ನರೇಂದ್ರ ಮೋದಿಜೀ.. ಅಟ್ಟಕ್ಕೇರಿಸಿದ್ದ ಜನ ತಳ್ ಬಿಟ್ಟಾರು!

By: ಬಾಲರಾಜ್ ತಂತ್ರಿ
Subscribe to Oneindia Kannada

ಎಂಟನೇ ತಾರೀಕು ರಾತ್ರಿ ಎಂಟು ಗಂಟೆಗೆ ನೋಟು ನಿಷೇಧದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಘೋಷಣೆ ಮಾಡಿದ ನಂತರದ 2-3ದಿನ ಎಲ್ಲೆಲ್ಲೂ ಮೋದಿ ತೆಗೆದುಕೊಂಡ ನಿರ್ಧಾರದ ಬಗ್ಗೆಯೇ ಮಾತು..ಹೊಗಳಿಕೆ..

ಕಷ್ಟವಾದರೂ ಪರವಾಗಿಲ್ಲ, ದೇಶಕ್ಕೆ ಒಳ್ಳೆದಾಗುವುದಾದರೆ, ಕಪ್ಪುಹಣ ಹೊರಬರುವ ಹಾಗಿದ್ದರೆ, ಉಗ್ರ ಚಟುವಟಿಕೆಗೆ ಕಡಿವಾಣ ಬೀಳುವುದಾದರೆ ನಾವು ಒಂದೆರಡು ದಿನ ಅಡ್ಜಸ್ಟ್ ಮಾಡಿಕೊಳ್ಳಲೇಬೇಕು ಎನ್ನುತ್ತಿದ್ದವರ ರಾಗತಾಳ ಈಗ ಬೇರೆ ಸ್ವರಬರಲಾರಂಭಿಸಿದೆ.

ಇದೊಂದು ಕ್ರಾಂತಿಕಾರಿ ನಿರ್ಧಾರ ಎನ್ನುತ್ತಿದ್ದವರು, this is a good decision but poor implementation ಅನ್ನುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸಾರ್ವಜನಿಕರು ನಿಧಾನವಾಗಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ( ಮೋದಿ ದೊಡ್ಡ ಕೆಲಸಕ್ಕೆ ಪುತ್ತೂರಿನ ಸಾಧಿಕ್ ಸಣ್ಣ ಸಹಕಾರ)

Citizens plea to PM Narendra Modi to bring back normalcy in Bank and ATM functions

ನೋಟು ನಿಷೇಧಗೊಳಿಸಿ ಒಂಬತ್ತು ದಿನವಾಗುತ್ತಾ ಬಂದರೂ, ಶನಿವಾರ, ಭಾನುವಾರ ಸತತವಾಗಿ ಬ್ಯಾಂಕ್ ಕೆಲಸ ನಿರ್ವಹಿಸಿದರೂ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಿಸುತ್ತಿಲ್ಲ. ಬಹುತೇಕ ಎಟಿಎಂಗಳಿಗೆ 9ದಿನದ ಹಿಂದೆ ತಗಲಾಗಿದ್ದ ಔಟ್ ಆಫ್ ಆರ್ಡರ್ ಬೋರ್ಡ್ ಇನ್ನೂ ಹಾಗೇ ಇದೆ.

ಒಂದು ವೇಳೆ ಎಲ್ಲೋ ಅಲ್ಲಲ್ಲಿ ಎಟಿಎಂಗಳು ತೆರೆದಿದ್ದರೂ ಒಬ್ಬರ ಕೈಯಲ್ಲಿ ನಾಲ್ಕು, ಐದು ಕಾರ್ಡುಗಳು. ನೂರು ರೂಪಾಯಿ ನೋಟುಗಳನ್ನೇ ಎಟಿಎಂ ಯಂತ್ರದಲ್ಲಿ ತುಂಬಿಸುವುದರಿಂದ ನಾಲ್ಕೈದು ಲಕ್ಷದ ಮೇಲೆ ದುಡ್ಡು ಬ್ಯಾಂಕ್ ನವರು ಫೀಡ್ ಮಾಡಲಾಗುತ್ತಿಲ್ಲ. ಹತ್ತು, ಇಪ್ಪತ್ತು ಜನರಿಗೇ ದುಡ್ಡು ಖಾಲಿ.. ಕ್ಯೂನಲ್ಲಿ ದುಡ್ಡು ಸಿಗದೇ ನಿಂತವರ ಹಿಡಿಶಾಪ.

ಎರಡು ಸಾವಿರ ಮತ್ತು ಐನೂರು ರೂಪಾಯಿಗಳಿಗೆ ಹೊಂದುವಂತೆ ಎಟಿಎಂ ಮೆಷಿನ್ ಗಳು ಇನ್ನೂ ಪ್ರೊಗ್ರಾಂ ಆಗಿಲ್ಲ. ಕೌಂಟರ್ ನಲ್ಲಿನ ಗ್ರಾಹಕರಿಗೆ ಹೆಚ್ಚಿನ ಪ್ರಾಶಸ್ತ್ಯ ಬ್ಯಾಂಕ್ ನವರು ನೀಡುತ್ತಿರುವುದರಿಂದ, ಎಟಿಎಂ ವ್ಯವಸ್ಥೆ ಸದ್ಯಕ್ಕೆ ಸರಿದಾರಿಗೆ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ.

