ಮೊಬೈಲ್, ವೈಫೈಗೆ ನೋ ಎಂಟ್ರಿ, ಇಲ್ಲಿ ಪುಸ್ತಕಗಳದ್ದೇ ಕಾರುಬಾರು: ಕೋಫೋರ್ಜ್ ಉಚಿತ ಗ್ರಂಥಾಲಯದ ವಿನೂತನ ಪ್ರಯತ್ನ
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಕೇವಲ ಒಂದು ಗಂಟೆ ಕಳೆಯುವುದು ತುಂಬ ಕಷ್ಟ ಎನಿಸಬಹುದು. ಆದರೆ, ಈ ಗದ್ದಲಗಳ ನಡುವೆ, ಯಾವುದೇ ವೈಫೈ ಅಥವಾ ಮೊಬೈಲ್ ನೋಟಿಫಿಕೇಶನ್‌ಗಳ ಕಿರಿಕಿರಿ ಇಲ್ಲದೆ ಕೇವಲ ಪುಸ್ತಕಗಳೊಂದಿಗೆ ಪ್ರಶಾಂತವಾಗಿ ಸಮಯ ಕಳೆಯಲು ಒಂದು ಅದ್ಭುತ ಜಗತ್ತನ್ನ ಸೃಷ್ಟಿಸಲಾಗಿದೆ.
ಹೌದು, ಪ್ರಮುಖ ಐಟಿ ಸಂಸ್ಥೆಯಾಗಿರುವ ಕೋಫೋರ್ಜ್ ದೆಹಲಿ ಮತ್ತು ಹೈದರಾಬಾದ್‌ನಲ್ಲಿ ಇಂತಹ ಸಂಪೂರ್ಣ ಉಚಿತ ಸಾರ್ವಜನಿಕ ಗ್ರಂಥಾಲಯಗಳನ್ನ ಆರಂಭಿಸುವ ಮೂಲಕ ಓದುಗರಿಗೆ ಹೊಸದೊಂದು ಅನುಭವವನ್ನ ಕಟ್ಟಿಕೊಡುತ್ತಿದೆ.

ಸಾವಿರಾರು ಪುಸ್ತಕಗಳ ಸಂಗ್ರಹ, ಓದುಗರಿಗೆ ಮುಕ್ತ ಅವಕಾಶ
ಓದಬೇಕು ಎನ್ನುವ ಮನಸ್ಸಿರುವವರಿಗೆ ದುಡ್ಡಿನ ಸಮಸ್ಯೆ ಅಡ್ಡಿಯಾಗಬಾರದು ಎಂಬ ನಿಟ್ಟಿನಲ್ಲಿ ಕೋಫೋರ್ಜ್ ಈ ಉಚಿತ ಪಬ್ಲಿಕ್ ಲೈಬ್ರರಿ ಪರಿಕಲ್ಪನೆಯನ್ನ ಪರಿಚಯಿಸಿದೆ. ಹೈದರಾಬಾದ್‌ನಲ್ಲಿರುವ ಗ್ರಂಥಾಲಯದಲ್ಲಿ ಬರೋಬ್ಬರಿ 20,000ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹವಿದೆ. ಅದೇ ರೀತಿ, ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಿರ್ಮಿಸಲಾಗಿರುವ 10,000 ಚದರ ಅಡಿಯ ವಿಶಾಲವಾದ ಗ್ರಂಥಾಲಯದಲ್ಲಿ 15,000ಕ್ಕೂ ಅಧಿಕ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ.
