್ಕಿ ಪೂರೈಕೆಯಾದ ನಂತರ ಹಣದ ಬದಲಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಹೇಳಿದೆ.












Click it and Unblock the Notifications