ದೇವತೆಗಳೇ ಮದ್ಯಪಾನ ಮಾಡ್ತಿದ್ರು, ಆದ್ರೆ ನೀವು ಇದನ್ನ ಕುಡೀರಿ: ಸಿಎಂ ಸಲಹೆ
ದೇವಾನುದೇವತೆಗಳೇ ಹಿಂದೆ ಮದ್ಯಪಾನ ಮಾಡುತ್ತಿದ್ದರು. ಸಾರಾಯಿ ಎಂಬುದು ಅಂದಿನಿಂದಲೂ ಚಾಲ್ತಿಯಲ್ಲಿದೆ. ಆದರೆ ನಾನು ಮದ್ಯಪಾನ ಮಾಡುವವರ ಪರ ಎಂದಲ್ಲ. ನಿಮಗೆ ನಾನು ಸಾರಾಯಿ ಕುಡಿಯಿರಿ ಎಂದೂ ಹೇಳಲ್ಲ. ನೀವೆಲ್ಲ ಹಾಲು ಕುಡಿಯಿರಿ, ಹಾಲು ಒಂದು ಅರ್ಥಪೂರ್ಣ ಆಹಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನವದೆಹಲಿಯಲ್ಲಿ ನಂದಿನಿ ಉತ್ಪನ್ನಗಳ ಬಿಡುಗಡೆ ಹಾಗೂ ಮಾರಾಟಕ್ಕೆ ಚಾಲನೆ ನೀಡಿ ಸಿಎಂ ಮಾತನಾಡಿದರು. ಈ ಹಿಂದೆ ಕುರಿಯನ್ ಅವರು ಕ್ಷೀರಕ್ರಾಂತಿಗೆ ಮುಂದಾದಾಗ ಅದರ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆದಿತ್ತು. ಹಳ್ಳಿಯ ಹಾಲು ಪಟ್ಟಣಕ್ಕೆ ಬಂತು, ಪಟ್ಟಣದ ಸಾರಾಯಿ ಹಳ್ಳಿಗೆ ಹೋಗ್ತಿದೆ ಎಂದು ಭಾರಿ ಟೀಕೆಗಳು ಬಂದಿದ್ದವು ಎಂದು ನೆನೆದರು.

ಈ ಹಿಂದೆ ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಮದ್ಯಪಾನ ನಿಷೇಧ ಮಾಡಬೇಕೆಂಬ ಚರ್ಚೆ ನಡೆದಿತ್ತು. ಇದಕ್ಕಾಗಿ ರಚನೆಯಾಗಿದ್ದ ಸಮಿತಿಯಲ್ಲಿ ನಾನು ಕೂಡ ಇದ್ದೆ. ಮದ್ಯಪಾನ ನಿಷೇಧ ಸಂಬಂಧ ಅಧ್ಯಯನಕ್ಕಾಗಿ ಗುಜರಾತ್, ಕೇರಳಕ್ಕೆ ಭೇಟಿ ಸಹ ನೀಡಿದ್ದೆ. ಅಲ್ಲಿ ಮದ್ಯಪಾನ ನಿಷೇಧವಿದ್ದರೂ ಎಲ್ಲೆಲ್ಲೂ ಸಿಗುತ್ತಲೇ ಇತ್ತು. ಹಾಗಾಗಿ ಮದ್ಯಪಾನ ನಿಷೇಧ ಅಸಾಧ್ಯ, ಕುಡಿತಕ್ಕೆ ಕಾನೂನು ಪರಿಹಾರವಲ್ಲ ಎಂಬುದು ಅರ್ಥವಾಯಿತು ಎಂದು ಸಿದ್ದರಾಮಯ್ಯ ಹೇಳಿದರು.