ಇಲ್ಲಿ ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ ಸಾಹಿತ್ಯದ ಜೊತೆಗೆ ಅಂಧ ಓದುಗರಿಗಾಗಿ ಬ್ರೈಲ್ ಲಿಪಿಯ ಪುಸ್ತಕಗಳ ವಿಶೇಷ ವಿಭಾಗವನ್ನೂ ಸಹ ತೆರೆಯಲಾಗಿದೆ. ಇಲ್ಲಿನ ಇನ್ನೊಂದು ಆಕರ್ಷಕ ವಿಚಾರವೆಂದರೆ, ಯಾವುದೇ ರೀತಿಯ ಸದಸ್ಯತ್ವ ಶುಲ್ಕ ಇಲ್ಲದೆ ಪ್ರತಿಯೊಬ್ಬರೂ ಉಚಿತವಾಗಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಡಿಜಿಟಲ್ ಉಪಕರಣಗಳಿಗೆ ನೋ ಎಂಟ್ರಿ
ಸಾಮಾನ್ಯವಾಗಿ ಇತ್ತೀಚಿನ ಆಧುನಿಕ ಗ್ರಂಥಾಲಯಗಳಲ್ಲಿ ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯ ಇದ್ದೇ ಇರುತ್ತದೆ. ಆದರೆ ಈ ಗ್ರಂಥಾಲಯದ ಪ್ರಮುಖ ಆಕರ್ಷಣೆಯೇ ಇಲ್ಲಿನ ಕಟ್ಟುನಿಟ್ಟಾದ ನಿಯಮಗಳು. ಓದುಗರು ತಮ್ಮ ಗಮನವನ್ನ ಕೇವಲ ಪುಸ್ತಕಗಳತ್ತ ಮಾತ್ರ ಕೇಂದ್ರೀಕರಿಸಬೇಕು ಎಂಬ ಉದ್ದೇಶದಿಂದ ಇಲ್ಲಿ ವೈಫೈ ಸೌಲಭ್ಯವನ್ನ ಉದ್ದೇಶಪೂರ್ವಕವಾಗಿ ನೀಡಲಾಗಿಲ್ಲ. ದೆಹಲಿಯ ವಸಂತ್ ಕುಂಜ್ ಶಾಖೆಯಲ್ಲಿ, ಒಳಬರುವ ಮುನ್ನವೇ ಸಂದರ್ಶಕರು ತಮ್ಮ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಮೊಬೈಲ್ ಹಾಗೂ ವೈಯಕ್ತಿಕ ಪುಸ್ತಕಗಳನ್ನ ಹೊರಗಿನ ಲಾಕರ್‌ಗಳಲ್ಲಿ ಇಡುವುದು ಕಡ್ಡಾಯ. ಈ ಮೂಲಕ ಇದೊಂದು ನಿಜವಾದ ವೈಫೈ ಇಲ್ಲದ ಲೈಬ್ರರಿಯಾಗಿ ರೂಪುಗೊಂಡಿದ್ದು, ಪರದೆಯ ಮೇಲಿನ ಸ್ಕ್ರೋಲಿಂಗ್ ಬದಲು ಕೇವಲ ಓದುವಿಕೆಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.
No WiFi. No distractions. Just thousands of books waiting for you.
— The Better India (@thebetterindia) August 22, 2026
Sounds almost impossible in 2026, right?
But Coforge is creating exactly that — free public libraries in Hyderabad and Delhi where reading, not scrolling, takes centre stage.
The Hyderabad library has 20,000+… pic.twitter.com/bb0ffNk1H3
ಮಕ್ಕಳಿಗಾಗಿ ವಿಶೇಷ ವಿಭಾಗ
ಮಕ್ಕಳಲ್ಲಿ ಎಳೆಯ ವಯಸ್ಸಿನಿಂದಲೇ ಓದುವ ಹವ್ಯಾಸವನ್ನ ಬೆಳೆಸಲು ಹೈದರಾಬಾದ್ ಉಚಿತ ಗ್ರಂಥಾಲಯ ಶಾಖೆಯಲ್ಲಿ ಮಕ್ಕಳಿಗಾಗಿಯೇ ಒಂದು ಪ್ರತ್ಯೇಕ ಹಾಗೂ ಆಕರ್ಷಕ ವಿಭಾಗವನ್ನು ಮೀಸಲಿಡಲಾಗಿದೆ. ಅಲ್ಲದೆ, ಸ್ಥಳೀಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನ ಆಗಾಗ ಇಲ್ಲಿಗೆ ಕರೆತಂದು ಪುಸ್ತಕಗಳ ಜಗತ್ತಿನ ಪರಿಚಯ ಮಾಡಿಸುವ ಕೆಲಸವೂ ನಡೆಯುತ್ತಿದೆ.
ಈ ಅದ್ಭುತ ಪರಿಕಲ್ಪನೆಯನ್ನು ಕೇವಲ ಎರಡು ನಗರಗಳಿಗೆ ಸೀಮಿತಗೊಳಿಸದೆ, ಮುಂಬರುವ ದಿನಗಳಲ್ಲಿ ದೆಹಲಿ-ಎನ್‌ಸಿಆರ್ ಹಾಗೂ ಹೈದರಾಬಾದ್‌ನಾದ್ಯಂತ ಒಟ್ಟು 30 ಹೊಸ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯುವ ಗುರಿಯನ್ನು ಕೋಫೋರ್ಜ್ ಸಂಸ್ಥೆ ಹಾಕಿಕೊಂಡಿದೆ.


Click it and Unblock the Notifications