ತಾವು ಕಷ್ಟಪಟ್ಟು ಕೂಡಿಟ್ಟ ದುಡ್ಡನ್ನು ತೆಗೆದುಕೊಳ್ಳಲು ಸಾಲ ತೆಗೆದುಕೊಳ್ಳವವರ ಹಾಗೇ ಅಥವಾ ದೇಣಿಗೆ ಸಂಗ್ರಹಿಸುವವರ ಹಾಗೇ ಕ್ಯೂನಲ್ಲಿ ನಿಂತು ತೆಗೆದುಕೊಳ್ಳಬೇಕೇ, ಇಡೀ ದಿನ ಬ್ಯಾಂಕ್ ಮುಂದೆ ಕೂರಲು ಬೇರೇನೂ ಕೆಲಸವಿಲ್ಲವೇ ಎನ್ನುವವರ ಸಂಖ್ಯೆ ಈಗ ಹತ್ತಕ್ಕೆ ಎರಡರಿಂದ ಎಂಟಕ್ಕೇರುತ್ತಿದೆ.

ಬಹುತೇಕ ಜನ ಮೋದಿ ತೆಗೆದುಕೊಂಡ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸುತ್ತಿದ್ದರೂ, ಯಾವುದೇ ಪೂರ್ವತಯಾರಿ ಇಲ್ಲದೇ ನೋಟು ನಿಷೇಧಗೊಳಿಸಿ ಜನಸಾಮಾನ್ಯರ ಜೀವನವನ್ನು ಹದೆಗೆಡಿಸಿದ್ದಕ್ಕಾಗಿ ತೀವ್ರ ಬೇಸರವೂವಿದೆ. ಜನರ ಬಳಿ ದುಡ್ಡಿಲ್ಲ, ದುಡ್ಡು ಇದ್ದರೂ ಚೇಂಜ್ ಕೊಡುವವರಿಲ್ಲದೇ ಸಾರ್ವಜನಿಕರ ಜೊತೆ ದೈನಂದಿನ ವ್ಯಾಪಾರವನ್ನೇ ನಂಬಿಕೊಂಡ ರಸ್ತೆಬದಿ ವ್ಯಾಪಾರಿಗಳ ಪಾಡು ಹೇಳತೀರದು.

ಸರಕಾರ ಒಂದು ದಾರಿ ಹಿಡಿದರೆ, ಕಳ್ಳಹಣ ಹೊಂದಿರುವವರು ಬೇರೆನೇ ದಾರಿ ಹಿಡಿಯುತ್ತಾರೆ ಎನ್ನುವುದಕ್ಕೆ ನೋಟು ನಿಷೇಧದ ನಂತರದ ವಿದ್ಯಮಾನಗಳು ಮತ್ತೊಮ್ಮೆ ಸಾಕ್ಷಿಯಾಗಿದೆ. ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಧನಿಕರ ಲಕ್ಷ ಲಕ್ಷ ಕಪ್ಪುಹಣ ಕುಂತಲ್ಲೇ ವೈಟ್ ಆಗ್ಬಿಟ್ಟಿದೆ. ಕ್ಯೂನಲ್ಲಿ ನಿಂತ ಬಡವ/ಮಧ್ಯಮವರ್ಗದವ ಬಿಸಿಲಲ್ಲಿ ನಿಂತಿದ್ದೇ ಸಾಧನೆಯಾಗಿದೆ. (ಮೋದಿ ನಡೆಗೆ ಜೈ ಅಂದಿದ್ದಾರೆ ದೇಶದ ಶೇ 82ರಷ್ಟು ಜನ)

ಎಲ್ಲದಕ್ಕೂ ಒಂದು ತಾಳ್ಮೆ ಅನ್ನೋದು ಇರುತ್ತೆ, ಎಷ್ಟು ದಿನಾಂತ ಜನಸಾಮನ್ಯ ತೊಂದರೆ ಅನುಭವಿಸಲು ಸಿದ್ದನಿರುತ್ತಾನೆ. ಈ ಮಧ್ಯೆ, ನೋಟು ಬದಲಾವಣೆ ಮಿತಿಯನ್ನು ಇಳಿಸಲಾಗಿದೆ. ಕೈಗೆ ಶಾಹಿ ಹಾಕುವ ಪದ್ದತಿ ಜಾರಿಗೊಳಿಸಿದ ನಂತರ ಬ್ಯಾಂಕ್ ನಲ್ಲಿ ನೋಟು ಬದಲಾವಣೆ ಮಾಡುವ ಕ್ಯೂ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿದೆ ಎನ್ನುವುದು ಬೇರೇನೇ ಅರ್ಥ ಬರುವಂತಹ ವಿಚಾರ.

ಈಗಾಗಲೇ ತಡವಾಗಿ ಹೋಗಿದೆ, ಇನ್ನಾದರೂ ತಡಮಾಡದೇ ಕೇಂದ್ರ ಸರಕಾರ ಈ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಾಗಿದೆ. ನಮ್ಮ ಕಚೇರಿಯ ಬಳಿಯಿರುವ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಕ್ಯೂನಲ್ಲಿ ನಿಂತಿದ್ದ ಮಧ್ಯವಯಸ್ಕರೊಬ್ಬರನ್ನು ಏನ್ ಸಾರ್.. ಎಂದು ಮಾತಾಡಿಸಿದಾಗ.. ಅವರು ಹೇಳಿದ್ದು " ನೋಟಿನ ಸಮಸ್ಯೆಯನ್ನು ಮೋದಿ ಆದಷ್ಟು ಬೇಗ ಸರಿಮಾಡಲಿ.. ಇಲ್ಲಾಂದ್ರೆ ಮೊನ್ನೆ ಅಟ್ಟಕ್ಕೇರಿಸಿದ್ದ ಜನ.. ಅಷ್ಟೇ ವೇಗದಲ್ಲಿ ಕೆಳಗಿಳಿಸಲಿದ್ದಾರೆ"..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Citizens plea to Prime Minister Narendra Modi to bring back normalcy immediately in Bank and ATM functions.
Please Wait while comments are loading...