ಅಭಿವೃದ್ಧಿಯ ಹೊರತಾಗಿಯೂ ಜನರು ಹಸಿವಿನಿಂದ ಸಾಯುತ್ತಿದ್ದಾರೆ- ಸುಪ್ರೀಂ ಕೋರ್ಟ್
ನವದೆಹಲಿ, ಜುಲೈ 21: ನಮ್ಮ ಅಭಿವೃದ್ಧಿಯ ಹೊರತಾಗಿಯೂ ನಾಗರಿಕರು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಅತಿ ಹೆಚ್ಚು ವಲಸೆ ಕಾರ್ಮಿಕರಿಗೆ ಪಡಿತರವನ್ನು ನೀಡುವುದನ್ನು ಖಚಿತಪಡಿಸಿಕೊಳ್ಳವ ವಿಧಾನಗಳ ಕುರಿತು ಕೆಲಸ ಮಾಡಲು ಗುರುವಾರ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಷಾ ಮತ್ತು ಬಿ ವಿ ನಾಗರತ್ನ ಅವರ ಸುಪ್ರೀಂ ಕೋರ್ಟ್ ಪೀಠವು 2020 ರ ಮೇ ತಿಂಗಳಲ್ಲಿ ನಡೆದ ವಲಸೆ ಕಾರ್ಮಿಕರ ಸಮಸ್ಯೆಗಳು ಮತ್ತು ನೋವುಗಳ ಬಗೆಗಿನ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ.
"ಪ್ರತಿ ರಾಜ್ಯದಲ್ಲಿ ಆಹಾರ ಮತ್ತು ನಾಗರಿಕ ಸೇವೆಗಳ ಇಲಾಖೆಯು ಎಷ್ಟು ಪಡಿತರ ಚೀಟಿಗಳನ್ನು ನೋಂದಾಯಿಸಬೇಕು ಎಂಬ ಗುರಿಯನ್ನು ಹೊಂದಿರಬೇಕು. ಪ್ರತಿ ರಾಜ್ಯವು ತನ್ನದೇ ಆದ ಮಾನದಂಡಗಳನ್ನು ಹೊಂದಿರುವುದರಿಂದ ಇದನ್ನು ಸ್ಥಳೀಯವಾಗಿ ಮಾಡಬೇಕು. ಇದಕ್ಕೆ ನಿಗದಿತ ಮಾನದಂಡ ಇರಬೇಕು' ಎಂದಿದೆ.

"ಭಾರತದಲ್ಲಿ ಯಾವುದೇ ನಾಗರಿಕರು ಹಸಿವಿನಿಂದ ಸಾಯಬಾರದು ಎಂಬುದು ಗುರಿಯಾಗಿದೆ. ದುರದೃಷ್ಟವಶಾತ್, ನಮ್ಮ ಅಭಿವೃದ್ಧಿಯ ಹೊರತಾಗಿಯೂ ನಾಗರಿರು ಹಸಿವಿನಿಂದ ಸಾಯುವುದು ನಡೆಯುತ್ತಿದೆ. ನಾಗರಿಕರು ಹಸಿವು ಮತ್ತು ಆಹಾರದ ಕೊರತೆಯಿಂದ ಸಾಯುತ್ತಿದ್ದಾರೆ, ಹಸಿವಾಗಬಾರದು ಎಂದು ಹಳ್ಳಿಗಳಲ್ಲಿ ಅವರು ತಮ್ಮ ಹೊಟ್ಟೆಯನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತಾರೆ. ಅದು ನನಗೆ ಗೊತ್ತು, ಅವರಿಗೆ ಊಟ ಸಿಗದ ಕಾರಣ ತಮ್ಮ ಹೊಟ್ಟೆಯನ್ನು ಸೀರೆ ಅಥವಾ ಇನ್ನಾವುದೋ ಬಟ್ಟೆಯಿಂದ ಕಟ್ಟಿಕೊಂಡು ನೀರು ಕುಡಿದು ಮಲಗುತ್ತಾರೆ" ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಹೇಳಿದರು.
ಈ ಪ್ರಕರಣ ಕುರಿತು ಕೆಲವು ಆದೇಶಗಳನ್ನು ನೀಡುವುದಾಗಿ ಮತ್ತು ಎರಡು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ವಿವಿಧ ಭಾಗಗಳಲ್ಲಿ ಕರ್ಫ್ಯೂ ಮತ್ತು ಲಾಕ್‌ಡೌನ್‌ಗಳಿಂದ ತೊಂದರೆ ಎದುರಿಸಿದ ವಲಸೆ ಕಾರ್ಮಿಕರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಅವರಿಗೆ ಆಹಾರ ಭದ್ರತೆ, ಹಣ ವರ್ಗಾವಣೆ ಮತ್ತು ಇತರ ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಬೇಕು ಎಂದು ಅಂಜಲಿ ಭಾರದ್ವಾಜ್, ಹರ್ಷ್ ಮಂದರ್, ಮತ್ತು ಜಗದೀಪ್ ಚೋಕರ್ ಎಂಬ ಮೂವರು ಕಾರ್ಯಕರ್ತರು ಉಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.












Click it and Unblock the Notifications