ಈ ವಾರದಲ್ಲೇ ಭಾರತಕ್ಕೆ ಬರಲಿದ್ದಾನೆ ಛೋಟಾ ರಾಜನ್
ಬೆಂಗಳೂರು, ಅಕ್ಟೋಬರ್ 27 : ಇಂಡೋನೇಷಿಯಾದ ಬಾಲಿ ದ್ವೀಪದಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ಛೋಟಾ ರಾಜನ್‌ಅನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗಳು ಆರಂಭವಾಗಿವೆ. ಮುಂಬೈ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ತಂಡ ವಾರಾಂತ್ಯದಲ್ಲಿ ರಾಜನ್‌ಅನ್ನು ಭಾರತಕ್ಕೆ ಕರೆತರಲಿದ್ದಾರೆ.
ರಾಜೇಂದ್ರ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್ ಅನ್ನು ಸುಮಾರು ಎರಡು ದಶಕಗಳ ನಂತರ ಬಂಧಿಸಲಾಗಿದೆ. ಆಸ್ಟ್ರೇಲಿಯನ್ ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಇಂಡೋನೇಷಿಯಾ ಪೊಲೀಸರು ಬಾಲಿ ದ್ವೀಪದಲ್ಲಿ ರಾಜನ್ ಅನ್ನು ಬಂಧಿಸಿದ್ದಾರೆ. [ಛೋಟಾ ರಾಜನ್ : ಡಾನ್ ಆಗಿದ್ದು ಹೇಗೆ?]

ರಾಜನ್‌ಅನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ಸಿಬಿಐ ಆರಂಭಿಸಿದೆ. ರಾಜನ್ ಮೇಲೆ ಮುಂಬೈಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆದ್ದರಿಂದ, ಮುಂಬೈ ಪೊಲೀಸರು ಸಿಬಿಐ ಅಧಿಕಾರಿಗಳೊಂದಿಗೆ ತೆರಳಿ ರಾಜನ್‌ಅನ್ನು ಕರೆತರಲಿದ್ದಾರೆ. [ಛೋಟಾ ರಾಜನ್ ಬಂಧನ]
ವಿಳಂಬ ಬೇಡ : ಛೋಟಾ ರಾಜನ್ ಹಸ್ತಾಂತರದ ವಿಚಾರದಲ್ಲಿ ವಿಳಂಬ ಧೋರಣೆ ಬೇಡ ಎಂದು ಇಂಡೋನೇಷಿಯಾ ಪೊಲೀಸರು ಸಿಬಿಐಗೆ ಸೂಚನೆ ನೀಡಿದ್ದಾರೆ. ಹಸ್ತಾಂತರ ಪ್ರಕ್ರಿಯೆಗೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಸಿಬಿಐ ಅಧಿಕಾರಿಗಳು ಮಾಡಿಕೊಳ್ಳುತ್ತಿದ್ದಾರೆ.
ಸಿಬಿಐ ಅಧಿಕಾರಿಗಳ ಜೊತೆ ಮುಂಬೈ ಪೊಲೀಸರು ಬಾಲಿ ದ್ವೀಪಕ್ಕೆ ತೆರಳಿ ಛೋಟಾ ರಾಜನ್ ಅನ್ನು ಕರೆತರಲಿದ್ದಾರೆ. ಭಾರತಕ್ಕೆ ಕರೆತಂದ ನಂತರ ರಾಜನ್‌ಅನ್ನು ಮುಂಬೈ ಜೈಲಿನಲ್ಲಿ ಇಡಲು ನಿರ್ಧರಿಸಲಾಗಿದೆ. ಮುಂಬೈನಲ್ಲಿ ರಾಜನ್ ವಿರುದ್ಧ ಬೆದರಿಕೆ ಕರೆ ಸೇರಿದಂತೆ ಹಲವು ಪ್ರಕರಣಗಳಿದ್ದು, ಪೊಲೀಸರು ಅವುಗಳ ಕುರಿತು ವಿಚಾರಣೆ ನಡೆಸಲಿದ್ದಾರೆ.
ಹಸ್ತಾಂತರದ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ರಾಜನ್‌ಅನ್ನು ಗರಿಷ್ಠ ಭದ್ರತೆಯ ಜೈಲಿನಲ್ಲಿಡಲು ಸಿದ್ಧತೆಗಳನ್ನು ಆರಂಭಿಸಲಾಗುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಛೋಟಾ ರಾಜನ್ ಮತ್ತು ಛೋಟಾ ಶಕೀಲ್ ಗ್ಯಾಂಗ್ ನಡುವೆ ವೈರತ್ವವಿದೆ. ಆದ್ದರಿಂದ ಛೋಟಾ ರಾಜನ್ ಹತ್ಯೆಗೆ ಪ್ರಯತ್ನ ನಡೆಸಬಹುದು ಎಂದು ಗರಿಷ್ಠ ಭದ್ರತೆ ಒದಗಿಸಲು ಪೊಲೀಸರು ತೀರ್ಮಾನಿಸಿದ್ದಾರೆ.












Click it and Unblock the Notifications