ECI ವಿರುದ್ಧ CJP ಬಿಗ್ ಮೂವ್; 2025ರ ಮತದಾರರ ಪಟ್ಟಿ ಮರುಸ್ಥಾಪನೆ ಸೇರಿ ದೀಪ್ಕೆ ಇಟ್ಟ ಪ್ರಮುಖ ಬೇಡಿಕೆಗಳಿವು!
ನವದೆಹಲಿ: ಭಾರತೀಯ ಚುನಾವಣೆ ಆಯೋಗದ ಮುಖ್ಯ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರು, ಭಾರತ ಪ್ರಜಾಪ್ರಭುತ್ವದ ಅತೀ ದೊಡ್ಡ ದೇಶವಿರೋಧಿಯಾಗಿದ್ದಾರೆ. ಜ್ಞಾನೇಶ್ ಕುಮಾರ್ ಮತ್ತು ಅವರಿಗೆ ನಿರ್ದೇಶನ ನೀಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ. ಮುಂದಿನ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟಿದ್ದಾರೆ. ಜೊತೆಗೆ ರಾಜಕೀಯ ವಿಚಾರವಾಗಿಯು ಒಂದಷ್ಟು ಮಾಹಿತಿಗಳನ್ನು ಸಿಜೆಪಿ ಸದಸ್ಯರು ಹಂಚಿಕೊಂಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಆಡಳಿತ, ನೀತಿ, ನಿರ್ಧಾರಗಳು, ಮತದಾರರ ಪಟ್ಟಿ ಪರಷ್ಕರಣೆ ಸೇರಿ ಹಲವು ವಿಷಯಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಭಿಜೀತ್ ದೀಪ್ಕೆ ಸುದ್ದಿಗೋಷ್ಠಿ ನಡೆಸಿದರು. ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದ ನಂತರ ಹಲವು ರಾಜ್ಯಗಳಲ್ಲಿ ಬಿಜೆಪಿಯ ಮತಗಳ ಪ್ರಮಾಣ ಹೆಚ್ಚಿದೆ ಎಂದು ಸಿಜೆಪಿ ಆರೋಪಿಸಿದೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು. ಇಲ್ಲವಾದರೆ ದೇಶವ್ಯಾಪಿ ಪ್ರತಿಭಟನೆ ಮಾಡಲಾಗುವುದು ಎಂದರು.

2025ರ ಮತದಾರರ ಪಟ್ಟಿ ಪುನಃ ಸ್ಥಾಪಿಸಿ
ಆಯೋಗದ ಆಡಳಿತ ಏಕಪಕ್ಷೀಯವಾಗಿದೆ. ಆದ್ದರಿಂದ ಮುಂಬರುವ ಎಲ್ಲಾ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಸ್ಥಗಿತಗೊಳಿಸಬೇಕು. SIR 2026 ಪರಿಗಣಿಸದೇ 2025ರ ಮತದಾರರ ಪಟ್ಟಿ ಮುಂದುವರಿಸಬೇಕು. ಮುಖ್ಯವಾಗಿ SIRಗೆ ಸಂಬಂಧಿಸದಿಂತೆ ಎಲ್ಲಾ ಫೈಲ್‌ಗಳನ್ನು ಚುನಾವಣಾ ಆಯೋಗದಿಂದ ಪಡೆದು ಸುಪ್ರೀಂ ಕೋರ್ಟ್‌ನ ವಶಕ್ಕೆ ನೀಡಬೇಕು ಎಂದು ಹೇಳಿದ್ದಾರೆ.
ಬಿಜೆಪಿಗೆ ಎಲ್ಲೆಲ್ಲಿ ಮತಗಳು ಬರುತ್ತಿಲ್ಲವೋ ಅಲ್ಲಿ ಮತಗಳನ್ನು ಪಡೆಯಲು ಈ ಜ್ಞಾನೇಶ್ ಕುಮಾರ್ ಶ್ರಮಿಸಿದ್ದಾರೆ. ಅವರ ಪರ ಕೆಲಸ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯಂತೆ ಜ್ಞಾನೇಶ್ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದರು. ಇವರೆಲ್ಲರ ವಿರುದ್ಧ ದೂರು ದಾಖಲಿಸುವ ಚಿಂತನೆ ಇದೆ. ಇದೆಲ್ಲ ದುರಾಡಳಿತ ಅಂತ್ಯವಾಗಬೇಕು. ಇಲ್ಲವಾದರೆ ಬೀದಿಗಿಳಿಯುತ್ತೇವೆ ಎಂದು ಎಚ್ಚರಿಸಿದರು.
ಸಿಜೆಪಿ ಸಹ ಸಂಚಾಲಕ ಅಶುತೋಷ್ ರಾಂಕಾ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಆಡಳಿತದಿಂದ ಜನರಿಗೆ ನಂಬಿಕೆ ಕಡಿಮೆ ಆಗಿದೆ. ದುರಾಡಳಿತ ವಿರುದ್ಧ ಬೀದಿಗಿಳಿಯುವ ಅವಶ್ಯಕತೆಯಿದೆ. ಮುಂದಿನ ಪ್ರತಿಭಟನೆಗಳಿಗೆ ಕೈ ಜೋಡಿಸುವಂತೆ ದೇಶದ ಜೆನ್ ಜೀ ಹಾಗೂ ಸಾಮಾಜಿಕ ಸಂಘಟನೆಗಳಿಗೆ ಅವರು ಕರೆ ನೀಡಿದರು.
