ಬಿಜೆಪಿ ಜೊತೆಗಿನ ಮೈತ್ರಿಗೂ ಮುನ್ನವೇ ಕಿರಿಕ್ ಶುರು ಮಾಡಿದ ಚಿರಾಗ್ ಪಾಸ್ವಾನ್: ಲೋಕಸಭೆ ಸ್ಥಾನಗಳಿಗೆ ಬೇಡಿಕೆ- ಎಷ್ಟು?
ಪಾಟ್ನಾ, ಜುಲೈ 17: ಬಿಜೆಪಿ ನೇತೃತ್ವದ ಎನ್‌ಡಿಎ ಸಭೆಯನ್ನು ನಾಳೆ ಕರೆಯಲಾಗಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಎಲ್‌ಜೆಪಿ (ರಾಮ್‌ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್‌ಗೆ ಆಹ್ವಾನ ನೀಡಿದ್ದಾರೆ. ಚಿರಾಗ್ ಪಾಸ್ವಾನ್ ಅವರು ಎನ್‌ಡಿಎಗೆ ಸೇರುವುದಕ್ಕೂ ಮುನ್ನವೇ ಕಿರಿಕ್ ಮಾಡಲು ಆರಂಭಿಸಿದ್ದಾರೆ. ಅವರು ಲೋಕಸಭೆ ಹಾಗೂ ರಾಜ್ಯಸಭೆ ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಅವರು ಬಿಹಾರದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದ ನಾಯಕರು. ಅವರ ಮರಣದ ಬಳಿಕೆ ಪುತ್ರ ಚಿರಾಗ್ ಪಾಸ್ವಾನ್ ಎಲ್‌ಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಕೆ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ದಟ್ಟವಾಗಿದೆ.

ಚಿರಾಗ್ ಪಾಸ್ವಾನ್ ಅವರನ್ನು ಎನ್‌ಡಿಎಗೆ ಸೇರಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಎರಡು ದಿನಗಳ ಹಿಂದೆ ಆಹ್ವಾನಿಸಿದ್ದಾರೆ. ಆದರೆ, ಚಿರಾಗ್ ಪಾಸ್ವಾನ್ ಅವರು ಹಲವು ಬೇಡಿಕೆಗಳನ್ನು ಇಟ್ಟಿರುವುದು ಬಿಜೆಪಿಗೆ ಕಿರಿಕಿರಿ ಉಂಟುಮಾಡಿದೆ.
ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬಿಹಾರದಲ್ಲಿ ಆರು ಲೋಕಸಭೆ ಹಾಗೂ ಒಂದು ರಾಜ್ಯಸಭೆ ಸ್ಥಾನಗಳನ್ನು ಬಿಟ್ಟುಕೊಡಬೇಕು. ಈ ಬೇಡಿಕೆಗೆ ಬಿಜೆಪಿ ಒಪ್ಪಿಕೊಳ್ಳಬೇಕು ಎಂದು ಚಿರಾಗ್ ಒತ್ತಾಯಿಸಿದ್ದಾರೆ.
ನಡ್ಡಾ ಅವರು ನೀಡಿದ ಆಮಂತ್ರಣ ಪತ್ರದಲ್ಲಿ ಎಲ್‌ಜೆಪಿ (ರಾಮ್ ವಿಲಾಸ್) ಪ್ರಮುಖ ಪಾಲುದಾರ ಎಂದು ಬಣ್ಣಿಸಿದ್ದಾರೆ. ಕೇಂದ್ರ ಗೃಹ ಸಚಿವ ನಿತ್ಯಾನಂದ ರೈ ಅವರು ಎಲ್‌ಜೆಪಿ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಚಿರಾಗ್ ಅವರನ್ನು ಎನ್‌ಡಿಎಗೆ ತರಲು ಬಿಜೆಪಿ ನಾಯಕರು ಶ್ರಮಿಸುತ್ತಿದ್ದಾರೆ ಎಂದು ನಡ್ಡಾ ತಿಳಿಸಿದ್ದಾರೆ.

ಚಿರಾಗ್ ಈಗಾಗಲೇ ಬಿಜೆಪಿ ನಾಯಕರ ಮುಂದೆ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಚಿರಾಗ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗುವುದು ಎಂಬ ಊಹಾಪೋಹಗಳು ಹರಡಿವೆ. ಆದರೆ, ಅಂತಿಮ ನಿರ್ಧಾರವನ್ನು ಬಿಜೆಪಿ ನಾಯಕರು ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳುತ್ತಾರೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜುಲೈ 18 ರಂದು ನವದೆಹಲಿಯಲ್ಲಿ ಎನ್‌ಡಿಎ ಸಭೆ ನಡೆಯಲಿದೆ.

ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ನೇತೃತ್ವದ ವಿಪಕ್ಷ ನಾಯಕರ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಸೇರಿದಂತೆ ಸಭೆಯಲ್ಲಿ ಹಲವು ನಾಯಕರು ಭಾಗಿಯಾಗಿದ್ದಾರೆ.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಾಯಕರನ್ನು ಬರಮಾಡಿಕೊಂಡಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯನವರು ನಾಯಕರಿಗೆ ಔತನ ಕೂಟವನ್ನು ಏರ್ಪಡಿಸಿದ್ದಾರೆ. ನಾಳೆ ನಡೆಯಲಿರುವ ಸಭೆಯಲ್ಲಿ ಮಹತ್ವದ ತೀರ್ಮಾನಗಳು ಆಗಲಿವೆ ಎಂದು ವರದಿಯಾಗಿದೆ.












Click it and Unblock the Notifications