ಹಾಲು ಪೌಷ್ಠಿಕಾಂಶ ಹೇರಳವಾಗಿ ಹೊಂದಿದೆ. ಮಕ್ಕಳ ಬೆಳವಣಿಗೆಗೆ ಹಾಲು ಸಹಕಾರಿ. ಹೈನುಗಾರಿಕೆಯಿಂದ ಗ್ರಾಮೀಣ ಭಾಗದ ಆರ್ಥಿಕತೆ ವೃದ್ಧಿಯಾಗುತ್ತಿದೆ. ಹೈನುಗಾರಿಕೆಯಲ್ಲಿ ಕರ್ನಾಟಕದಲ್ಲಿ 22 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಪ್ರತಿದಿನವೂ 31 ಕೋಟಿ ರೂಪಾಯಿಗಳನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಈ ಹಿಂದೆ ನಾನು ಪಶುಸಂಗೋಪನಾ ಸಚಿವನಾಗಿದ್ದಾಗ ಹೈನುಗಾರಿಕೆ ಸಂಘಗಳು ಮತ್ತು ಡೇರಿಯನ್ನು ಒಗ್ಗೂಡಿಸಲು ನಿರ್ಧರಿಸಿದ್ದೆ. ಸಿಎಂ ಆದ ಬಳಿಕ ಕ್ಷೀರಭಾಗ್ಯ ಯೋಜನೆ ಜಾರಿ ಮಾಡಿದೆವು. ಆ ಯೋಜನೆಗೆ ವಿಶ್ವಬ್ಯಾಂಕ್‌ನಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಈಗ ದೆಹಲಿ ಕೂಡ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಜಗತ್ತಿನ ಮೂಲೆಮೂಲೆಯಿಂದ ಬಂದು ಜನ ಇಲ್ಲಿ ನೆಲೆಸಿದ್ದಾರೆ. ಅವರಿಗೆ ಗುಣಮಟ್ಟದ ಹಾಲಿನ ಅಗತ್ಯವಿದೆ ಎಂದರು.
ಕರ್ನಾಟಕದಿಂದ 2,500 ಕಿ.ಮೀ ದೂರ ಇರುವ ನವದೆಹಲಿಗೆ ನಂದಿನಿ ಹಾಲು ಸರಬರಾಜು ಮಾಡಲು ಸುಮಾರು 54 ಗಂಟೆ ಸಮಯ ಬೇಕಾಗುತ್ತದೆ. ಸುಮಾರು ಎರಡೂವರೆ ದಿನಗಳವರೆಗೆ ಹಾಲು ಪೂರೈಕೆ ಮಾಡುವಾಗ ಗುಣಮಟ್ಟದ ಬಗ್ಗೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುಜರಾತ್ ಬಳಿಕ ಹೈನುಗಾರಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ರೈತರಿಗೆ ಸರ್ಕಾರದಿಂದ ಹಣ ಪಾವತಿಯಾಗುತ್ತಿದೆ. ಗುಜರಾತ್‌ನ ಅಮುಲ್ ಸಂಸ್ಥೆ ಪ್ರತಿದಿನ ಅತಿ ಹೆಚ್ಚು ಹಾಲು ಉತ್ಪಾದಿಸುತ್ತಿದೆ. ನಾವು ಗುಜರಾತ್ ಸಂಸ್ಥೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲದೆ ಇರಬಹುದು. ಆದರೆ ಪೈಪೋಟಿ ನೀಡಲು ಅವಕಾಶವಿದೆ ಎಂದು ಸಿದ್ದರಾಮಯ್ಯ ಹೇಳಿದರು.
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲೂ ಲಭ್ಯವಿದೆ. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಗಣನೀಯ ಏರಿಕೆ ಕಂಡಿದ್ದು, ಮಾರುಕಟ್ಟೆ ವಿಸ್ತರಿಸುವ ಸಲುವಾಗಿ ನಮ್ಮ ನಂದಿನಿ ಹಾಲು ಮತ್ತು ಮೊಸರು ಈಗ ದೆಹಲಿಗೆ ಕಾಲಿಟ್ಟಿದೆ ಎಂದರು.
ಕೆಎಂಎಫ್ ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ತನ್ನ ಮಾರಾಟ ಕೇಂದ್ರಗಳನ್ನು ಹೊಂದಿದೆ. ಕನ್ನಡದ ರೈತರ ಶ್ರಮದ ಸಂಸ್ಥೆಯೊಂದು ಕನ್ನಡತನವನ್ನು ಉಳಿಸಿಕೊಂಡು ವಿಶ್ವವ್ಯಾಪಿಯಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.












Click it and Unblock the Notifications