ರಾಜಕೀಯ ಪಕ್ಷಗಳ ಜತೆ ಸಂಬಂಧ ಇಲ್ಲ: ಸಿಜೆಪಿ ದಾಸ್
ಕಾಕ್ರೋಚ್ ಜನತಾ ಪಾರ್ಟಿ'ಯ ಸಹ-ಸಂಯೋಜಕ ಸೌರವ್ ದಾಸ್ ಅವರು ಮಾತನಾಡಿ, ಚುನಾವಣೆ ಆಯೋಗದಿಂದ ದೇಶದ ಯುವಜನತೆಯ ವಿರುದ್ಧ ದೊಡ್ಡ ಪಿತೂರಿ ನಡೆಯುತ್ತಿದ್ದಂತಿದೆ. ಪ್ರಜೆಗಳಾದ ನಾವು ಇದೆಲ್ಲವನ್ನು ಸಹಿಸಿಕೊಳ್ಳದೇ ಖಮಡಿಸಬೇಕು. ನಮಗೆ ವಿರೋಧ ಪಕ್ಷದೊಂದಿಗಾಗಲಿ ಅಥವಾ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ ಅಥವಾ ಟಿಎಂಸಿ (TMC) ಯಂತಹ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ. ಇದು ಯಾವುದೇ ಪಕ್ಷಗಳಿಗೆ ಸಂಬಂಧಿಸಿದ ವಿಷಯಗಳಲ್ಲ. ಇದೇ ದೇಶದ ಭವಿಷ್ಯ, ಯುವಜನತೆಗೆ ಸಂಬಂಧಿಸಿದ ವಿಷಯಗಳು ಎಂದರು.
ಚುನಾವಣಾ ಆಯೋಗಕ್ಕೆ ಸಿಜಿಪಿ 3 ಬೇಡಿಕೆ
ಸಿಜಿಎಪಿ ಮೂರು ಬೇಡಿಕೆ ಇಟ್ಟಿದೆ. 1) ಸಿಇಸಿ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು. ಅವರ ವಿರುದ್ಧ ತಕ್ಷಣವೇ ಕ್ರಿಮಿನಲ್ ಕ್ರಮ ಜರುಗಿಸಬೇಕು ಹಾಗೂ ಜ್ಞಾನೇಶ್ ಕುಮಾರ್ ಅವರಿಗೆ ಆದೇಶ ನೀಡಿದವರು ಯಾರು? ಅವರಿಗೆ ಆದೇಶ ನೀಡಿದವರು ಯಾರು? ಎಂಬುದು ಬಹಿರಂಗವಾಗಬೇಕು.
2) ಮುಂಬರುವ ಎಲ್ಲಾ ಚುನಾವಣೆಗಳನ್ನು ನಡೆಸದೇ ತಕ್ಷಣವೇ ತಡೆಯಬೇಕು. SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವುದು. ಜನವರಿ 2025ರ ಮತದಾರರ ಪಟ್ಟಿಯನ್ನು ಮರುಸ್ಥಾಪಿಸಬೇಕು. ವಿಶ್ವಾಸಾರ್ಹ ಸ್ವತಂತ್ರ ತನಿಖಾ ಆಯೋಗ ರಚಿಸಬೇಕು. ಎಸ್‌ಐಆರ್‌ಗೆ ಸಂಬಂಧಿಸಿದ ಎಲ್ಲಾ ನಿರ್ಧಾರ ಪ್ರಕ್ರಿಯೆ ಪರಿಶೀಲಿಸಬೇಕು. ಸುಪ್ರೀಂ ಕೋರ್ಟ್ ಕೂಡ ಸಮಾನ ಹೊಣೆಗಾರಿಕೆಯೊಂದಿಗೆ SIR ಎಲ್ಲಾ ಕಡತಗಳು ವಶಕ್ಕೆ ಪಡೆಯಬೇಕು. ಆಗ ಕಡತಗಳಿಗೆ ಬೆಂಕಿಗೆ ಆಹುತಿ ಆಯ್ತು, ಹಾನಿ ಆಯ್ತು ಎಂದು ಹೇಳುವ ಸಂಭವ ಬರುವುದಿಲ್ಲ ಎಂದು ಕೋರ್ಟ್‌ಗೆ ಒತ್ತಾಯಿಸುತ್ತೇವೆ ಎಂದರು.
3) ಕೊನೆಯದಾಗಿ ಭಾರತದ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ 2023ರ ಕಾನೂನನ್ನು ರದ್ದುಗೊಳಿಸಬೇಕು. ನಾಗರಿಕ ಸಮಾಜದ ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಜೊತೆಗೆ ಸಾರ್ವಜನಿಕ ವಿಶ್ವಾಸ ಮೂಡಿಸುವ ಹೊಸ ಕಾನೂನನ್ನು ದೇಶದಲ್ಲಿ ಜಾರಿಗೊಳಿಸಬೇಕು ಎಂದು ದಾಸ್ ಬೇಡಿಕೆ ಇಟ್ಟಿದ್ದಾರೆ. ಇವುಗಳ ಈಡೇರದಿದ್ದರೆ ದೇಶವ್ಯಾಪಿ ಬೃಹತ್ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.


Click it and Unblock the Notifications
