ಮೃತ 20 ನೀಟ್ ವಿದ್ಯಾರ್ಥಿಗಳ ನ್ಯಾಯಕ್ಕೆ ಹೋರಾಡಿದ ಸಿಜೆಪಿ, ಗೆದ್ದ ಖುಷಿಯಲ್ಲಿ ಪಾರ್ಟಿ ಬೇಕಿತ್ತಾ?
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹುಟ್ಟಿಕೊಂಡಾಗಿನಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಹೋರಾಟ, ಕೇಂದ್ರ ಸಚಿವರ ರಾಜೀನಾಮೆವರೆಗೆ ಸಾಕಷ್ಟು ಸದ್ದು ಮಾಡಿತ್ತು. ದೇಶಾದ್ಯಂತ ಅಲೆ ತನ್ನದೇ ಆದ ರೀತಿಯಲ್ಲಿ ಅಲೆ ಎಬ್ಬಿಸಿದ ಈ ಜೆನ್‌ಜೀ ಹೋರಾಟವು ತಾರ್ಕಿಕ ಅಂತ್ಯ ಕಾಣುತ್ತಿದ್ದಂತೆ, ಸಿಜೆಪಿ ಸದಸ್ಯರು ಪಾರ್ಟಿ ಮಾಡಿದ್ದಾರೆ. ಅದರ ವಿಡಿಯೋ ವೈರಲ್ ಆಗುತ್ತಿದ್ದಂತೆ 20 ನೀಟ್ ವಿದ್ಯಾರ್ಥಿಗಳ ಸಾವಿನ ಶೋಕದಲ್ಲಿ ಇದೆಲ್ಲ ಬೇಕಿತ್ತಾ? ಎಂಬ ವಿರೋಧಗಳು ಸಾರ್ವಜನಿಕವಾಗಿ ವ್ಯಕ್ತವಾಗಿವೆ.
ಹೌದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ಕಾಕ್ರೋಚ್ ಜನತಾ ಪಾರ್ಟಿ ಕಳೆದ ಭಾನುವಾರ ಸಂಭ್ರಮದ ಪಾರ್ಟಿ ನಡೆಸಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಿಜೆಪಿ ನಾಯಕರು ಸೇರಿದಂತೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜೆನ್‌ಜೀಗಳು ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಆಕ್ಷೇಪ ಎತ್ತಿದ್ದಾರೆ.

ನೀಟ್ ಪರೀಕ್ಷೆ ರದ್ದತಿ, ಅಕ್ರಮದ ಹೊಣೆ ಹೊರಬೇಕು, ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕು ಸೇರಿದಂತೆ ಕೆಲವು ಬೇಡಿಕೆಗಳಿಗೆ ಆಗ್ರಹಿಸಿ, ಕೇಂದ್ರದ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ನೀಟ್ ರದ್ದತಿ ನೋಂದು 20 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅವರಿಗೋಸ್ಕರ ಪ್ರತಿಭಟನೆ ನಡೆಸಿದೆವು ಎಂದು ಹೇಳಿಕೊಳ್ಳುವ ಸಿಜೆಪಿಯಿಂದ ಈ ಪಾರ್ಟಿ ನಡೆದಿದ್ದು ಎಷ್ಟು ಸರಿ? ಎಂದು ಕೆಲವರು ಕಿಡಿ ಕಾರಿದ್ದಾರೆ. ಇದಕ್ಕೆ ಸಿಜೆಪಿ ಸ್ಪಷ್ಟನೆ ಸಹ ನೀಡಿದೆ.
ಸಿಜೆಪಿ ದ್ವಂದ್ವ ಪ್ರದರ್ಶನ
'ಸ್ಟಾರ್ ಹೋಟೆಲ್‌ನಲ್ಲಿ ಸಿಜೆಪಿ ಪಾರ್ಟಿ ನಡೆಸಿ ಕುಣಿದು ಕುಪ್ಪಳಿಸಿದೆ, ಕಾಕ್ರೋಚ್ ಜನತಾ ಪಾರ್ಟಿ ದ್ವಂದ್ವ ಪ್ರದರ್ಶಿಸುತ್ತಿದೆ' ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ ಅವರು ದೂರಿದ್ದಾರೆ. 'ಜಿರಳೆ ಪಕ್ಷದ ವರ್ತನೆ ಅಸಹ್ಯಕಾರಿ' ಎಂದು ಸಂಸದೆ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದಾರೆ.
ಸಿಜೆಪಿ ಕೊಟ್ಟ ಸ್ಪಷ್ಟನೆ ಏನು?
ಆದರೆ ಪಾರ್ಟಿ ಕುರಿತು ಸಿಜೆಪಿ ಸ್ಪಷ್ಟನೆ ನೀಡಿದೆ. ಇಂದಿನ ಪಾರ್ಟಿ ಕೇವಲ ಪಾರ್ಟಿ ಅಲ್ಲ. ಇದು 150-200 ಜನ ಸ್ವಯಂ ಸೇವಕರಿಗೆ ಧನ್ವಯಾದ ಹೇಳುವ ಸಭೆಯಾಗಿತ್ತು. ನಾಯಕರು ಪ್ರತಿಭಟನಾಕಾರರಿಗೆ ಈಗಲೂ ಸಹಾಯ ಮಾಡುತ್ತಿದ್ದಾರೆ. ಯಾವುದೇ ಜವಾಬ್ದಾರಿಯಿಂದ ನಾವು ಹಿಂದೆ ಸರಿಯಲ್ಲ. ಅಲ್ಲದೇ ಇದು ಜೆನ್‌ಜಿಗಳ ಭಾಷೆ. ಅಂಕಲ್ ಆಂಟಿಗಳು ಬೇಕಾದ್ರೆ ಈ ಬಗ್ಗೆ ದೂರಬಹುದು ಎಂದು ಬಿಜೆಪಿಗೆ ವ್ಯಂಗ್ಯವಾಗಿ ತಿರುಗೇಟು ನೀಡಿದೆ.
ಸಿಜೆಪಿ ನಿಧಿಗೆ 1ಕೋಟಿ ರೂ ಹಣ, ಕಾನೂನು ನೆರವು
ನೀಟ್ ವಿದ್ಯಾರ್ಥಿಗಳ ಪರ ಹೋರಾಟದಲ್ಲಿ ದೇಶದ ಗಮನ ಸೆಳೆದ ಸಿಜೆಪಿಯನ್ನು ಹಿರಿಯ ವಕೀಲ, ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರು ಬೆಂಬಲಿಸಿದ್ದಾರೆ. ಸಿಜೆಪಿ ಸ್ಥಾಪಿತ ನಿಧಿಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಲಾಗುವುದು. ಜೊತೆಗೆ ಸಿಜೆಪಿಗೆ ಕಾನೂನು ನೆರವು ನೀಡುವುದಾಗಿ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಪ್ರತಿಭಟನಾಕಾರರಿಗೆ ಒಂದಷ್ಟು ಭರವಸೆ ನೀಡಿದ ಬೆನ್ನಲ್ಲೆ ಕೆಲವು ವಾರಗಳ ಸಿಜೆಪಿ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆ ಅಂತ್ಯ ಕಂಡಿದೆ. ಆದರೆ ಅನೇಕ ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಕಾನೂನು ನೆರವು ನೀಡುವುದಾಗಿ ನೆನ್ನೆ ಕಪಿಲ್ ಸಿಬಲ್ ಅವರು ಸೋಮವಾರ ಘೋಷಿಸಿದ್ದಾರೆ.


Click it and Unblock the Notifications
